ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಎಸ್. ರಾಜು ಪೂಜಾರಿಗೆ ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿರಂತರ ಎರಡೂವರೆ ದಶಕ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದವಿ ನಿರ್ವಹಿಸಿ ಅದನ್ನು ಉಭಯ ಜಿಲ್ಲೆಗಳ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಸದೃಢವಾಗಿ ಬೆಳೆಸಿದ ಎಸ್. ರಾಜು ಪೂಜಾರಿ ಅವರನ್ನು ನಾವುಂದ ಸಂಘದ ಪ್ರಧಾನ ಕಾರ್ಯಾಲಯದಲ್ಲಿ ನಿರ್ದೇಶಕ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ಅಭಿನಂದಿಸಿ, ಸನ್ಮಾನಿಸಿದರು.

ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ ಮಾತನಾಡಿ, 25 ವರ್ಷಗಳ ಹಿಂದೆ ಸಂಘದ ಸಾಧನೆ ಸಾಮಾನ್ಯ ಮಟ್ಟದಲ್ಲಿತ್ತು. ರಾಜು ಪೂಜಾರಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಿಸಿದ ಕಾರಣ ಅದರ ಸದಸ್ಯ ಸಂಖ್ಯೆ, ಪಾಲು ಬಂಡವಾಳ, ಠೇವಣಿ, ಕ್ಷೇಮನಿಧಿ ಗಣನೀಯವಾಗಿ ವೃದ್ಧಿಯಾಯಿತು. ಸ್ವಂತ ನಿಧಿ ಮತ್ತು ಕೇಂದ್ರ ಸಹಕಾರಿ ಬ್ಯಾಂಕಿನ ಸಾಲ ಬಳಸಿಕೊಂಡು ವಿವಿಧ ಉದ್ದೇಶಗಳಿಗೆ ದೊಡ್ಡ ಮೊತ್ತದ ಸಾಲ ವಿತರಿಸಲು ಸಾಧ್ಯವಾಯಿತು. ಪರಿಣಾಮವಾಗಿ ಸಂಘ ಹಂತಹಂತವಾಗಿ ಪ್ರಗತಿಯತ್ತ ಸಾಗಿತು’ ಎಂದರು.

ನಿರ್ದೇಶಕ ಎಂ. ಅಣ್ಣಪ್ಪ ಬಿಲ್ಲವ, ಎಸ್. ರಾಜು ಪೂಜಾರಿ ಅವರ ಅವಧಿಯಲ್ಲಿ ಸಂಘದ ಪ್ರಧಾನ ಕಚೇರಿ ಮತ್ತು ಶಾಖೆಗಳು ಸ್ವಂತ ನಿವೇಶನ ಮತ್ತು ಕಟ್ಟಡ ಹೊಂದಲು ಸಾಧ್ಯವಾಯಿತು ಎಂದರು.

ಅವಧಿಯುದ್ದಕ್ಕೆ ಇದ್ದ ನಿರ್ದೇಶಕರು, ಸದಸ್ಯರು, ಸಿಬ್ಬಂದಿ, ಅಧಿಕಾರಿಗಳು, ಹಿರಿಯ ಸಹಕಾರಿಗಳು ನೀಡಿದ ಸಹಕಾರ ಸ್ಮರಣೀಯ ಎಂದು ರಾಜು ಪೂಜಾರಿ ಕೃತಜ್ಞತೆ ಸಲ್ಲಿಸಿದರು.ಎಂ.ವಿನಾಯಕ ರಾವ್ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ವಂದಿಸಿದರು. ಮುಖ್ಯ ಕಾರ್ಯನಿರ್ವಣಾಧಿಕಾರಿ ಸುರೇಶ್ ಅಳ್ವೆಗದ್ದೆ, ಹಿರಿಯ ವ್ಯವಸ್ಥಾಪಕ ಸಂಜೀವ ಮಡಿವಾಳ, ಸಿಬ್ಬಂದಿ ಇದ್ದರು.

‘ಬಹುಮುಖಿ ಸಾಧನೆ: ಆರ್ಥಿಕ ಸ್ಥಿತಿ ಸದೃಢ’
‘ಎಸ್. ರಾಜು ಪೂಜಾರಿ ಅವರ ಅವಧಿಯಲ್ಲಿ ಸಂಘ ಆರ್ಥಿಕ ಸ್ಥಿತಿ ಸದೃಢಗೊಂಡ ಕಾರಣ, ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿದೆ. ಸಾಮಾಜಿಕ ಕ್ಷೇತ್ರಗಳಿಗೂ ನೆರವಾಗುತ್ತಿದೆ. ಸಂಘವು ಈಗ ಸದಸ್ಯರಿಗೆ ಎಲ್ಲ ವಿಧದ ಸೇವೆಗಳನ್ನು ಒದಗಿಸುತ್ತಿದೆ. ವ್ಯಾಪ್ತಿಯ ಸಾಮಾಜಿಕ, ಶೈಕ್ಷಣಿಕ ಉದ್ದೇಶಗಳಿಗೂ ನೆರವಾಗುತ್ತಿದೆ. ಈ ಸಂಘದಲ್ಲಿ ಮಾಡಿದ ಸಾಧನೆಯ ಫಲವಾಗಿ ಅವರಿಗೆ ಸ್ಥಳೀಯ ಮತ್ತು ಜಿಲ್ಲೆಯ ಇನ್ನಷ್ಟು ಸಹಕಾರಿ ಸಂಸ್ಥೆಗಳಲ್ಲಿ, ಸ್ಥಳೀಯಾಡಳಿತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು. ಸಾಧನೆಗೆ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳು ದೊರಕಿದುವು’ ಎಂದು ನಿರ್ದೇಶಕ ಎಂ. ಅಣ್ಣಪ್ಪ ಬಿಲ್ಲವ ಅಭಿನಂದಿಸಿದರು.

Leave a Reply

Your email address will not be published. Required fields are marked *

ten − two =