ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ಶಿಸ್ತು, ಶ್ರದ್ಧೆ ಮೊದಲಾದ ಗುಣ ಮೈಗೂಡಿಸಿಕೊಂಡಾಗ ಯಶಸ್ವಿ ಪಥದಲ್ಲಿ ಮುನ್ನಡೆಯಲು ಸಾಧ್ಯ. ಕ್ರೀಡೆ ಇದೆಲ್ಲವನ್ನು ಕಲಿಸುವ ಶಕ್ತಿ ಹೊಂದಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ವಿಷ್ಣುವರ್ಧನ್ ಹೇಳಿದರು.
ಗುರುಕುಲ ಪಬ್ಲಿಕ್ ಸ್ಕೂಲ್ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜಿನ 11ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ ಕ್ರೀಡೆ, ಕಲೆ, ಸಂಸ್ಕ್ರತಿ, ಸೇರಿದಂತೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಎಲ್ಲಾ ಸಂಗತಿಗಳನ್ನು ಗುರುಕುಲ ವಿದ್ಯಾಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಪಥಸಂಚಲನ, ಕರಾಟೆಯಲ್ಲಿ ವಿದ್ಯಾರ್ಥಿಗಳು ತೋರಿದ ಪ್ರದರ್ಶನ ಹೆಮ್ಮೆ ಪಡುವಂತಹದ್ದು. ಗುರುಹಿರಿಯರಲ್ಲಿ ಗೌರವ, ಶಿಕ್ಷಕರಿಗೆ ತಲೆಬಾಗುವಿಕೆ ವಿದ್ಯಾರ್ಥಿಯ ಉನ್ನತಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.
ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಕೆ. ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಜಂಟಿ ಟ್ರಸ್ಟಿ ಅನುಪಮ ಎಸ್. ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಿನ್ಸಿಪಾಲ್ ಶಾಯಿಜು ಕೆ.ಆರ್.ನಾಯರ್ ಉಪಸ್ಥಿತರಿದ್ದರು. ಗುರುಕುಲ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಚೆನ್ನಬಸಪ್ಪ ಸ್ವಾಗತಿಸಿದರು. ಶಿಕ್ಷಕ ಜುಪಿಟರ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸುಷ್ಮಾ ಕೋಟೇಶ್ವರ ವಂದಿಸಿದರು.
ಆಕರ್ಷಕ ಪಥಸಂಚಲನ
ಗುರುಕುಲ ವಿದ್ಯಾಲಯದಲ್ಲಿ ೮ನೇ ತರಗತಿಯಿಂದ ಮೊದಲ್ಗೊಂಡು ಪಿಯುಸಿವರೆಗಿನ ಎನ್ ಸಿಸಿ ವಿದ್ಯಾರ್ಥಿಗಳು ಕ್ರೀಡಾಕೂಟ ನಿಮಿತ್ತ ಪ್ರದರ್ಶಿಸಿದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು. ಶಿಸ್ತುಬದ್ಧ ಹೆಜ್ಜೆ, ಅತ್ಯಂತ ಅಕರ್ಷಣೀಯ ಹಿನ್ನೆಲೆ ಬಾಂಡ್ಯವಾದ್ಯ ವಿದ್ಯಾರ್ಥಿ ಪೋಷಕರು, ಪೊಲೀಸ್ ಅಧಿಕಾರಿಗಳ ಮನಸೆಳೆಯಿತು. ಪುಟಾಣಿಗಳು ಪ್ರಸ್ತುತಪಡಿಸಿದ ಪ್ಯಾರಾಚೂಟ್ ನೃತ್ಯ ಹಾಗೂ ಕರಾಟೆ ಪ್ರದರ್ಶನ ಕೂಡ ಗಮನಸೆಳೆಯಿತು.