ಸಂದರ್ಶನ: ಹಾಡನ್ನು ಕೇಳುವ ದಿನ ಬದಲಾಗಿ ನೋಡುವ ದಿನ ಬಂದಿದೆ! – ವಾಣಿ ಜಯರಾಂ

Call us

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ
ಕುಂದಾಪುರ: ಇಂದು ರೇಡಿಯೋದಲ್ಲಿ ಮಾತ್ರ ಹಾಡುವುದನ್ನು ಕೇಳುವ ದಿನಗಳು ಬದಲಾಗಿ, ಹಾಡನ್ನು ನೋಡುವ ದಿನಗಳು ಬಂದಿವೆ. ರೀಯಾಲಿಟಿ ಶೋಗಳ ಮೂಲಕ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ. ಸಂಗೀತದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದಿಲ್ಲ. ಎಲ್ಲಾ ಪ್ರಕಾರದ ಸಂಗೀತಕ್ಕೂ ಅದರದ್ದೇ ಆದ ಘನತೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಕಷ್ಟಪಡುವುದು ಇದ್ದೇ ಇರುತ್ತೆ. ಕಷ್ಟ ಪಡದೇ ಇಷ್ಟಾರ್ಥ ಸಿದ್ದಿಸೋದಿಲ್ಲ. ಕಷ್ಟಪಟ್ಟು ಇಷ್ಟ ಸಿದ್ದಿಸಿಕೊಂಡಿದ್ದೇನೆ. ಹಿನ್ನೆಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದ ಪಣಯ ಖುಷಿ ನೀಡಿದೆ.

ಹೀಗೆಂದವರು ಸಂಗೀತ ಗಾಯನ ಲೋಕದಲ್ಲಿ ಅಗ್ರಮಾನ್ಯ ಸ್ಥಾನವನ್ನು ಅಲಂಕರಿಸಿರುವ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿ ಜಯರಾಂ

ಕೋಟೇಶ್ವರ ಸಹನಾ ಕನ್‌ವೆಷನ್ ಸೆಂಟರ್‌ಸಲ್ಲಿ ಭಾನುವಾರ ನಡೆಯಲಿರುವ ವಾಣಿ ಜಯರಾಂ ರಸ ಸಂಜೆ ಕಾರ್ಯಕ್ರಮಕ್ಕೆ ಕುಂದಾಪುರಕ್ಕೆ ಆಗಮಿಸಿರುವ ಅವರು ತಮ್ಮ ಹಿನ್ನಲೆ ಗಾಯನ ಮೂಲಕ ಸಾಗಿ ಬಂದ ದಾರಿಯನ್ನು ಕುಂದಾಪ್ರ ಡಾಟ್ ಕಾಂ ನೊಂದಿಗೆ ತೆರೆದಿಷ್ಟ ಪರಿ ಇದು.

ಸಂಗೀತ ಕ್ಷೇತ್ರದ ಸಾಧನೆಗೆ ತಾಯಿಯೇ ಪ್ರೇರಣೆ. ಅದು ೧೯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಲೊಂದು ಸ್ಪೂರ್ತಿ ನೀಡಿತು. ಮನೆಯವರ ಪ್ರೋತ್ಸಾಹದಿಂದ ಇಷ್ಟು ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು ಎನ್ನೋದು ವಾಣಿ ಜಯರಾಮ್ ಸಾಗಿ ಬಂದ ದಾರಿ ತೆರೆದಿಟ್ಟಿದ್ದು ಹೀಗೆ

ಹಿನ್ನೆಲೆ ಗಾಯಕಿಯಾಗಿ ಮೊದಲು ಯಾವ ಸಿನೆಮಾಕ್ಕೆ ಹಾಡಿದ್ದು?
ಬಾಲಿವುಡ್‌ನ ಗುಡ್ಡಿ ಸಿನೆಮಾದ ಮೂಲಕ ಹಿನ್ನೆಲೆ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು.

Call us

ಕನ್ನಡದ ಯಾವ ಹಾಡು ಹೆಚ್ಚು ಖುಷಿ ಕೊಟ್ಟಿದೆ?
ಎಲ್ಲಾ ಹಾಡುಗಳು ಖುಷಿ ನೀಡಿವೆ. ನಾ ನಿನ್ನ ಮರೆಯಲಾರೆ, ಬೆಸುಗೆ ಬೆಸುಗೆ, ಕನಸಲು ನೀನೆ. ಮನಸಲೂ ನೀನೆ, ಪ್ರಿಯತಮಾ ಕರುಣೆಯ ತೋರೆಯ.., ತೆರೆದಿದೆ ಮನೆ ಓ ಬಾ ಅತಿಥಿ.. ಎನೇನೋ ಆಸೆ ನೀ ತಂದ ಭಾಷೆ..  ಮುಂತಾದ ಹಾಡುಗಳು ಮತ್ತೆ ಮತ್ತೆ ಗುನುಗುವಂತೆ ಮಾಡಿವೆ. ಡಾ.ರಾಜ್‌ಕುಮಾರ್, ಎಸ್.ಪಿ. ಬಾಲಸುಬ್ರಮಣ್ಯಂ ಹಾಗೂ ವಾಣಿ ಜಯರಾಂ ಜೋಡಿ ಪ್ರಸಿದ್ಧವಾಗಿತ್ತು. ಕನ್ನಡಕ್ಕೆ ತಂದು ಅವಕಾಶ ನೀಡಿದ ಪುಟ್ಟಣ್ಣ ಕಣಗಾಲ್, ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಸಹಿತ ಹಲವು ನಿರ್ದೇಶಕರು, ಸಂಗೀತ ನಿರ್ದೇಕರು ಕನ್ನಡದಲ್ಲಿ ದೊಡ್ಡ ಅವಕಾಶವನ್ನೇ ತೆರೆದಿಟ್ಟಿದ್ದಿರು. ಅಂದಿನ ನೆನಪುಗಳನ್ನು ಮರೆಯಲಾಗದು.

ಹೊಸ ಬಗೆಯ ಸಂಗೀತದ ಬಗ್ಗೆ ತಮಗೇನನ್ನಿಸುತ್ತೆ?
ಬದಲಾವಣೆ ಎನ್ನುವುದು ನಿರಂತರ ಪ್ರಕ್ರಿಯೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಇಂದು ಎಲ್ಲಾ ಸಂಗೀತ ಸಾಧನಗಳಿಗೂ ಆಧುನಿಕತೆಯ ಟಚ್ ನೀಡಲಾಗಿದೆ. ಹಿಂದಿನ ಕಾಲದಷ್ಟು ಇಂಪು ಇಲ್ಲದಿದ್ದರೂ ಒಮ್ಮೊಮ್ಮೆ ಒಳ್ಳೆಯ ಸಂಗೀತ ಈಗಲೂ ಬರುತ್ತಿದೆ.

ರೀಯಾಲಿಟಿ ಶೋ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಿಯಾಲಿಟಿ ಶೋ ಮೂಲಕವೂ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಪ್ರತಿಭಾವಂತರಿಗೆ ಸಾಕಷ್ಟು ಅವಕಾಶಗಳಗೂ ದೊರೆಯುತ್ತಿದೆ. ರೇಡಿಯೋದಲ್ಲಿ ಮಾತ್ರ ಹಾಡುವುದನ್ನು ಕೇಳುವ ದಿನಗಳು ಬದಲಾಗಿ, ಹಾಡನ್ನು ನೋಡುವ ದಿನಗಳು ಬಂದಿವೆ.

ಭಾರತದ ಸಂಗೀತ ಪ್ರಕಾರಗಳಲ್ಲಿ ಯಾವುದು ಒಳ್ಳೆಯದು?
ಸಂಗೀತದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದಿಲ್ಲ. ಎಲ್ಲಾ ಪ್ರಕಾರದ ಸಂಗೀತಕ್ಕೂ ಅದರದ್ದೇ ಆದ ವಿಶೇಷತೆ ಇದೆ.

ಹೊಸ ಪೀಳಿಗೆಯ ಹಾಡುಗಾರರಿಗೆ ನಿಮ್ಮ ಸಲಹೆ ಏನು?
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟವರಿಗೆ ಮೊದಲು ಇರಬೇಕಾದದ್ದು ವಿನಯ. ಕೆಲಸದಲ್ಲಿ ಶ್ರದ್ಧೆ-ಭಕ್ತಿಯಂತೂ ಇರಲೇಬೇಕು. ಗುರು-ಹಿರಿಯರನ್ನು ಗೌರವಿಸುವ, ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣ ಅವರ ಘನೆತೆಯನ್ನು ತೋರಿಸುತ್ತದೆ. ಹಾರ್ಟ್ ಎಂಬ ಇಂಗ್ಲಿಷ್ ಅಕ್ಷರದಲ್ಲಿ ಆರ್ಟ್ ಎಂಬ ಪದವಿದ್ದಂತೆ, ಕಲಾವಿದ ಪ್ರೇಕ್ಷಕರ ಮನಗೆಲ್ಲಬೇಕಾದರೇ ಸಹೃಯಿಯೂ ಆಗಿರಬೇಕಾಗುತ್ತದೆ.

Vani-Jayaram-at-kundapur

Leave a Reply

Your email address will not be published. Required fields are marked *

seven − seven =