ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಸೆ.20: ಜಿಲ್ಲೆಯಲ್ಲಿ ಒಂದು ದಿನದಲ್ಲಿ 214 ಮೀ.ಮೀ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಸತತವಾಗಿ ಮಳೆಯಾಗುತ್ತಿರುವುದರಿಂದ ಸತತವಾಗಿ ಸುರಿದ ಮಳೆಯಿಂದಾಗಿ ಅಪಾರವಾದ ಆಸ್ತಿ ಪಾಸ್ತಿಗಳು ಹಾನಿಯಾಗಿದೆ. ಉಡುಪಿ, ಕಾಪು, ಕಾರ್ಕಳ ಮತ್ತು ಬ್ರಹ್ಮಾವರ ತಾಲೂಕಿನ ನದಿ ತೀರದ ಗ್ರಾಮಗಳ ಕೆಲವು ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು (ನೆರೆ) ಮಳೆ ನೀರು ನುಗ್ಗಿ ಆಸ್ತಿ-ಪಾಸ್ತಿಗಳು ಹಾನಿಗೊಂಡಿದೆ.
ಇಂದು ಜಿಲ್ಲೆಯಲ್ಲಿ ಒಟ್ಟು 226 ಮೀ.ಮೀ ಮಳೆಯಾಗಿದ್ದು, ಒಂದೇ ದಿನದಲ್ಲಿ 214 ಮೀ.ಮೀ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 399 ಮೀ.ಮೀ, ಕುಂದಾಪುರ ತಾಲೂಕಿನಲ್ಲಿ 88 ಮೀ.ಮೀ, ಬೈಂದೂರು ತಾಲೂಕಿನಲ್ಲಿ 41 ಮೀ.ಮೀ, ಬ್ರಹ್ಮಾವರ ತಾಲೂಕಿನಲ್ಲಿ 251 ಮೀ.ಮೀ, ಕಾರ್ಕಳ ತಾಲೂಕಿನಲ್ಲಿ 293 ಮೀ.ಮೀ, ಕಾಪು ತಾಲೂಕಿನಲ್ಲಿ 296 ಮೀ.ಮೀ, ಹೆಬ್ರಿ ತಾಲೂಕಿನಲ್ಲಿ 220 ಮೀ.ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗೆ ತಾಲೂಕು ನೋಡಲ್ ಅಧಿಕಾರಿಗಳನ್ನು ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಮೈಸೂರಿನಿಂದ 22 ಮಂದಿ ಮತ್ತು ಮಂಗಳೂರಿನಿಂದ 30 ಮಂದಿ ಇರುವ ಎನ್.ಡಿ.ಆರ್.ಎಫ್ ತಂಡದೊಂದಿದೆ ಜನರನ್ನು ತುರ್ತು ಪರಿಹಾರ ಕಾರ್ಯಕ್ರಮ ಕೈಗೊಂಡು ನೆರೆ ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಉಡುಪಿ ಜಿಲ್ಲಾ ಅಗ್ನಿಶಾಮಕ ಇಲಾಖೆ ಮತ್ತು ಜಿಲ್ಲೆಯ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ನೆರೆ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಉಡುಪಿ ತಾಲೂಕಿನ ಮೂಡನಿಡಂಬೂರು, ಅಲೆವೂರು, ಕೊರಂಗ್ರಪಾಡಿ ಉದ್ಯಾವರ, ಮಣಿಪುರ. ಕಾಪು ತಾಲೂಕಿನ ಪಡು, ಪಲಿಮಾರು, ಕೋಟೆ, ಮಟ್ಟು, ಏಣಗುಡ್ಡೆ, ಮೂಡುಬೆಟ್ಟು, ಕಾರ್ಕಳ ತಾಲೂಕಿನ ಎರ್ಲಪಾಡಿ, ಮರ್ಣೇ, ಸೂಡ ಮತ್ತು ಬ್ರಹ್ಮಾವರ ತಾಲೂಕಿನ ಉಪ್ಪೂರು, ಹಾವಂಜೆ, ನೀಲಾವರ, ಹೇರೂರು ಸೇರಿದಂತೆ ಒಟ್ಟು 77 ಗ್ರಾಮಗಳ ತಗ್ಗು ಪ್ರದೇಶಗಳಲ್ಲಿ ನೆರೆ ಆವರಿಸಿದೆ. ಒಟ್ಟು 31 ಕಡೆಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ಅವರಿಗೆ ಬೇಕಾಗಿರುವ ತುರ್ತು ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ಸಾರ್ವಜನಿಕ ರಸ್ತೆ ಮತ್ತು ಸೇತುವೆ, ಕಟ್ಟಡಗಳಿಗೆ ಹಾನಿ ಉಂಟಾಗಿರುತ್ತದೆ. ಸುಮಾರು ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಹಾನಿಗೊಂಡಿರುತ್ತವೆ ಹಾನಿಗೊಂಡಿದೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಜಲಾವೃತಗೊಂಡಿದ್ದು ಬೆಳೆಗಳಿಗೆ ಹಾನಿಯಾಗಿದೆ. ಮಲ್ವೆಯಲ್ಲಿ ಮೂರು ಬೋಟುಗಳು ಮುಳುಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇದ್ದು, ಕುದ್ರು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.