ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮಾಂತರ ಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳ ಅಭಿರುಚಿ, ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ನಾಗೂರಿನಲ್ಲಿ ಬ್ಲಾಸಂ ಸಂಗೀತ ಮತ್ತು ನೃತ್ಯ ಶಾಲೆಯನ್ನು ನಡೆಸಲಾಗುತ್ತಿದೆ. ಅದರ ಆಶ್ರಯದಲ್ಲಿ ಪ್ರತಿ ತಿಂಗಳು ’ಗಾನಯಾನ’ ಎಂಬ ಶಾಸ್ತ್ರೀಯ ಸಂಗೀತ ಕಚೇರಿ ನಡೆಯುತ್ತದೆ ಎಂದು ಕುಸುಮ ಫೌಂಡೇಶನ್ ಅಧ್ಯಕ್ಷ ನಳಿನ್ಕುಮಾರ ಶೆಟ್ಟಿ ಹೇಳಿದರು.
ನಾಗೂರಿನ ಎಕೆಎಸ್ ಆಡಿಟೋರಿಯಮ್ನಲ್ಲಿ ಭಾನುವಾರ ನಡೆದ ಎರಡನೆ ತಿಂಗಳ ಗಾನಯಾನ ಕಾರ್ಯಕ್ರಮದ ಆರಂಭದಲ್ಲಿ ಅವರು ಮಾತನಾಡಿದರು. ಕಚೇರಿಯನ್ನು ಪ್ರತಿ ತಿಂಗಳು ನಡೆಸುವುದರಿಂದ ಸಂಗೀತಾಸಕ್ತರು ಅವುಗಳ ಪ್ರಾಯೋಜಕತ್ವ ವಹಿಸುವ ಮೂಲಕ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ವಿನಂತಿಸಿದರು.
ಆ ಬಳಿಕ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಗೀತ ಶಿಕ್ಷಕರಾಗಿರುವ ಬಿಜೂರು ಬವುಳಾಡಿಯ ವಿದ್ವಾನ್ ರಾಘವೇಂದ್ರ ಉಪಾಧ್ಯಾಯರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಇಡಗುಂಜಿಯ ಮಾರುತಿ ನಾಯ್ಕ್ ಹಾರ್ಮೋನಿಯಂ ನುಡಿಸಿದರು. ಹೊನ್ನಾವರದ ಗಣಪತಿ ಹೆಗಡೆ ಹೆರಿಕೇರಿ ತಬ್ಲಾ ಸಾಥ್ ನೀಡಿದರು. ಕಲಾವಿದರನ್ನು ಹಾಗೂ ಕಚೇರಿಯನ್ನು ಪ್ರಾಯೋಜಿಸಿದ ತುಳಿಸಿದಾಸ ಗಡಿಯಾರ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.