ಆಟ ಪಾಠವೆಂದು ಓಡಾಡಿಕೊಂಡಿದ್ದ ಮಕ್ಕಳು ಈಗ ಟಿವಿ ಮುಂದೆ ಕುಳಿತು, ಹಾಳುಮೂಳು ತಿಂದು ಮೈತೂಕ ಹೆಚ್ಚಿಸಿಕೊಳ್ಳುತ್ತಿರುವುದು ಸಾಮಾನ್ಯ ಆಗಿಬಿಟ್ಟಿದೆ. ಮನೆಯಲ್ಲೇ ಕುಳಿತು ಉಣ್ಣುವುದು ತಿನ್ನುವುದು, ಸಾಕಷ್ಟು ವ್ಯಾಯಾಮ ಇಲ್ಲದಿರುವುದರಿಂದ ಉಂಟಾಗುವ ಮಕ್ಕಳ ಬೊಜ್ಜು ಅತ್ಯಂತ ಹಾನಿಕರ. ಇಂಥ ಅನಗತ್ಯ ಬೊಜ್ಜಿನಿಂದ ಟೈಪ್ 2 ಡಯಾಬಿಟೀಸ್ ಬರುವ ಸಾಧ್ಯತೆ ಇದೆ. ಹಾಗಾಗಿ ಬೊಚ್ಚು ಬಾರದಂತೆ ತಡೆಯಲು ಕೆಲವೊಂದು ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳುವಂತೆ ಮಾಡುವುದು ಅಗತ್ಯ.
ಆಟ-ವ್ಯಾಯಾಮ ದಿನವೂ ಇರಲಿ:
ಮಗು ದಿನದಲ್ಲಿ ಕನಿಷ್ಠ ಎರಡು ಗಂಟೆ ಆಡಲಿ, ನಡೆದಾಡಲಿ, ಓಡಲಿ, ವ್ಯಾಯಾಮ ಮಾಡಲಿ. ಸುರಕ್ಷಿತವೆನಿಸಿದರೆ ಪಾರ್ಕಿಗೆ ಕರೆದೊಯ್ದು ನಡೆದಾಡಿಸಿ. ಇಲ್ಲವಾದರೆ ಮನೆಯಲ್ಲೇ ಸ್ಕಿಪ್ಪಿಂಗ್, ಜಾಗಿಂಗ್, ಜಂಪಿಂಗ್ ಮಾಡಲಿ, ನೂರು ಬಾರಿ ಮೆಟ್ಟಿಲು ಹತ್ತಿ ಇಳಿಯುವುದು ಮಾಡಲಿ. ರಾತ್ರಿಯ ಹೊತ್ತಿಗೆ ಮಗು ಸಾಕಷ್ಟು ದಣಿಯಲಿ. ಅಂದರೆ ನಿದ್ರೆ ಚೆನ್ನಾಗಿ ಬರುತ್ತದೆ. ಆಟಕ್ಕೆ ಟೈಮ್‌ಟೇಬಲ್ ನಿಗದಿಪಡಿಸಿ, ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಿ.
ನಿದ್ರೆ ಸಾಕಷ್ಟಿರಲಿ:
3ರಿಂಧ 5 ವರ್ಷದ ಮಕ್ಕಳು ದಿನದಲ್ಲಿ ಕನಿಷ್ಠ 10 ಗಂಟೆ, ಗರಿಷ್ಠ 13 ಗಂಟೆ ನಿದ್ರೆ. ಮಾಡಲೇಬೇಕು. ಈ ಪ್ರಾಯದಲ್ಲಿ ಮಗು ಚಟುವಟಿಕೆಗಾಗಿ ತನ್ನೆಲ್ಲ ಶಕ್ತಿಯನ್ನೂ ವ್ಯಯಿಸುತ್ತದೆ. ನಿದ್ರೆ ಮಾಡುವ ಸಂದರ್ಭದಲ್ಲಿ ಮಗು ಸೇವಿಸುವ ಆಹಾರ ನಿಧಾನವಾಗಿ ಜಠರದಲ್ಲಿ ಪಚನಕ್ರಿಯೆಗೆ ಒಳಗಾಗುತ್ತದೆ. ಎಚ್ಚರದಲ್ಲಿ ಇದು ವೇಗವಾಗಿ ನಡೆಯುತ್ತದೆ ನಿದ್ರೆ ಮೆದುಳಿನ ಜೀವಕೋಶಗಳಿಗೆ ಅಗತ್ಯವಾದ ವಿಶ್ರಾಂತಿಯನ್ನು ಒದಗಿಸಿ, ಎಚ್ಚರದ ಬಳಿಕ ದೇಹವನ್ನು ಚುರುಕಾಗಿಡುತ್ತದೆ ನಿದ್ರೆಯಿಲ್ಲದಿದ್ದರೆ ಮೈ ಜಡವಾಗುವುದು ಸಹಜ.
ಮಗುವನ್ನು ನಿದ್ರೆ ಮಾಡಿಸುವುದಕ್ಕೆ ಒಂದು ನಿಗದಿತ ಸಮಯವನ್ನು ಕಲ್ಪಿಸಿಕೊಳ್ಳುವುದು ತುಂಬಾ ಮುಖ್ಯ. ಆ ಸಮಯಕ್ಕಿಂತ ಹದಿನೈದು ನಿಮಿಷಗಳ ಮೊದಲೇ ಆಟವನ್ನೆಲ್ಲ ಬಂದ್ ಮಾಡಿ, ಕತೆ ಹೇಳುವುದರ ಮೂಲಕ ಮಗುವನ್ನು ಬೆಡ್ಗೆ ಒಯ್ಯಬಹುದು. ದಿನಾ ನಿರ್ದಿಷ್ಟ ಸಮಯದಲ್ಲಿ ನಿದ್ರೆ ಹೋಗುವುದರಿಂದ ದೇಹದ ಜೈವಿಕ ಗಡಿಯಾರ ಸಮತೋಲನದಲ್ಲಿರುತ್ತದೆ.
ಊಟ ಸರಿಯಾದ ಸಮಯದಲ್ಲಿರಲಿ:
ಎರಡು ಊಟಗಳ ಮಧ್ಯೆ ಜಂಕ್‌ಪುಡ್, ಬೇಕರಿ ಐಟಂ, ಐಸ್‌ಕ್ರಿಮ್ ಅಥವಾ ಚಾಕಲೇಟ್ ಕೊಟ್ಟು ಮಗುವಿನ ಹಸಿವನ್ನು ಕೆಡಿಸದಿರಿ. ರಾತ್ರಿ ವೇಳೆ ಚಾಕಲೇಟ್ ತಿಂದರೆ ನಿದ್ರೆ ಕೆಡುತ್ತದೆ. ಊಟದಲ್ಲಿ ಸಾಕಷ್ಟು ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ. ಎರಡು ಊಟಗಳ ನಡುವೆ, ಆಟದ ಮಧ್ಯೆ ಮಕ್ಕಳು ಹಸಿವು ಎಂದರೆ ಹಣ್ಣು ಅಥವಾ ಸೌತೆಕಾಯಿ, ಕ್ಯಾರೆಟ್‌ನಂತಹ ತರಕಾರಿಗಳನ್ನು ಕಟ್ ಮಾಡಿ ಕೊಡಿ. ಊಟದಲ್ಲಿ ಪ್ರೊಟೀನ್‌ನಂತೆಯೇ ಬೇಳೆಕಾಳು, ತರಕಾರಿ ಇರುವುದು ಅಗತ್ಯ . ಸೂಕ್ತ ಸಮಯದಲ್ಲಿ ಊಟವನ್ನೂ ಮಗು ಮಾಡಲಿ.
ಸ್ಕ್ರಿನ್‌ಟೈಮ್ ಮಿತಿಗೊಳಿಸಿ:
ಕಂಪ್ಯೂಟರ್ ಹಾಗೂ ಮೊಬೈಲ್ ನೋಡುವ ಅವಧಿ ಹೆಚ್ಚಾಗಿದೆ. ಇದನ್ನು ನೋಡುತ್ತಿರುವಷ್ಟು ಹೊತ್ತೂ ಮಕ್ಕಳು ಜಡವಾಗಿ ಕಂಪ್ಯೂಟರ್ ಹಾಗೂ ಮೊಬೈಲ್ ನೋಡುವ ಅವಧಿ ಹೆಚ್ಚಾಗಿದೆ. ಇದನ್ನು ನೋಡುತ್ತಿರುವಷ್ಟು ಹೊತ್ತೂ ಮಕ್ಕಳು ಜಡವಾಗಿ ಒಂದೆಡೆ ಕುಳಿತೇ ಇರುತ್ತವೆ. ಇದು ಅಪಾಯಕಾರಿ. ಪುಟ್ಟ ಮಕ್ಕಳು ದಿನದಲ್ಲಿ ಹೆಚ್ಚೆಂದರೆ ಒಂದು ಗಂಟೆ, ಮಧ್ಯೆ ಆಗಾಗ ಬಿಡುವು ಕೊಟ್ಟು ಕಂಪ್ಯೂಟರ್ ನೋಡಬಹುದು. ಅರ್ಧ ಗಂಟೆಗಿಂತ ಹೆಚ್ಚು ಮೊಬೈಲ್ ಬಳಕೆ ಬೇಡ. ಎರಡು ಆನ್ಲೈನ್ ಕ್ಲಾಸ್ಗಳ ನಡುವೆ ಕನಿಷ್ಠ ಅರ್ಧಗಂಟೆ ಬಿಡುವು ಕೊಡಿ. ನೀವು ಕೂಡ ಮೊಬೈಲ್ ಆಚೆಗಿಟ್ಟು ಮಕ್ಕಳೊಡನೆ ಮಗುವಾಗಿ ಆಡಿದಾಗ ಮಗುವಿಗೆ ಮಲಗುವ ಮುನ್ನ ಕತೆ ಹೇಳಿದಾಗ, ಮಗುವಿನೊಡನೆ ಕೂತು ನೀವೂ ಊಟ ಮಾಡಿದಾಗ- ಮಗುವಿನ ಆರೋಗ್ಯವನ್ನು ನಿಮಗೇ ಗೊತ್ತಿಲ್ಲದಂತೆ ಆರೋಗ್ಯಕರವಾಗಿ ಬೆಳೆಸುತ್ತೀರಿ.
ಕುಂದಾಪ್ರ ಡಾಟ್ ಕಾಂ ಲೇಖನ
ಇದನ್ನೂ ಓದಿ:
► ಹದಿಹರೆಯದ ಮಕ್ಕಳ ಜತೆ ಪೋಷಕರು ಹೇಗಿರಬೇಕು? – https://kundapraa.com/?p=48853 .