ಕರ್ಮದ ಕಡಲಲ್ಲಿ… ಹೆತ್ತವರನ್ನೇಕೆ ವೃದ್ಧಾಶ್ರಮದ ಮಂಚದಲ್ಲಿ ಮಲಗಿಸಬೇಕನಿಸುತ್ತೆ?

Call us

Call us

ಸಂದೀಪ್ ಶೆಟ್ಟಿ ಹೆಗ್ಗದ್ದೆ | ಕುಂದಾಪ್ರ ಡಾಟ್ ಕಾಂ ಅಂಕಣ
ಅವಳು ಮಾತೆ. ಪ್ರಾಯ 80 ಆಗಿರಬಹುದು. ಬೆನ್ನು ಬಾಗಿದೆ. ನೇರವಾಗಿ ನಿಲ್ಲುವುದು ಬಿಡಿ, ನೆಟ್ಟಗೆ ಕಾಲು ಚಾಚಿ ಮಲಗಲು ಕಷ್ಟಪಡುವ ಸ್ಥಿತಿಯಲ್ಲಿದ್ದಾಳೆ. ಜೀವ ಇದ್ದು ಸಾಯಿಸುತ್ತಿರುವ ಉಬ್ಬಸ, ವಿಪರೀತ ಕೆಮ್ಮು ಖಾಯಂ ಆಗಿ ಸತಾಯಿಸಿ ಪ್ರತಿ ದಿನವೂ ನಿದ್ದೆಗೆಡಿಸುತ್ತಿದೆ. ಆಗಾಗ ಹಳೆ ನೆನಪುಗಳಿಗೆ ಹೋಗಿ ಹೋಗಿ ಬರುತ್ತಿದ್ದ ಅವಳ ಕಣ್ಣಂಚಿನಲ್ಲಿ ಕಣ್ಣೀರು ಸುಮಾರು ವರ್ಷಗಳಿಂದ ಮಾಮೂಲಾಗಿ ಜಿನುಗುತ್ತಿದೆ. ಒಂದು ಕಾಲದಲ್ಲಿ ತನ್ನದೇ ಸ್ವಂತ ಮನೆ, ಮಗ, ಗಂಡ ಆಸ್ತಿ ಎಲ್ಲವನ್ನು ಹೊಂದಿದ್ದ ಅವಳ ಜೀವನ ಇಂದು ಸಾಗುತ್ತಿರುವುದು ವೃದ್ಧಾಶ್ರಮದಲ್ಲಿ. ಅಂದು ಅದೆಷ್ಟೋ ಜನರಿಗೆ ಊಟ ನೀಡಿದ್ದ ಕೈಗಳು ಇಂದು ಅನ್ನ ಪಡೆಯಲು ಹವಣಿಸುತ್ತಿದೆ. ಜೀವಕ್ಕೆ ಜೀವವಾಗಿದ್ದ ಗಂಡ ಆ ದಿನ ಹೃದಯಾಘಾತದಿಂದ ತೀರಿಕೊಂಡ ಬಳಿಕ ಎಲ್ಲಾ ನೋವನ್ನು ಬಿಗಿಹಿಡಿದುಕೊಂಡು ಇದ್ದ ಒಬ್ಬ ಮಗನಿಗೆ ಅಲ್ಲೋ ಇಲ್ಲೋ ಸಾಲ ಮಾಡಿ ಮದುವೆ ಮಾಡಿಸಿ, ಬಡ ಕುಟುಂಬದ ಹುಡುಗಿಯನ್ನೇ ಆರಿಸಿಕೊಂಡು ಮನೆ ಬೆಳಗಿಸಿಕೊಂಡಿದ್ದಳು. ಒಂದಷ್ಟು ದಿನ ಹೊಸತನದಲ್ಲೇ ಮನೆಯೇನೋ ಬೆಳಗಿತು. ಮಗನಿಗೆ ಬರೆದ ಸರ್ಕಾರಿ ಪರೀಕ್ಷೆಯೊಂದು ಪಾಸಾಗಿ ಕೆಲಸವೂ ದೊರೆಯಿತು. ಕೈ ತುಂಬ ಸಂಬಳ, ಮನೆ ತುಂಬ ನಗು ಕಾಣುತ್ತಿದೆ ಎನ್ನುವಾಗಲೇ ಸೊಸೆಯ ನಾಟಕೀಯ ಬದುಕು ನರ್ತಿಸಲು ಪ್ರಾರಂಭಿಸತೊಡಗಿತು. ಕುಂತರೂ ತಪ್ಪು, ನಿಂತರೂ ತಪ್ಪು… ಐಶ್ವರ್ಯ ಹೇಗೆ ಜಾಸ್ತಿಯಾಗತೊಡಗಿತೋ ಅಂತೆಯೇ ಮನೆಯ ಸುಖ, ಶಾಂತಿ, ನೆಮ್ಮದಿಗಳೂ ಮೂಲೆ ಸೇರಿ ದಿನಾಲೂ ಗಲಾಟೆ ಗೌಜುಗಳಲ್ಲೇ ನೆಮ್ಮದಿಯ ದೀಪ ಆರತೊಡಗಿತು. ಮಗ ಇತ್ತ ವಯಸ್ಸಿನ ಅಮ್ಮನನ್ನೂ, ಅತ್ತ ಪ್ರಾಯದ ಹೆಂಡತಿ ಇಬ್ಬರನ್ನೂ ಬಿಟ್ಟುಕೊಡಲಾಗದೇ ಒದ್ದಾಟ ದಿನದೂಡತೊಡಗಿದ. ಕೊನೆಗೂ ಮಾತೆಯೇ ಸೋತಳು. ‘ಎಲ್ಲವೂ ನಿನ್ನದೇ ಮಗನೆ ವೃದ್ಧರಿಗಾಗಿಯೇ ಒಂದು ಆಶ್ರಮವಿದೆಯಂತೆ ನನ್ನನ್ನೂ ಅಲ್ಲಿಗೆ ಸೇರಿಸಿಬಿಡು’ ಎಂದು ಶ್ರಮದ ಬೆವರಲ್ಲಿ ಕಟ್ಟಿದ್ದ ಮನೆಗೆ ಬೀಳ್ಕೊಡುವ ಮಾತನ್ನು ಆಡಿದ್ದಳು. ಮಗನೂ ದೊಡ್ಡ ಮನಸ್ಸು ಮಾಡಿ ಆಶ್ರಮಕ್ಕೆ ಸೇರಿಸಿಯೇ ಬಿಟ್ಟಿದ್ದ. ಕುಂದಾಪ್ರ ಡಾಟ್ ಕಾಂ ಅಂಕಣ.

Click Here

Call us

Call us

****

Click here

Click Here

Call us

Visit Now

OLD PARENTS2ಗೆಳೆಯರೊಬ್ಬರ ಮನೆ ಮದುವೆ. ಊಟದ ಪಂಕ್ತಿಯಲ್ಲಿ ಕುಳಿತಿದ್ದೆ. ಅದು ಕೊನೆಯ ಪಂಕ್ತಿಯಾದ್ದರಿಂದ ನನ್ನೆದುರು ಅನೇಕ ಜನ ಕೂಲಿ ಕೆಲಸಗಾರರೂ ಊಟಕ್ಕೆ ಕುಳಿತಿದ್ದರು. ಅವರ ಮಧ್ಯದಲ್ಲಿ ಸಾಧಾರಣ ಉಡುಗೆ ತೊಟ್ಟ ಸುಮಾರು 70-80 ಯಸ್ಸಿನ ಗಂಡ ಹೆಂಡತಿ ಅನಾಮಿಕರಂತೆ ಬಂದು ಕುಳಿತಿರುವುದು ಗಮನಸೆಳೆಯಿತು. ಗಂಡನ ಕೈ ನಡುಗುತ್ತಿತ್ತು. ಮುಷ್ಟಿಯನ್ನು ಬಾಯಿಗೆ ಹಾಕಲು ಕಷ್ಟ ಪಡುತ್ತಿದ್ದ. ಹೆಂಡತಿ ಮಗುವಿನಂತೆ ಊಟ ಮಾಡಿಸುತ್ತಿದ್ದಳು. ಬಹುಶಃ ಬಹಳ ದಿನಗಳಿಂದ ಇದ್ದ ಹಸಿವಿಗೋ ಏನೋ ಅವರಿಬ್ಬರು ಗಬಗಬನೇ ಊಟ ಮಾಡುತ್ತಿದ್ದರು. ಊಟ ಮುಗಿಸಿ ಕೈ ತೊಳೆಯುವ ಹೊತ್ತಿಗೆ ಅವರ ಬಳಿ ಹೋಗಿ. ‘ಏನಾಯ್ತು ಅಮ್ಮ ಅಂಕಲ್‌ಗೆ!’ ಎಂದೆ. ಅಳೋಕೆ ಶುರುವಿಟ್ಟರು. ‘ದಯಮಾಡಿ ಅಳದಿರಿ ಏನಾಯ್ತು ಹೇಳಿ!’ ಎಂದು ಮತ್ತೆ ಪ್ರಶ್ನೆಯನಿತ್ತೆ. ಉತ್ತರಿಸಲಿಲ್ಲ… ‘ಅತ್ತರೆ ಯಾವುದು ಸರಿಹೋಗುವುದಿಲ್ಲ ಅಲ್ವಾ ಹೇಳಿ? ಏನಾಯ್ತು?’ ಎಂದೆ…

ಪಂಕ್ತಿ ಬಡಿಸುವ ಅಡುಗೆ ಭಟ್ಟರಿಂದ ಉತ್ತರ ಬಂತು…
ಅವರಿಗೆ ಒಬ್ಬನೇ ಮಗನಂತೆ. ತುಂಬಾ ಪ್ರೀತಿಯಿಂದ ಓದಿಸಿದ್ರಂತೆ. ತಕ್ಕಂತೆ ಟ್ಯಾಲೆಂಟ್‌ಗನುಸಾರ ಅಮೇರಿಕಾದಲ್ಲಿ ವೈಧ್ಯಕೀಯ ಸಂಸ್ಥೆಯೊಂದರಲ್ಲಿ ವೃತ್ತಿಯನ್ನು ನಿರ್ವಹಿಸಲು ಅವಕಾಶ ದೊರೆತು ಅಲ್ಲಿಗೂ ಅವನನ್ನು ಕಳುಹಿಸಿಕೊಟ್ಟಿದ್ದರಂತೆ. ಆದರೆ ವಿದೇಶಕ್ಕೆ ಹೋದ ಮಗ ಒಂದೆರಡು ಬಾರಿ ಬಂದು ಹೋದವ ಮತ್ತೆ ವಾಪಸ್ಸು ಬರಲೇ ಇಲ್ಲ. ಅಲ್ಲಿಯೇ ಮದುವೆಯಾಗಿ ಸೆಟ್ಲ್ ಆದ ಆತ ಇವರನ್ನು ಹೇಗೆ ಮರೆತನೋ, ಅದ್ಯಾವ ಮನಸ್ಸು ಮರೆಯುವಂತೆ ಮಾಡಿತೋ ಇದುವರೆಗೂ ತಿಳಿದಿಲ್ಲ. ಸದ್ಯ ಸರ್ಕಾರದಿಂದ ಬರುವ 500 ರೂಪಾಯಿ ಮಾಸಾಶನದಿಂದ ಜೀವನ ದೂಡುತ್ತಿದ್ದಾರೆ. ಇರು ಮಾತ್ರಾ ಇಂದಿಗೂ ಅವನ ಬರುವಿಕೆಗೆ ಕಾಯುತ್ತಲೇ ಇದ್ದಾರೆ. ಅಮೇರಿಕಾದಂತ ದೊಡ್ಡ ಕಂಟ್ರಿಯ ಜನರಿಗೆ ಮೆಡಿಸಿನ್ ಕೊಡುವ, ಖಾಯಿಲೆ ಗುಣಪಡಿಸುವ ಆತನಿಗೆ ತನ್ನ ತಂದೆ ತಾಯಿ ಇಲ್ಲಿ ಅನಾರೋಗ್ಯದಿಂದ, ನಿರಾಶಾಭಾವದಿಂದ, ಹೊಟ್ಟೆಗೂ ಹಿಟ್ಟಿಲ್ಲದೇ ಬದುಕುತ್ತಿರುವುದು ಕಾಣದೇ ಹೋಗಿದೆ!?.

ಇದು ಸ್ಯಾಂಪಲ್ ಅನಿಸುವ ಕಥೆಗಳಷ್ಟೇ ಅಷ್ಟೇ. ಇದೇ ರೀತಿಯ ಇನ್ನೆಷ್ಟೋ ಸಮಸ್ಯೆಗಳು, ಕತೆಗಳು ನಮ್ಮೊಳಗೆ ಇವೆಯೋ ಪಟ್ಟಿ ಮಾಡುತ್ತಾ ಹೋದರೆ ಅಂತ್ಯವೇ ಕಾಣಲ್ಲ ಬಿಡಿ. ಸಮಾಜ ಯಾಕೆ ಹೀಗೆ ಆಗ್ತಿದೆ!?, ಸಾಮಾಜಿಕ ಸಂಬಂಧಗಳು ಯಾಂತ್ರೀಕೃತವಾಗುತ್ತಿವೆಯಾ? ಹಣದ ಮೋಹ ಸಂಬಂಧಗಳ ಮೌಲ್ಯವನ್ನು ಮರೆಯುತ್ತಿದೆಯಾ? ಜೀವವನ್ನೇ ಇತ್ತು ಜೀವ ನೀಡಿರುವ ಹೆತ್ತವರ‍್ಯಾಕೆ ನಮಗೆ ಭಾರವಾಗುತ್ತಿದ್ದಾರೆ!?. ಚಿಕ್ಕಂದಿನಲ್ಲಿ ಮಲಗಲು ಹಾಸಿಗೆಯಿಲ್ಲದಿದ್ದರೂ ಹೊದೆಯಲು ಬೆಡ್ ಶೀಟ್ ಇಲ್ಲದಿದ್ದರೂ, ಅಪ್ಪನ ಪಂಚೆಯನ್ನೋ, ಅಮ್ಮನ ಸೆರಗನ್ನೋ ಎಳೆದು ಹೊದ್ದು ಮಲಗಿದ್ದ ಮಕ್ಕಳಿಗೆ ಬೆಳೆದು ದೊಡ್ಡವರಾದ ಮೇಲೆ ಅರಮನೆಯಂತ ಬಂಗಲೆಯಲ್ಲಿ ವಾಸಿಸುತ್ತಿರುವಾಗ ತಂದೆ ತಾಯಿಯನ್ಯಾಕೆ ವೃದ್ದಾಶ್ರಮದ ಗೋಣಿಚೀಲದಲ್ಲಿ ಮಲಗಿಸಬೇಕನಿಸುತ್ತೆ!?, ಮಾನವೀಯತೆಯ ಮೌಲ್ಯ ನಮಗಿಲ್ವಾ? ಅಥವಾ ಭಾವನೆ ಬಿಕಾರಿಯಾಗಿದೆಯಾ? ತಿಳಿಯುತ್ತಿಲ್ಲ. ನೀವು ಸ್ವಲ್ಫ ಯೋಚಿಸಿ… ಕುಂದಾಪ್ರ ಡಾಟ್ ಕಾಂ ಅಂಕಣ

Call us

OLD PARENTS1ವರ್ಷವಿಡೀ ಒಂದೇ ಮಾಸಿದ ಸೀರೆ ಉಟ್ಟರೂ, ಯಾವತ್ತೂ ಸಿಡುಕದೆ, ಚಳಿಗಾಲದ ಚಳಿಯಲ್ಲಿ ಮಗು ನಡುಗುವಾಗ ಅದೇ ಮಾಸಿದ ಸೀರೆಯಿಂದ ತನ್ನಪ್ಪುಗೆಯಲ್ಲೇ ಸುತ್ತಿ, ಬಿಸಿ ಉಸಿರಿನಿಂದ ಚಳಿಯನ್ನು ಬಡಿದೊಡಿಸಿದ ಅಮ್ಮನ ನೆನಪು ಬೆಳೆದು ದೊಡ್ಡವರಾದ ಮೇಲೆ ಯಾಕೆ ಮನಪಟಲದಲ್ಲಿ ಮೂಡುವುದಿಲ್ಲ. ಕೂಡಿಟ್ಟ ಅಷ್ಟು ದುಡ್ಡನ್ನು ಅನಾರೋಗ್ಯದ ಸಂಧರ್ಭ ಖಾಲಿ ಮಾಡಿದರೂ ಸಾಕಾಗದೆ ಇದ್ದಾಗ, ಕೈ ತುಂಬ ಸಾಲ ಮಾಡಿ ಹಗಲಿರುಳು ದುಡಿದು ದೇವರನ್ನು ಪ್ರಾರ್ಥಿಸಿ ಹರಕೆ ಹೊತ್ತುಕೊಳ್ಳುವ ತಂದೆಯ ಮಮತೆ ಮರೆಯಲು ಮನಸ್ಸಾದರೂ ಹೇಗೆ ಬರುತ್ತಿದೆಯೋ ಅರಿಯೋದೆ ಕಷ್ಟವಾಗಿದೆ.

ಹೆತ್ತವರಿಗೆ ಇಳಿವಯಸ್ಸಲ್ಲಿ ಬೇಕಾಗಿರುವುದು ತಮ್ಮ ಕರುಳಬಳ್ಳಿಯ ಪ್ರೀತಿ, ವಾತ್ಸಲ್ಯ, ಮತ್ತು ಮಮತೆ ಅಷ್ಟೆ. ಮಕ್ಕಳ ಅರಮನೆ, ಆಡಂಬರ ಐಶ್ವರ್ಯ, ಫಿಜಾ-ಬರ್ಗರ್, ಬಿರಿಯಾನಿಗಳಲ್ಲ. ನಮ್ಮ ಪೂರ್ವಜರ ಮನೆಗಳು ಅವಿಭಕ್ತ ಕುಟುಂಬದಲ್ಲೇ ಕೂಡಿದ್ದರಿಂದ ನಮ್ಮ ತಂದೆ ತಾಯಿಗಳು ಹೆಚ್ಚಾಗಿ ಅಂತಹ ವಾತಾವರಣದಲ್ಲೇ ಬೆಳೆದಿರುತ್ತಾರೆ ಅವರಿಗೆ ಒಂಟಿತನದಲ್ಲಿ ಬದುಕಲು ಬಿಟ್ಟರೆ ಅದು ಅಸಾಧ್ಯ. ಮನೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಇದ್ದರೆ ಅವರ ಜೊತೆಗೂಡಿ ತಮ್ಮ ವೃದ್ದಾಪ್ಯವನ್ನು ಮರೆತು ಯವೌನದ ದಿನಗಳಿಗೆ ತಿರುಗಿ ನೋವನ್ನು ಮರೆತು ಸುಖಿಯಾಗಿರುತ್ತಾರೆ. ಮೊಮ್ಮಕ್ಕಳ ಆಟ ಪಾಠ ಮತ್ತು ಒಡನಾಟಗಳಲ್ಲಿ ಮಗದೊಮ್ಮೆ ಬದುಕಿನ ವಸಂತವನ್ನು ಪಡೆಯುತ್ತಾರೆ. ಒಂದು ನೆನಪಿಡಿ ಮಿತ್ರರೇ, ಬಾಳಿನ ಮುಸ್ಸಂಜೆಯ ಹೊತ್ತಲ್ಲಿ ಬೇಕಿರುವುದು ಬೋಗಾಭೋಗಗಳಲ್ಲ ಬದಲಾಗಿ ಕುಟುಂಬ ಭದ್ರತೆ ಮತ್ತು ನೆಮ್ಮದಿ. ಅದನ್ನು ನೀಡಿಲ್ಲವಾದರೆ ಅಂತಹ ಮಕ್ಕಳಿಂದ ಸಮಾಜಕ್ಕೆ ಪ್ರಯೋಜನವಿಲ್ಲ, ಹೀಗೆ ಸಾಗಿದರೆ ಸಮಾಜದ ಅಧಃಪತನ ತಪ್ಪಿದಲ್ಲ. ಕುಂದಾಪ್ರ ಡಾಟ್ ಕಾಂ.

ನಿಮಗೆ ಗೊತ್ತಾ!?… ಪುಟ್ಟದಾಗಿ ಬಂದ ಈ ಜೀವಕೆ, ಪುಟಗಟ್ಟಲೇ ವಿದ್ಯೆಯ ಕೊಟ್ಟು, ಪ್ರಪಂಚಕ್ಕೆ ಪರಿಚಯಿಸುವ ಪ್ರಸ್ತಾವನೆ ತಂದೆಯಾದರೆ, ನೀರಿಲ್ಲದ ಈ ಬೇರಿಗೆ ನೀರುಣಿಸಿ, ನಯವಿನಯವ ತಿಳಿಪಡಿಸಿ ನಲ್ಮೆಯ ನಲಿವನ್ನು ಉಣಬಡಿಸಿ ಸಾರ್ಥಕತೆಯ ಜೀವನ ಕೊಡುವವಳೆ ತಾಯಿ. ಅಂತಹವರನ್ನು ದೇವರಂತೆ ಪೂಜಿಸಿ ಆರಾಧಿಸದರೆ ಪುಣ್ಯ ಬರುತ್ತದೆಯೇ ಹೊರತು ಮನೆಯಿಂದ ಹೊರಗಟ್ಟಿದರೆ ಸುಖಿಯಾಗುವೆ ಎನ್ನುವ ಗೊಡ್ಡು ನಂಬಿಕೆಯಿದ್ದರೆ ಬಿಟ್ಟು ಬಿಡಿ. ತಂದೆ ತಾಯಿಯರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ಸಿಕ್ಕವನು ನಿಜವಾಗಿಯೂ ಪುಣ್ಯವಂತ. ಈ ಮೇಲೆ ಹೇಳಿರುವ ಎರಡು ಉದಾಹರಣೆಯನ್ನು ದೀರ್ಘವಾಗಿ, ಆಳವಾಗಿ ಅರಿಯಬೇಕಾದರೆ ಒಮ್ಮೆ ನಿಮಗೆ ಹತ್ತಿರವಿರುವ ಅನಾಥಾಶ್ರಮಗಳಿಗೆ ಭೇಟಿ ಕೊಡಿ. ಅಲ್ಲಿ ಸಿಗುವ ಯಾರಾದರೂ ಒಬ್ಬರನ್ನು ಕುಳ್ಳಿರಿಸಿಕೊಂಡು ನಿಮ್ಮ ನೋವೇನು? ಎಂದು ಕೇಳಿ, ತಮ್ಮ ಇಳಿವಯಸ್ಸಿನಲ್ಲೂ ಅದುಮಿಟ್ಟುಕೊಂಡು ಬದುಕುತ್ತಿರುವ ಅವರ ನೋವು ಸಂಕಟವನ್ನೆಲ್ಲಾ ಒಮ್ಮೆ ಕೇಳಿದರೆ ನಿಜವಾಗಿಯೂ ಪ್ರಪಂಚ ಇಷ್ಟೊಂದು ಕೆಟ್ಟದಾಗಿದೆಯಾ ಎಂದು ಅನ್ನಿಸದಿರದು.

OLD PARENTSಇಲ್ಲಿ ಪ್ರತಿಯೊಂದಕ್ಕೂ ಬೆಲೆಯಿದೆ ಆದರೆ ಮಾನವನ ಸಂಬಂಧಗಳಿಗೆ ಇಲ್ಲ. ಇಂಗ್ಲೀಷ್ ಸಂಸ್ಕೃತಿ ನಮಲ್ಲೂ ಅಗಾಧವಾಗಿ ಲಗ್ಗೆ ಇಟ್ಟು ಕೆಡಿಸಲು ಇನ್ನೇನೂ ಬಾಕಿ ಇದೆ ಎನ್ನುವಷ್ಟು ಹದಗೆಡಿಸಿದೆ. ಒಟ್ಟಿನಲ್ಲಿ ಕರ್ಮದ ಭೂಮಿ ಕೆಟ್ಟ ಕರ್ಮದ ಕಡಲಾಗಿ ತೆರೆಕಾಣುತ್ತಿದೆ. ಏನೆ ಇರಲಿ ಹಿಂದಿನ ನಡೆ ನುಡಿಗಳಲ್ಲಿ ನಾವೆಷ್ಟೇ ಬದಲಾವಣೆ ಮಾಡಿಕೊಂಡರೂ, ನಮ್ಮ ಕರ್ಮ ಫಲಗಳಿಗೆ ಯಾವ ಬದಲಾವಣೆಯೂ ಇರುವುದಿಲ್ಲ. ನೀನೆನೂ ಮಾಡುತ್ತೀಯಾ? ನೀನದನ್ನೇ ಪಡೆಯುತ್ತೀಯಾ!! ಅದು ಇಲ್ಲಿಯೇ ಪಡೆದುಕೊಂಡೆ ಹೋಗುತ್ತೀಯಾ!!! ಅಷ್ಟೆ… ನಮ್ಮ ಮುಂದೆ ಅನೇಕ ದೇವರು ಇರಬಹುದು. ಆದರೆ ಕಣ್ಮುಂದೆ ಇರುವ ಒಂದೇ ದೇವರೆಂದರೆ ಅದು ನಮ್ಮ ಅಪ್ಪ ಅಮ್ಮ ಮಾತ್ರಾ… ಎಂಥಾ ಸಂಧರ್ಭದಲ್ಲೂ ಅವರಿಗೆ ನೋವು ಕೊಡೊ ಕೆಲಸಕ್ಕೆ ಕೈ ಹಾಕಬೇಡಿ. ಇಷ್ಟು ದಿನ ಪಾಪದಲ್ಲೇ ಕರ್ಮದ ಕಡಲು ಹರಿಸಿದ್ದರೆ ಇನ್ನಾದರೂ ಎದ್ದೇಳಿ… ಪುಣ್ಯವಂತರಾಗೋಣ… ಹಾಗಂತ ಎಲ್ಲರೂ ತಪ್ಪು ಮಾಡುತ್ತಿದ್ದಾರೆ ಎನ್ನುವುದು ನನ್ನ ವಾದವಲ್ಲ. ಮಾಡಿರುವವರು ಅವರವರೇ ಅರಿತುಕೊಳ್ಳಬೇಕು. ನಮ್ಮ ಆಶಾವಾದ ಎಷ್ಟು ನಿಜವಾಗಿದೆ ಮತ್ತು ಎಷ್ಟು ನಿರೀಕ್ಷಣಾ ರಹಿತವಾಗಿದೆ ಎಂದು ಮನನ ಮಾಡಿಕೊಳ್ಳಬೇಕು. ಒಂದಂತು ನಿಜ!!, ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಅಸಹನೆ, ಧ್ವೇಷ ವಂಚನೆಗಳಿಗೆ ಮರೆಯಾಗುತ್ತಿರುವ ಮೌಲ್ಯ ಶಿಕ್ಷಣದ ಕೊರತೆ ಒಂದು ಕಡೆಯಾದರೆ, ವ್ಯಾಪಾರೀಕರಣದ ಇಂದಿನ ಶಿಕ್ಷಣ ಪದ್ದತಿಯಲ್ಲಿ ಕೇವಲ ಹಣ ಗಳಿಕೆ ಮತ್ತು ಉನ್ನತ ಹುದ್ದೆಗಳನ್ನು ಪಡೆಯುವ ಕುರಿತು ಭೋಧಿಸಲಾಗುತ್ತಿರುವುದು ಇನ್ನೊಂದು ಕಾರಣ. ಮಾನವೀಯ ಸಂಬಂಧಗಳ ಅಡಿಪಾಯವನ್ನು ಗಟ್ಟಿಗೊಳಿಸುವ ಮೌಲ್ಯ ಶಿಕ್ಷಣವನ್ನು ಯಾರೂ ನೀಡುತ್ತಿಲ್ಲ. ಸಂಬಂಧಗಳು ಕಮರ್ಷಿಯಲ್ ಆಗುತ್ತಿರುವ ಇಂದಿನ ಜೀವನ ಪದ್ದತಿ ಬದಲಾಗಬೇಕಿದೆ. ಭೋಗ ಸಂಸ್ಕೃತಿಯಿಂದ ಹೊರಬರಬೇಕಿದೆ. ಹಣ ಗಳಿಸುವ ಶಿಕ್ಷಣದ ಬದಲಾಗಿ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಭಾರತೀಯ ಸನಾತನ ಸಂಸ್ಕೃತಿಯನ್ನು, ಅದರ ಅಗತ್ಯವನ್ನು, ಶ್ರೇಷ್ಠತೆಯನ್ನು ಕಲಿಸಬೇಕಿದೆ. ಕಲಿಯಬೇಕಿದೆ… /ಕುಂದಾಪ್ರ ಡಾಟ್ ಕಾಂ ಅಂಕಣ/

Leave a Reply

Your email address will not be published. Required fields are marked *

10 + 15 =