ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಹೊಳಪು ಕಾರ್ಯಕ್ರಮದ ಅಡಿ ಬರಹವೇ ಸಬಲೀಕರಣದತ್ತ ದಿಟ್ಟ ಹೆಜ್ಜೆ ಎನ್ನುವುದಾಗಿದೆ. ಕಾರ್ಯಕ್ರಮದ ಒಟ್ಟು ಉದ್ದೇಶ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವವರಿಗೆ ಒಗ್ಗಟ್ಟಿನಲ್ಲಿರುವ ಶಕ್ತಿ ತಿಳಿಸಿಕೊಡುವುದಾಗಿದೆ. ಪ್ರತಿ ಗ್ರಾಮ ಪಂಚಾಯತ್ಗಳಿಗೂ ಮುಂದಿನ ದಿನಗಳಲ್ಲಿ ಇನ್ನಷು ಪೂರಕ ವ್ಯವಸ್ಥೆಗಳು ಸಿಗಬೇಕು ಗ್ರಾಮ ಪಂಚಾಯತ್ ಅನುದಾನದ ಕೊರತೆಗೆ ಬೀಳಬಾರದು ಎನ್ನುವುದಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಸಾಂಸ್ಕೃತಿಕ ಸ್ಪರ್ಧೆ ಹೊಳಪು ೨೦೧೭ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ, ಗ್ರಾಮ ಪಂಚಾಯತ್ ಕುರಿತು ಅತೀ ಹೆಚ್ಚು ಒತ್ತು ನೀಡಿದ ಹಿಂದಿನ ಮಂತ್ರಿ ಅಬ್ದಲ್ ನಜೀರ್ ಸಾಬ್ ಹೆಸರಿನ ವೇದಿಕೆಯಲ್ಲಿ, ಡಾ.ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಅಂಗವಾಗಿ ನಡೆಯುತ್ತಿರುವುದು ಸಂತಸದ ವಿಷಯ. ಕ್ರೀಡೋತ್ಸವದ ಅಂಗವಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ ಪ್ರತಿ ಗ್ರಾಮ ಪಂಚಾಯತ್ ಸದಸ್ಯರು ಕೂಡ ರಾಷ್ಟ್ರ ಮಟ್ಟದ ಕ್ರೀಡಾ ಪಟುವಿಗೆ ಕಡಿಮೆ ಇಲ್ಲ ಎನ್ನುವಂತೆ ಭಾಗವಹಿಸಿರುವುದು ಅವರಲ್ಲಿ ಶ್ರದ್ಧೆ ತೋರಿಸುತ್ತದೆ ಎಂದರು.
ಸಹಕಾರ ಮಾರಾಟ ಮಹಾಮಂಡಳ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಸಹಕಾರಿ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು ಮಾತನಾಡಿ, ಎಲ್ಲರೂ ಒಟ್ಟಾಗಿ ಸ್ನೇಹದಿಂದ ಬೇರೆಯುವ ಉದ್ದೇಶಕ್ಕೆ ಕ್ರೀಡಾಕೂಟ ನಡೆಸಲಾಗುತ್ತಿದೆ. ಪಂಚಾಯತ್ ಪ್ರತಿನಿಧಿಗಳ ಕ್ರೀಡಾಕೂಟದಲ್ಲಿ ಎಲ್ಲರೂ ಒಟ್ಟಾಗಿ, ಒಂದಾಗಿ ಬೆರೆಯುವುದರಿಂದ ಜನಪ್ರತಿನಿಧಿಗಳ ನಡುವಿನ ಪಕ್ಷ ಭೇದ ಮರೆಯಲು ಸಾಧ್ಯವಿದೆ ಎಂದರು. ಕೋಟತಟ್ಟು ಪಂಚಾಯತ್ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ, ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ರಾಘವೇಂದ್ರ ಕಾಂಚನ್ ಬಾರಿಕೆರೆ, ಶೋಭಾ ಹರೀಶ್ಚಂದ್ರ ಶೆಟ್ಟಿ, ಶ್ರೀಲತಾ ಸುರೇಶ್ ಶೆಟ್ಟಿ, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ, ಬೆಳಪು ದೇವಿ ಪ್ರಸಾದ್ ಶೆಟ್ಟಿ, ಸಾಂಸ್ಕೃತಿಕ ಚಿಂತಕ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ನ್ಯಾಯವಾದಿ ಟಿ.ಬಿ.ಶೆಟ್ಟಿ, ಯುವ ಜನ ಕ್ರೀಡಾ ಅಧಿಕಾರಿ ಡಾ.ರೋಶನ್ ಕುಮಾರ್ ಶೆಟ್ಟಿ, ಉದ್ಯಮಿ ಗೋವಿಂದ ಬೀಜೂರು, ಪಂಚಾಯತ್ ಹಕ್ಕೋತ್ತಾಯ ಆಂದೋಲನದ ಉದಯ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಸುಬ್ರಾಯ ಆಚಾರ್ಯ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕ್ರೀಡಾ ಧ್ವಜಾರೋಹನಗೈದರು. ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಆಡಳಿತ ಧರ್ಮದರ್ಶಿ ಹರೀಶ್ ಕುಮಾರ್ ಬಲೂನ್ ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಯಡ್ತಾಡಿ ಪಂಚಾಯತ್ ಸದಸ್ಯ ಗೌತಮ್ ಹೆಗ್ಡೆ ಅಲ್ತಾರು ಪ್ರತಿಜ್ಞಾ ವಿಧಿ ಭೋಧಿಸಿದರು. ಹಿರಿಯ ಕ್ರೀಡಾಪಟು ಹರೀಶ್ ಶೆಟ್ಟಿ ಕ್ರೀಡಾ ಜ್ಯೋತಿ ಬೆಳಗಿದರು. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಆಕರ್ಷಕ ಪಥ ಸಂಚಲನ ನಡೆಸಿ ಕೋಟ ಪಂಚಾಯತ್ ಪ್ರಥಮ, ವಡ್ಡರ್ಸೆ ಪಂಚಾಯತ್ ದ್ವಿತೀಯ ಮತ್ತು ಅಲ್ತಾರು ಪಂಚಾಯತ್ ತೃತೀಯ ಸ್ಥಾನ ಪಡೆಯಿತು.