ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕೋಡಿ ನಿವಾಸಿ, ಲೋಧಾ ಗ್ರೂಪ್‌ನ ಆಡಳಿತ ಹಾಗೂ ಮಾನವ ಸಂಪದ ವಿಭಾಗದ ಉಪಾಧ್ಯಕ್ಷರಾಗಿರುವ ಗಣೇಶ್ ಪೂಜಾರಿ ಅವರು ಫೋರ್ಬ್ಸ್ ಇಂಡಿಯಾ ಸಹಭಾಗಿತ್ವದಲ್ಲಿ ಪ್ರಕಟವಾದ ’ಗ್ರೇಟ್ ಪೀಪಲ್ ಮ್ಯಾನೇಜರ್ಸ್ ಸ್ಟಡಿ’ ಬ್ಯಾನರ್‌ನಡಿ ’ಗ್ರೇಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಟ್’ ಭಾರತದ100 ಶ್ರೇಷ್ಠ ವ್ಯವಸ್ಥಾಪಕರ ಪಟ್ಟಿಯಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ.
ಕೋಡಿಯ ದಿ. ಬಚ್ಚ ಪೂಜಾರಿ ಮತ್ತು ದಿ. ಕಮಲಾ ಪೂಜಾರ್ತಿ ಅವರ ಪುತ್ರ ಗಣೇಶ್ ಪೂಜಾರಿ, ಆರ್ಥಿಕ ಬಡತನದ ಕಾರಣದಿಂದ ಎಳವೆಯಲ್ಲಿಯೇ ಸಂಪಾದನೆಗೆ ತೆರಳಿ ಶಾಲೆಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗದೆ ಆ ಕಾರಣದಿಂದ ಕಲಿಕೆಯಲ್ಲಿ ಹಿಂದಿಲ್ಲದಿದ್ದರೂ 7 ವರ್ಷಗಳಲ್ಲಿ ಮುಗಿಸುವ ಪ್ರಾಥಮಿಕ ಶಿಕ್ಷಣಕ್ಕೆ 11 ವರ್ಷ ಬೇಕಾಯಿತು ಕೋಡಿಯ ಸೋನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದು ಬಳಿಕ ಹಾಜಿ ಕೆ. ಮೊಯ್ದೀನ್ ಬ್ಯಾರಿ ಹೈಸ್ಕೂಲ್‌ನಲ್ಲಿ ಶಿಕ್ಷಣ ಮುಂದುವರಿಸಿದರು. ಎಸೆಸೆಲ್ಸಿ ಬಳಿಕ ಮುಂಬಯಿಗೆ ಬಂದು ಹಗಲು ಹೊತ್ತು ಕೆಲಸ ಮಾಡಿಕೊಂಡು ರಾತ್ರಿ ಕಾಲೇಜಿನ ಮೂಲಕ ಪಿಯುಸಿಯನ್ನು ಮುಂಬಯಿಯ ಕನ್ನಡ ಭವನ ಜೂನಿಯರ್ ಕಾಲೇಜಿನಲ್ಲಿ ಸೈಂಟ್ ಕ್ಸೇವಿಯರ್ಸ್‌ನಲ್ಲಿ ಪದವಿ ಪೂರೈಸಿ ಎಂಬಿಎ ಸ್ನಾತಕೋತ್ತರ ಪದವಿಯನ್ನು ಸಿಂಬಯೋಸಿಸ್ ಇನ್ಸಿಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಕಲಿತು ಉದ್ಯೋಗಕ್ಕೆ ಸೇರಿದರು.
ಯಾವುದೇ ಸಂಸ್ಥೆಯಾಗಲಿ ಮತ್ತಾವುದಾಗಲಿ ಉತ್ತಮ ಸಹೋದ್ಯೋಗಿಗಳ ತಂಡ ಸಿಗದಿದ್ದರೆ ಉತ್ತಮ ವ್ಯವಸ್ಥಾಪಕನಾಗಲು ಸಾಧ್ಯವಿಲ್ಲ. ಹೂಡಿಕೆ ಮಾಡಿ ಎಲ್ಲ ಹಂತಗಳಲ್ಲಿ ತಂಡದೊಂದಿಗೆ ಹೊಂದಾಣಿಕೆಯಿದ್ದರೆ ಯಶಸ್ಸು ಸಾಧ್ಯ. ಸಾಮರ್ಥ್ಯ ಮತ್ತು ಕೆಲಸ ಮಾಡುವ ಕ್ಷೇತ್ರಗಳಲ್ಲಿ ಸದಾ ಕಲಿಯುತ್ತಿರಬೇಕು. ಕಲಿಕೆ ಮತ್ತು ಒಗ್ಗಟ್ಟು ಉತ್ಪಾದನೆ ಮತ್ತು ವ್ಯವಹಾರ ಹೆಚ್ಚಿಸಲು ಸಹಾಯ ಮಾಡುತ್ತದೆ. – ಗಣೇಶ್ ಪೂಜಾರಿ ಅಡ್ಮಿನಿಸ್ಟ್ರೇಶನ್ ಮತ್ತು ಹ್ಯೂಮನ್ ರೀಸೋರ್ಸ್ ಲೋಧಾ