ಹತ್ತು ಹಲವು ಸೌಲಭ್ಯಗಳೊಂದಿಗೆ ಉಚಿತ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ
ಕುಂದಾಪ್ರ ಡಾಟ್ ಕಾಂ ವರದಿ.
ಗಂಗೊಳ್ಳಿ: ಸರಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗಿ ಖಾಸಗಿ ಶಾಲೆಗಳತ್ತ ಮುಖಮಾಡುತ್ತಿರುವ ಕಾಲಘಟ್ಟದಲ್ಲಿ ಹಳೆ ವಿದ್ಯಾರ್ಥಿಗಳು ಮಾತ್ರ ತಾವು ಕಲಿತ ಸರಕಾರಿ ಶಾಲೆಗಳ ಉಳಿವಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ಸರಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ದೊರೆಯುವಂತೆ ಮಾಡುವುದರ ಜೊತೆಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಸತತವಾಗಿ ಶ್ರಮಿಸುತ್ತ ತಾವು ಕಲಿತ ತಮ್ಮೂರಿನ ಶಾಲೆಯ ಶ್ರೇಯಸ್ಸಿನಲ್ಲಿ ತೊಡಗಿಕೊಂಡಿದ್ದಾರೆ ಎಂಬುದು ಸರಕಾರಿ ಶಾಲೆಗಳ ಉಳಿವಿನ ಬಗೆಗೊಂದು ಆಶಾಭಾವನೆ ಮೂಡಿಸಿದೆ.
ಶತಮಾನ ಪೂರೈಸಿರುವ ಗಂಗೊಳ್ಳಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಇಂತಹದ್ದೊಂದು ಪ್ರಯತ್ನವನ್ನು ಕಳೆದ ಎರಡು ದಶಕಗಳ ಹಿಂದಿನಿಂದಲೇ ಆರಂಭಿಸಿಕೊಂಡು ಬಂದಿದ್ದು ಶಾಲೆಯ ಸರ್ವತೋಮುಖ ಏಳಿಗೆಯಲ್ಲಿ ಜೊತೆಯಾಗಿದ್ದಾರೆ. ಹಳೆ ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದಾಗಿ ಪ್ರಸ್ತುತ ವರ್ಷದಿಂದ ಶಾಲೆಗೆ ಮಕ್ಕಳ ದಾಖಲಾತಿಯೂ ಹೆಚ್ಚಿದೆ.
ಶತಮಾನ ಕಂಡ ಶಾಲೆ:
1895ರಲ್ಲಿ ದಿ. ಶಾಬುದ್ದೀನ್ ಅಬ್ದುರ್ರಹೀಮ್ ಹಾಗೂ ಶಾಬುದ್ದೀನ್ ಅಬ್ದುಲ್ ಖಾದಿರ್ ಸಾಹೇಬ್ ಅವರಿಂದ ಆರಂಭಗೊಂಡ ಶಾಲೆ ಹಿಂದೂಸ್ಥಾನಿ ಉರ್ದು ಬೋರ್ಡ್ ಆಗಿ ಕ್ರಮೇಣ ಸರಕಾರಿ ಉರ್ದು ಹಿರಿಯ ಶಾಲೆಯಾಗಿ ಮಾರ್ಪಾಡಾಯಿತು. 122 ವರ್ಷ ಹಳೆದಾದ ಶಾಲೆಯಲ್ಲಿ ಈವರೆಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ಹೋಗಿದ್ದಾರೆ. ಅಂತಹ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸರಕಾರ ಹಾಗೂ ಶಿಕ್ಷಕರೊಂದಿಗೆ ಜೊತೆಯಾಗಿ ನಿಂತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಹಳೆ ವಿದ್ಯಾರ್ಥಿ ಸಂಘದಿಂದ ವಿವಿಧ ಸೌಲಭ್ಯಗಳು:
ಸರಕಾರದ ಉಚಿತ ಶಿಕ್ಷಣ ಹಾಗೂ ಹಲವು ಯೋಜನೆಗಳ ಹೊರತಾಗಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕೆಂಬ ದೃಷ್ಟಿಯಿಂದ ಹಳೆ ವಿದ್ಯಾರ್ಥಿಗಳು ಹತ್ತಾರು ಸೌಕರ್ಯಗಳನ್ನು ಒದಗಿಸಿದ್ದಾರೆ. ಶಾಲೆಯಲ್ಲಿ ಎಲ್.ಕೆ.ಜಿ ಉ.ಕೆಜಿ ಶಿಕ್ಷಣ, ಗೌರವ ಶಿಕ್ಷಕರು, ವಾಹನದ ವ್ಯವಸ್ಥೆ, ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಹತ್ತ ಹಲವು ಯೋಜನೆಗಳನ್ನು ಹಾಕಿಕೊಂಡು ಎಲ್ಲವನ್ನೂ ಕಾರ್ಯರೂಪಕ್ಕಿಳಿಸಿದ್ದಾರೆ.
ಶಿಕ್ಷಣಕ್ಕಾಗಿ ಬರುವ ಪ್ರತಿ ಮಗುವಿಗೂ ಒಂದಿಷ್ಟೂ ಖರ್ಚಿಲ್ಲದೇ ಖಾಸಗಿ ಶಾಲೆಗಳಲ್ಲಿ ದೊರೆಯುವ ಶಿಕ್ಷಣ ಹಾಗೂ ಸೌಲಭ್ಯಗಳಿಗೆ ಸಮನಾಗಿ ಸರಕಾರಿ ಶಾಲೆಯಲ್ಲಿಯೂ ದೊರೆಯುವಂತೆ ಮಾಡುವ ಮೂಲಕ ಶಾಲೆಯ ಏಳಿಗೆಯಲ್ಲಿ ತೊಡಗಿಕೊಂಡಿದ್ದಾರೆ.
ಶಾಲೆ ಏಳಿಗೆಯಲ್ಲಿ ಜೊತೆಯಾಗಲು ಹಳೆ ವಿದ್ಯಾರ್ಥಿಗಳಿಗೆ ಕರೆ:
ಕಲಿತ ಶಾಲೆಯ ಉಳಿವಿಗೆ ಪಣತೊಟ್ಟು ನಿಂತಿರುವ ಗಂಗೊಳ್ಳಿ ಸರಕಾರಿ ಉರ್ದು ಶಾಲೆಯ ಹಳೆ ವಿದ್ಯಾರ್ಥಿ ಸಂಘವು ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಶಾಲೆಯ ಏಳಿಗೆಯಲ್ಲಿ ಕೈಜೊಡಿಸಲು ಕರೆ ನೀಡಿದೆ. ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಶಾಲೆಯಲ್ಲಿ ಪ್ರಸ್ತುತ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ಸೌಕರ್ಯಗಳ ಬಗೆಗೆ ಮಾಹಿತಿ ನೀಡಿದ್ದಾರೆ. ಹಳೆ ವಿದ್ಯಾರ್ಥಿ ಸಂಘದಿಂದ ಈ ಎಲ್ಲಾ ಸೌಲಭ್ಯಗಳಿಗಾಗಿ ಮಾಸಿಕ 70,000ರೂ. ಹಣ ಖರ್ಚಾಗುತ್ತಿದ್ದು, ದಾನಿಗಳ ನೆರವು ಕೋರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶಹಬುದ್ದಿನ್ ಮೊಹಮ್ಮದ್ ಆಹೂಫ್, ಕಾರ್ಯದರ್ಶಿ ಅಬ್ದುಲ್ ಹಾದಿ, ಜೊತೆ ಕಾರ್ಯದರ್ಶಿ ಇಬ್ರಾಹಿಂ ಗಂಗೊಳ್ಳಿ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿರದ್ದರು. ಕುಂದಾಪ್ರ ಡಾಟ್ ಕಾಂ ವರದಿ.
- ಮಾಹಿತಿಗಾಗಿ ಸಂಪರ್ಕಿಸಿ: 9632029313, 9845961344