ಹೊಯ್ಸಳ ಕಲ್ಚರಲ್ ಟ್ರಸ್ಟ್ ಸಾರಥ್ಯದಲ್ಲಿ ಕ್ರೀಡಾ, ಸಾಂಸ್ಕೃತಿಕ ಉತ್ಸವ ‘ನಾಡ ಹಬ್ಬ’

ಕುಂದಾಪ್ರ ಡಾಟ್ ಕಾಂ’ ವರದಿ
ಕುಂದಾಪುರ: ಬೈಂದೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ ವಿಭಿನ್ನ ಸಂಯೋಜನೆಯೊಂದಿಗೆ ವಿಶಿಷ್ಟ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ. ಕ್ರೀಡೆ, ಸಿನೆಮಾ ಮುಂತಾದ ಕ್ಷೇತ್ರದಲ್ಲಿ ವಿಶ್ವಖ್ಯಾತಿ ಗಳಿಸಿರುವ ನಾಡ ಗ್ರಾಮದ ಪಡುಕೋಣೆಯಲ್ಲಿ ಅದ್ದೂರಿ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ.

ನಾಡಾ ಗ್ರಾಮದ ಹೊಯ್ಸಳ ಕಲ್ಚರಲ್ ಟ್ರಸ್ಟ್ ರಿ. ಸಾರಥ್ಯದಲ್ಲಿ ನಾಡಹಬ್ಬ ೨೦೧೮ ಅದ್ದೂರಿ ಕ್ರೀಡಾ ಜಾತ್ರೆ, ಗಾನ ನೃತ್ಯ ಜಾತ್ರೆ ಹಾಗೂ ಯಕ್ಷ ಜಾತ್ರೆ ಕಾರ್ಯಕ್ರಮ ಡಿಸೆಂಬರ್ 22, 23, 24 ರಂದು ಪಡುಕೋಣೆ ಗ್ರೆಗರಿ ಪ್ರೌಢಶಾಲಾ ಮೈದಾನದಲ್ಲಿ ಜರುಗಲಿದ್ದು ಭರದ ಸಿದ್ಧತೆ ನಡೆದಿದೆ.

ಡಿ. 22ರ ಬೆಳಿಗ್ಗೆ 9 ಗಂಟೆಗೆ ಹಿರಿಯ, ಕಿರಿಯ ವಿಭಾಗದಲ್ಲಿ ಪ್ರತ್ಯೇಕ ಮ್ಯಾರಾಥಾನ್ ಓಟ ನಡೆಯಲಿದೆ. ಅಂದು ಸಂಜೆ ಸಮಾಜದ ಗಣ್ಯ ವ್ಯಕ್ತಿಗಳಿಂದ ನಾಡ ದೇವತೆಯ ಅದ್ದೂರಿಯ ಪುರಮೆರವಣಿಗೆ ಉದ್ಘಾಟನೆಗೊಳ್ಳಲಿದೆ. ಸಂಜೆ 7ರಿಂದ ನಾಡ ಹಬ್ಬದ ಉದ್ಘಾಟನೆ ನಡೆಯಲಿದ್ದು ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ ಆಡಳಿತ ನಿರ್ದೇಶಕ ಅಶೋಕ ಎಸ್. ಶೆಟ್ಟಿ ಸಮೃದ್ಧಿ ಬೆಳ್ಳಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಪ್ರೀಯಾಂಖ ಮೇರಿ ಫ್ರಾನ್ಸಿಸ್, ಉಪ ವಿಭಾಗಧಿಕಾರಿ ಟಿ. ಭೂಬಾಲನ್ ಸೇರಿದಂತೆ ಸಮಾಜದ ಹಲವು ಪ್ರಮುಖರು, ಉದ್ಯಮಿಗಳು ವೇದಿಕೆಯಲ್ಲಿ ಇರಲಿದ್ದಾರೆ. ಅಂದು ರಾತ್ರಿ ೯ ಗಂಟೆಯಿಂದ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಮತ್ತು ಝೀ ಕನ್ನಡ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಕಲಾವಿದರಿಂದ ಸಾಂಸ್ಕೃತಿಕ ವೈಭವ ಜರುಗಲಿದೆ.

ಡಿ. 23 ಆದಿತ್ಯವಾರ ಬೆಳಿಗ್ಗೆ ಕೆಸರು ಗದ್ದೆ ಓಟ, ಬೆಳಿಗ್ಗೆ ೧೧ರಿಂದ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟ, 12ರಿಂದ ಕೆಸರುಗದ್ದೆ ಹಗ್ಗ ಜಗ್ಗಾಟ, ಮಧ್ಯಾಹ್ನ 2ರಿಂದ ಆದರ್ಶ ದಂಪತಿ ಸ್ಪರ್ಧೆ, ಸಂಜೆ ನಾಲ್ಕರಿಂದ ಚಿನ್ನರ ಚಿಲಿಪಿಲಿ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು, ಸಂಜೆ 6ರಿಂದ ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಯಕ್ಷದ್ರುವ ಪಟ್ಲ ಸತೀಶ್ ಮತ್ತು ಬಳಗದವರಿಂದ ಪೌರಾಣಿಕ ಯಕ್ಷ ವೈಭವ ನಡೆಯಲಿದೆ.

ರಾತ್ರಿ ೮ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಯುಕ್ರ ಕೆ. ಸಂತೋಷ್ ಹೆಗ್ಡೆ, ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವೆ ಡಾ| ಜಯಮಾಲಾ, ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತ ಕೆ. ಅಣ್ಣಾಮಾಲೈ ಸೇರಿದಂತೆ ಹತ್ತಾರು ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ. ಅಂದು ರಾತ್ರಿ 9ರಿಂದ ಬಾಲ ನಟಿಯರಾದ ಅದ್ವಿಕಾ ಶೆಟ್ಟಿ, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯ ಮರವಂತೆ, ಆರಾಧ್ಯ ಆರ್. ಶೆಟ್ಟಿ, ಆನ್ವಿ ಶೆಟ್ಟಿ, ಧನ್ವಿ ಮರವಂತೆ ಅವರುಗಳಿಂದ ಗಾನನೃತ್ಯ ವೈಭವ ಹಾಡು ಬಾ ಕೋಗಿಲೆ ಖ್ಯಾತಿಯ ಅಖೀಲ್ ಮತ್ತು ರಾಜಗೋಪಾಲ್ ತಂಡದಿಂದ ಮ್ಯೂಸಿಕಲ್ ನೈಟ್ ಮಂಗಳೂರು ಡಾನ್ಸ್ ಗ್ರೂಫ್ ತಂಡದಿಂದ ಡಾನ್ಸ್ ಕಾರ್ಯಕ್ರಮ ಜರುಗಲಿದೆ.

24ರ ಸಂಜೆ 7ರಿಂದ ಮಜಾ ಭಾರತ ಖ್ಯಾತಿಯ ಮಸ್ಕಿರಿ ಕುಡ್ಲ ತಂಡದಿಂದ ನಗೆ ಹಬ್ಬ ರಾತ್ರಿ ೯ರಿಂದ ಬಡಗುತಿಟ್ಟಿನ ಹೆಸರಾಂತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಸಾರಥ್ಯದಲ್ಲಿ ಪೆರ್ಡೂರು ಮೇಳದ ಕಲಾವಿದರಿಂದ ಯಕ್ಷಜಾತ್ರೆ ನಡೆಯಲಿದೆ.

ನಾಡ ಹಬ್ಬದಲ್ಲಿ ನಿವೃತ್ತ ಲೋಕಾಯುಕ್ತ ಕೆ. ಸಂತೋಷ್ ಹೆಗ್ಡೆ, ಡಿಜಿಪಿ ಕೆ. ಅಣ್ಣಾಮಲೈ, ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ ಆಡಳಿತ ನಿರ್ದೇಶಕ ಡಾ| ಅಶೋಕ್ ಎಸ್. ಶೆಟ್ಟಿ, ನಿರೂಪಕಿ ಅನುಶ್ರೀ, ಕ್ರೀಡಾಪಟು ಗುರುರಾಜ ಪೂಜಾರಿ ವಂಡ್ಸೆ, ಮಮತಾ ಪೂಜಾರಿ, ಕ್ರೀಡಾ ಪಟು ಗ್ಲೇವನ್ ಡಿಸೋಜಾ, ವೈಟ್ ಲಿಫ್ಟರ್ ಸುರೇಶ್ ದೇವಾಡಿಗ ಪಡುಕೋಣೆ, ಜಾಕ್ಸನ್ ಡಿಸೋಜಾ, ಅಕ್ಷತಾ ಪೂಜಾರಿ, ಯಕ್ಷಗಾನ ಕಲಾವಿದ ಸೂರ ಗಾಣಿಗ, ನಾಗೇಶ ಗಾಣಿಗ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಸತೀಶ್ ಶೆಟ್ಟಿ ಪಟ್ಲ ಹಾಗೂ ಬಾಲ ನಟಿಯನ್ನು ಸನ್ಮಾನಿಸಲಾಗಿದೆ.

ಪತ್ರಿಕಾಗೋಷ್ಠಿ
ಕಾರ್ಯಕ್ರಮದ ಕುರಿತಾಗಿ ಬೈಂದೂರಿನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೊಯ್ಸಳ ಕಲ್ಚರಲ್ ಟ್ರಸ್ಟ್ ರಿ. ಅಧ್ಯಕ್ಷ ಅರವಿಂದ ಪೂಜಾರಿ, ಉಪಾಧ್ಯಕ್ಷ ಸಂತೋಷ್ ಡಿಸೋಜಾ, ಸಂಘಟಕ ಮಂಜುನಾಥ ಪೂಜಾರಿ, ಜೆ.ಪಿ ಬಡಾಕೆರೆ ಇದ್ದರು.

ಮೂರು ಕಡೆ ಸೌಪರ್ಣಿಕಾ ನದಿಯಿಂದ ಸುತ್ತುವರಿದು ಒಂದು ಕಡೆ ಭೂಪ್ರದೇಶವಿರುವ ಪರ್ಯಾಯ ದ್ವೀಪದಂತಿರುವ ನಾಡ ಗ್ರಾಮವು ಪಡುಕೋಣೆ, ಹಡವು, ಗುಡ್ಡೆಯಂಗಡಿ, ಸೇನಾಪುರ, ಕಡಿಕೆ, ಹೆಮ್ಮಂಜೆ, ಬಡಾಕೆರೆ ಊರುಗಳನ್ನು ಒಳಗೊಂಡಿದೆ. ಸರ್ವಧರ್ಮ ಸಮನ್ವಯತೆಯ ನಾಡಾಗಿರುವ ನಾಡ ಗ್ರಾಮದಲ್ಲಿ ಅನೇಕ ಸಾಧಕರಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅಂತಹ ಸಾಂಸ್ಕೃತಿಕ ಊರಿನಲ್ಲಿ ಮೂರು ದಿನಗಳ ಅದ್ದೂರಿ ನಾಡ ಹಬ್ಬ ಆಯೋಜನೆಗೊಂಡಿದೆ.

Press meet Video

Leave a Reply

Your email address will not be published. Required fields are marked *

ten + 16 =