ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತ್ವರಿತಗೊಳಿಸಿ ಶೀಘ್ರವೇ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿಯು ಸೋಮವಾರ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಭೇಟಿ ಅಹವಾಲು ಸಲ್ಲಿಸಿತು.
ಹೆದ್ದಾರಿ ಹೋರಾಟ ಸಮಿತಿ ಪರವಾಗಿ ಬಿ. ಕಿಶೋರ್ ಕುಮಾರ್ ಮಾತನಾಡಿ ಕುಂದಾಪುರ ಫ್ಲೈ ಓವರ್ ಸೇರಿದಂತೆ ಉಳಿದ ಕಾಮಗಾರಿ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಭರವಸೆ ಇದೀಗ ಹುಸಿಯಾಗಿದ್ದು ಮತ್ತೊಮ್ಮೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇನ್ನೆಷ್ಟು ಕಾಲ ಕಳೆಯುವುದು? ಮಳೆಗಾಲ ಬಂತೆಂದರೆ ಮತ್ತೆ ಕಾಮಗಾರಿ ಇನ್ನೊಂದು 6 ತಿಂಗಳು ಮುಂದುವರಿಯುತ್ತದೆ. ಶೀಘ್ರ ಕ್ರಮ ಕೈಗೊಂಡು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉಪವಿಭಾಗಾಧಿಕಾರಿ ರಾಜು ಕೆ. ಪ್ರತಿಕ್ರಿಯಿಸಿ ಇನ್ನು 15 ದಿನಗಳ ಒಳಗೆ ಹೆದ್ದಾರಿ ಕಾಮಗಾರಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ ಎಂಬ ಮಾಹಿತಿಯನ್ನು ನಮಗೆ ನೀಡಿದರು.
ಉಪವಿಭಾಗಾಧಿಕಾರಿ ನೀಡಿರುವ ಈ ಗಡುವಿನ ಒಳಗೆ ಈ ಕಾಮಗಾರಿ ಮುಗಿದು ಫ್ಲೈ ಓವರು ಮತ್ತು ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳ್ಳದೆ ಇದ್ದರೆ ನಮ್ಮ ಮುಂದಿನ ಹೋರಾಟದ ಕುರಿತು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಮಿತಿಯು ತೀರ್ಮಾನಿಸಿದೆ. ಈ ಕುರಿತು ಚರ್ಚಿಸಲು ಏಪ್ರಿಲ್ 17ರ ಶನಿವಾರ ಸಂಜೆ ಕುಂದಾಪುರದ ಆರ್ಎನ್ ಶೆಟ್ಟಿ ಸಭಾಭವನದ ಮಿನಿಹಾಲ್ನಲ್ಲಿ ಸಭೆ ಕರೆಯಲಾಗಿದೆ.
ಉಪವಿಭಾಗಾಧಿಕಾರಿ ಭೇಟಿ ವೇಳೆ ಈ ಸಂದರ್ಭದಲ್ಲಿ, ರಾಜೇಶ ಕಾವೇರಿ, ಶಶಿಧರ ಹೆಮ್ಮಾಡಿ, ವಿಕಾಸ್ ಹೆಗ್ಡೆ, ಶ್ಯಾಮಸುಂದರ ನಾಯರಿ, ಕೆಂಚನೂರು ಸೋಮಶೇಖರ ಶೆಟ್ಟಿ, ವಿವೇಕ್, ಗಣೇಶ ಮೆಂಡನ್, ಪ್ರತಾಪ ಶೆಟ್ಟಿ, ಭೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.