ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೀವನದಲ್ಲಿ ನಿರಂತರ ಉತ್ಸಾಹ, ಧನತ್ಮಕವಾದ ಚಿಂತನೆಗಳಿದ್ದರೆ. ಅಂತಹವರಿಗೆ ದೇವರ ಸಹಾಯವಿರುತ್ತದೆ. ಆದ್ದರಿಂದ ಯುವಜನತೆ ಸಮಾಜದ ಹಾಗೂ ಊರಿನ ಅಭಿವೃದ್ಧಿಯ ಪರ ದಿಕ್ಕು ಬದಲಾಯಿಸುವ ಉದ್ದೇಶದಿಂದ ಯಾವುದೇ ಉದ್ಯಮ, ವ್ಯವಹಾರ ಮಾಡುವಂತಾಗಲು ಧೈರ್ಯದಿಂದ ಮುಂದುವರಿದಾಗ ಮಾತ್ರ ಖಂಡಿತವಾಗಿಯೂ ಯಶಸ್ಸು ದೊರಕುವುದು ಎಂದು ನಿವೃತ್ತ ಬ್ರಿಗೇಡಿಯರ್ ಮಂಗಳೂರಿನ ಐ. ಎನ್. ರೈ ಹೇಳಿದರು.
ಬೈಂದೂರು ಶ್ರೀ ಮೂಕಾಂಬಿಕಾ ರೈಲ್ವೆ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣಗೊಂಡ ಹೊಟೇಲ್ ಅಂಬಿಕಾ ಇಂಟರ್ನ್ಯಾಶನಲ್ ಹೋಟೆಲನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ೩೪ವರ್ಷಗಳ ಕಾಲ ನನ್ನನ್ನು ದೇಶಕ್ಕಾಗಿ ಸಮರ್ಪಣೆ ಮಾಡಿಕೊಂಡಿದ್ದೇನೆ. ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಮನ್ನಣೆ ದೊರೆಯುತ್ತದೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ದೇಶದ ಲಕ್ಷಾಂತರ ಸೈನಿಕರ ಆಶೀರ್ವಾದ ಈ ಹೊಟೇಲ್ ಮೇಲಿರಲಿದೆ ಎಂದು ಶುಭಹಾರೈಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಹೋಟೆಲ್ನ ಸಂಪೂರ್ಣ ಹವಾನಿಯಂತ್ರಿತ ಶಾರದಾ ಕನ್ವೆನ್ಸನ್ ಹಾಲ್ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಇಲ್ಲಿಗೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸುಸಜ್ಜಿತ ಹೊಟೇಲ್ಗಳ ಅಗತ್ಯವಿದ್ದು, ಈ ಹೊಟೇಲ್ನಿಂದಾಗಿ ಪ್ರವಾಸಿಗರ ವಸತಿಗೆ ಅನುಕೂಲವಾಗಿದೆ. ಇದು ಕೇವಲ ವ್ಯಾಪಾರಿ ಕೇಂದ್ರವಾಗಿರದೆ, ಇಲ್ಲಿ ಮನೆಯಲ್ಲಿನ ಪ್ರೀತಿ, ವಾತ್ಸಲ್ಯ, ಆತ್ಮೀಯತೆ, ಸಂಸ್ಕಾರ, ಸಂಸ್ಕೃತಿ ಸಿಗುವಂತಾಗಬೇಕು. ಹೊಟೇಲ್ನಲ್ಲಿ ವ್ಯವಹರಿಸುವಾಗ ಮನುಷ್ಯತ್ವದಿಂದ ಕೂಡಿದ ಒಳ್ಳೆಯ ಭಾವನೆ, ಹೃದಯ ವೈಶಾಲ್ಯತೆ ಹಾಗೂ ಪ್ರೀತಿಯಿರಬೇಕು ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರಧಾನ ತಂತ್ರಿ ಕೆ. ಮಂಜುನಾಥ ಅಡಿಗ ಆಶೀರ್ವಚನ ನೀಡಿದರು. ವಿಶ್ವ ರಾಮಕ್ಷತ್ರೀಯ ಸಂಘ ಬೆಂಗಳೂರು ಇದರ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ, ಖ್ಯಾತ ಚಲನಚಿತ್ರ ನಟಿ ಅಂಜು ಅರವಿಂದ್ ಬೆಂಗಳೂರು, ಭಟ್ಕಳ ಅರ್ಬನ್ ಕೋ-ಆಪ್ರೇಟಿವ್ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗಲೆ, ಕನ್ಸ್ಲ್ಟಿಂಗ್ ಇಂಜಿನಿಯರ್ ಗೋಪಾಲ ಭಟ್, ಬೆಂಗಳೂರು ಉದ್ಯಮಿ ಅಶೋಕಕುಮಾರ್ ಬಾಡ, ಶಾರದಾ ನರಸಿಂಹ ಹೋಬಳಿದಾರ್ ಉಪಸ್ಥಿತರಿದ್ದರು.
ಹೋಟೆಲ್ ಪ್ರವರ್ತಕ ಜಯಾನಂದ ಹೋಬಳಿದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಣಪತಿ ಹೋಬಳಿದಾರ್ ಸ್ವಾಗತಿಸಿ, ಸಂದೇಶ ಶೆಟ್ಟಿ ಸಳ್ವಾಡಿ ನಿರೂಪಿಸಿದರು. ರಾಘವೇಂದ್ರ ದಡ್ಡು ವಂದಿಸಿದರು. ಹೊಸತನದಿಂದ ಕೂಡಿದ ವಿಶೇಷ ವಿನ್ಯಾಸದಿಂದ ಕೂಡಿದ ಅಂಬಿಕಾ ಇಂಟರ್ನ್ಯಾಶನಲ್ ಹೊಟೇಲ್ನಲ್ಲಿ ಪ್ರತ್ಯೇಕ ವೆಜ್, ನಾನ್ವೆಜ್ ರೆಸ್ಟೋರೆಂಟ್, ಹವಾನಿಯಂತ್ರಿತ ಕನ್ವೆನ್ಸನ್ ಹಾಲ್, ಸುಸಜ್ಜಿತ ಲಕ್ಸೂರಿ ರೂಮ್ಸ್ಗಳು ದೊರೆಯುತ್ತದೆ.