ಸಂದರ್ಶನ – ಮನುಷ್ಯತ್ವ ಹಾಗೂ ಮನುಷ್ಯ ಸಂವೇದನೆಯ ಸಾಹಿತ್ಯವೇ ಮೇಲು: ಸತೀಶ ಚಪ್ಪರಿಕೆ

Call us

Call us

ಕುಂದಾಪುರದ ತಾಲೂಕಿನ ಪುಟ್ಟ ಊರಾದ ಚಪ್ಪರಿಕೆಯಲ್ಲಿ ಜನಿಸಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತ ಸಾಧನೆ ಮಾಡುತ್ತಾ, ತಮ್ಮ ಕೃತಿಗಳ ಮೂಲಕ ಊರಿನ ಬೇರನ್ನು ಸೊಗಸಾಗಿ ಚಿತ್ರಿಸುತ್ತಾ ನಮ್ಮ ನಡುವಿನ ವಿಶೇಷ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ ಹಿರಿಯ ಪತ್ರಕರ್ತ, ಸಾಹಿತಿ ಸತೀಶ ಚಪ್ಪರಿಕೆ. ಅವರ ಜೀವನ ಪ್ರೀತಿ ಮತ್ತು ಮನುಷ್ಯತ್ವದ ಸೆಲೆ ಅವರನ್ನು ಎಲ್ಲರಿಂದಲೂ ಭಿನ್ನವಾಗಿ ನಿಲ್ಲುವಂತೆ ಮಾಡಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಪತ್ರಿಕಾರಂಗ, ಜೊತೆ ಜೊತೆಗೆ ನಡೆಸಿದ ಸಾಹಿತ್ಯ ಸೇವೆ ಅನನ್ಯ ವಿಶಿಷ್ಟವಾದುದು.

Call us

Call us

Call us

ಈ ಭಾರಿ ಚಪ್ಪರಿಕೆ ಅವರಿಗೆ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕುಂದಾಪ್ರ ಡಾಟ್ ಕಾಂ ಅವರೊಂದಿಗೆ ನಡೆಸಿದ ಕಿರು ಸಂದರ್ಶನ ಇಲ್ಲಿದೆ.

Call us

Call us

ಸಂದರ್ಶನ: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ: ತಮ್ಮ ಹುಟ್ಟೂರಿನಲ್ಲಿ ನಡೆಯುತ್ತಿರುವ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ಏನನ್ನಿಸುತ್ತಿದೆ?
ಚಪ್ಪರಿಕೆ: ನಾಗೂರು ನನ್ನ ಹುಟ್ಟೂರು. ನನ್ನ ಊರಿನವರು ತೋರಿದ ಈ ಪ್ರೀತಿವಿಶ್ವಾಸ ಮುಂದೆ ಪ್ರಪಂಚದ ಯಾವುದೇ ಪ್ರಶಸ್ತಿ, ಪುರಸ್ಕಾರಗಳೂ ಮುಖ್ಯ ಎನಿಸುವುದಿಲ್ಲ. ಊರಿನ ಹುಡುಗನೊಬ್ಬನಿಗೆ ಬಾರ, ಕೂಕಣ, ಮಾತಾಡಾ ಅಂತ ಹೇಳೋ ಮಾತುಗಳೇ ದೊಡ್ಡದೆನಿಸುತ್ತದೆ. ಯಾವುದೇ ಸಮಾರಂಭಗಳಲ್ಲಿ ವೇದಿಕೆ ಹತ್ತಬಾರದು ಎಂಬ ನಿಯಮವನ್ನು ಕಳೆದ ೨೫ ವರ್ಷಗಳಿಂದ ಪಾಲಿಸುತ್ತಾ ಬಂದಿದ್ದೇನೆ. ಈವರೆಗೆ ೨-೩ ಭಾರಿ ವೇದಿಕೆ ಹತ್ತಿರಬಹುದಷ್ಟೇ. ಆದರೆ ನನ್ನ ಊರು, ನನ್ನ ಜನರ ಪ್ರೀತಿ ಎಲ್ಲಕ್ಕಿಂತ ದೊಡ್ಡದಾಗಿ ಕಂಡಿತು. ಅಧ್ಯಕ್ಷನಾಗಬೇಕೆಂಬ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ.

ತಾವು ವೃತ್ತಿಯಲ್ಲಿ ಪತ್ರಕರ್ತರು. ತಮ್ಮನ್ನು ಸಾಹಿತಿಯಾಗಿಯೂ ಗುರುತಿಸುವುದು ಯಾವ ಅನುಭೂತಿ ನೀಡುತ್ತದೆ?
ಚಪ್ಪರಿಕೆ: ನಾನು ಮೂಲತಃ ಸಾಹಿತಿಯೇ. ಪಿಯುಸಿ ಓದುತ್ತಿದ್ದ ದಿನಗಳಲ್ಲಿ ಕವಿತೆ ಬರೆಯುತ್ತಿದ್ದೆ. ನನಗೆ ಅತ್ಯಂತ ಇಷ್ಟವಾದುದು ಕಥೆ ಬರೆಯುವುದು. ಸಣ್ಣ ಕಥೆಗೆ ಪ್ರಜಾವಾಣಿ ಕಥಾ ಸ್ವರ್ಧೆಯಲ್ಲಿ ಎರಡು ಭಾರಿ ಬಹುಮಾನ ಬಂದಿತ್ತು. ಬರೆಯಲು ಆರಂಭಿಸಿದ ಮೇಲೆ ಪತ್ರಕರ್ತನಾಗಿದ್ದು. ಚನ್ನಾಗಿ ಬರೆಯುತ್ತೇನೆ ಎಂದು ತಿಳಿದ ಮೇಲೆ ಪತ್ರಿಕೆಗೆಯಲ್ಲಿ ನೇಮಿಸಿಕೊಂಡದ್ದು. ಮೊದಲೆಲ್ಲಾ ಸೃಜನಾತ್ಮಕವಾಗಿದ್ದವರು ಪತ್ರಕರ್ತರಾಗುತ್ತಿದ್ದರು. ಕಾಲೇಜು, ಪದವಿ ಪಡೆಯುವ ಅಗತ್ಯವಿರಲಿಲ್ಲ. ಬರೆಯಲು ಬರುವುದೇ ಕೆಲಸಕ್ಕೆ ಮಾನದಂಡವಾಗಿತ್ತು. ಆದರೆ ಇಂದಿನ ಸ್ಥಿತಿಯೇ ಬದಲಾಗಿದೆ. ಪತ್ರಿಕಾರಂಗ ಸಾಮಾಜಿಕ, ಸಾಂಸ್ಕೃತಿಕ ಸಂವೇದನೆಗಳಿರುವವರಿಗೆ ಮಣೆ ಹಾಕಬೇಕೆ ಹೊರತು ಪದವಿ ಹಿಡಿದು ಬಂದವರಿಗೆ ಮಣೆ ಹಾಕಬಾರದು ಎಂಬುದು ನನ್ನ ಆಶಯ.

ನಿಮ್ಮ ದೃಷ್ಠಿಯಲ್ಲಿ ಸಾಹಿತ್ಯ ಅಂದ್ರೆ ಏನು?
ಚಪ್ಪರಿಕೆ: ಅದು ತನ್ನ ಸುತ್ತಮುತ್ತಲಿನ ಸಮಾಜ, ಸಂಸ್ಕೃತಿ ಹಾಗೂ ಬದುಕನ್ನು ಸೂಕ್ಷ್ಮವಾಗಿ ಗಮನಿಸಿ, ಅರ್ಥಮಾಡಿಕೊಂಡು ಅದನ್ನು ಬರವಣಿಗೆಯ ರೂಪಕ್ಕಿಳಿಸುವ ಶಕ್ತಿ. ಈ ಸಾಮರ್ಥ್ಯವಿದ್ದವರು ಉತ್ತಮ ಸಾಹಿತಿಯಾಗಬಲ್ಲರು. ಸಾಹಿತಿಗೆ ಬದುಕು, ಸಮಾಜ, ಪರಂಪರೆ ಎಲ್ಲವನ್ನೂ ಗೃಹಿಸುವ, ಅರ್ಥಮಾಡಿಕೊಳ್ಳುವ ಒಂದು ವಿಶೇಷ ಗುಣವಿರಬೇಕು. ಜೊತೆಗೆ ಅದನ್ನು ಓದುಗನಿಗೆ ಮುಟ್ಟುವಂತಹ ಬರವಣಿಗೆಯೂ ಬೇಕು.

ಇಂದಿನ ಸಾಹಿತ್ಯ ಕ್ಷೇತ್ರದ ಸವಾಲುಗಳೇನು?
ಚಪ್ಪರಿಕೆ: ಸಾಹಿತ್ಯಕ್ಕೆ ಇರಬೇಕಾದ್ದು ಮನುಷ್ಯತ್ವ ಹಾಗೂ ಮನುಷ್ಯ ಸಂವೇದನೆ. ಆದರೆ ಜಾತಿ, ಧರ್ಮ, ಪಂಥ, ಎಡ, ಬಲದ ನಡುವೆ ಸಾಹಿತ್ಯ ನಲುಗುತ್ತಿದೆ. ಪಂಥೀಯ ಆದರದ ಮೇಲೆ ರಚನೆಗೊಳ್ಳುವ ಸಾಹಿತ್ಯದಿಂದ ಸಮಾಜಕ್ಕೆ ಒಳ್ಳೆಯದಾಗದು. ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿಗಳಿರಬೇಕೆ ಹೊರತು ರಾಜಕೀಯ, ಧಾರ್ಮಿಕ ಜವಾಬ್ದಾರಿಗಳಿರಬಾರದು. ಸಾಹಿತಿಯಾದವನಿಗೆ ಎಲ್ಲಾ ಬಗೆಯ ಪ್ರಜ್ಞೆಯಿರಬೇಕು. ಆದರೆ ಪಕ್ಷ, ಪಂಥ, ಮತ ಧರ್ಮಗಳಿಗೆ ಒಡ್ಡಿಕೊಳ್ಳಬಾರದು. ಎಲ್ಲವನ್ನೂ ಮೀರಿ ಮನುಷ್ಯ ಸಂವೇದನೆಗೆ ಮಿಡಿಯುವಂತಿರಬೇಕು.

ತಮ್ಮ ಸಾಹಿತ್ಯ ರಚನೆಗೆ ಪ್ರೇರಣೆ ಏನು?
ಚಪ್ಪರಿಕೆ: ನನ್ನೂರು, ಊರಿನ ಜನ ಮತ್ತು ಸುತ್ತಲಿನ ಪರಿಸರ ಸಾಹಿತ್ಯಕ್ಕೆ ಪ್ರೇರಣೆ. ನನ್ನ ಸುತ್ತಮುತ್ತಲಿನ ಜನರೇ ಸಾಹಿತಿಗಳು. ಕಲ್ಕುಟಕ ಸೀತು, ನರಸಿಂಹ ದಾಸರು, ಸೀನ ದಾಸರು, ಸದಾಶಿವ ಮಾಸ್ಟರ್ ಹೀಗೆ ಒಂದೊಂದು ವ್ಯಕ್ತಿಯೂ ಇಡೀ ಜೀವನಕ್ಕೆ ಸ್ಪೂರ್ತಿ. ಬಿಎಸ್ಸಿ ಸೇರಿದಾಗ ಪಾಠ ಪುಸ್ತಕಕ್ಕಿಂತ ಕಥೆ ಕಾದಂಬರಿ ಓದಿದ್ದೇ ಹೆಚ್ಚು. ಯಾವುದೇ ಸಾಹಿತಿಯಾಗಲಿ ಬರೆಯಲು ಆರಂಭಿಸುವ ಮೊದಲು ತನ್ನ ಭಾಷೆಯಲ್ಲಿ, ತನ್ನ ಪರಿಸರದಲ್ಲಿ ಯಾರು ಹೇಗಿದ್ದಾರೆ ಎಂಬುದನ್ನು ತಿಳಿದಿರುಬೇಕು. ಇತರರನ್ನು ಅರಿಯುವ ಸೂಕ್ಷ್ಮ ಮನೋಭಾವ ಇದ್ದರೆ ಬರವಣಿಗೆಯೂ ಸಲೀಸು.

ಓದಿನಲ್ಲಿ ಮೂರು ವಿಧವಿದೆ. ಒಂದು ನಮ್ಮ ಸುತ್ತಮುತ್ತಲಿನವರನ್ನು ಅರ್ಥಮಾಡಿಕೊಳ್ಳುವುದು, ಎರಡನೆಯದು ಪುಸ್ತಕವನ್ನು ಓದುವುದು ಮತ್ತು ಮೂರನೇಯದು ಸುತ್ತಾಟ. ಸುತ್ತಾಡುವುದುರಿಂದ ಜೀವನದ ದೃಷ್ಠಿಕೋನ ಬದಲಾಗುತ್ತದೆ. ಇವೆಲ್ಲವೂ ಬದುಕಿನ ಒಳನೋಟಗಳನ್ನು ಅರಿಯಲು ಸ್ಥೂರ್ತಿಯಾಗುತ್ತದೆ. ಆ ನೆಲೆಯಲ್ಲಿ ನಾನು ಅದೃಷ್ಠವಂತ ಅಂದುಕೊಂಡಿದ್ದೇನೆ. ಬಾಲ್ಯದಿಂದ ಇಲ್ಲಿನವರೆಗೆ ಈ ಎಲ್ಲದರ ಕಾರಣದಿಂದ ಒಂದು ಸ್ವಷ್ಟ ದೃಷ್ಠಿಕೋನ ದೊರೆಯಿತು. ಜೀವನದ ಚಿಕ್ಕ ಚಿಕ್ಕ ಸಂಗತಿಗಳನ್ನು ಅರ್ಥಮಾಡಿಕೊಳ್ಳುವುದು ಬರವಣೆಗೆಗೆ ಸ್ಪೂರ್ತಿ ನೀಡುತ್ತದೆ.

ಕನ್ನಡ ಭಾಷೆಯ ಅಳಿವು ಉಳಿವಿನ ಕೂಗು ಹಾಗಿಯೇ ಇದೆ. ಅದಕ್ಕೇನು ಮಾಡಬಹುದು?
ಚಪ್ಪರಿಕೆ: ಭಾಷೆಯ ಅಳಿವು ಉಳಿವು ಇರುವುದು ನಮ್ಮ ಕೈಯಲ್ಲೇ. ಜಗತ್ತಿನಲ್ಲಿ ದಿನಕ್ಕೊಂದು ಭಾಷೆ ಸಾಯುತ್ತಿದೆ. ಭಾಷೆಯ ಆತಂಕ ಕನ್ನಡಕ್ಕೆ ಮಾತ್ರ ಸೀಮಿತವಾದುದಲ್ಲ. ಭಾಷೆಯ ಬಗೆಗೆ ಪ್ರೀತಿ ಇಲ್ಲದೇ ಇದ್ದರೆ ಅದರ ಉಳಿವು ಹೇಗೆ ಸಾಧ್ಯವಿದೆ. ಆದಾಗ್ಯೂ ಇಂಗ್ಲಿಷ್ ಪ್ರಭಾವ, ಜಾಗತೀಕರಣ ಎಲ್ಲವನ್ನೂ ಮೆಟ್ಟಿನಿಂತಿರುವ ಒಂದು ಭಾಷೆ ಕನ್ನಡ. ಕನ್ನಡದಕ್ಕೆ ೨೫೦೦ ವರ್ಷದ ಇತಿಹಾಸವಿದೆ. ನಮ್ಮ ಕುಂದಗನ್ನಡಕ್ಕೆ ೧೫೦೦ ವರ್ಷಗಳ ಇತಿಹಾಸವಿದೆ. ಭಾಷೆ ಉಳಿವಿನ ದಾರಿಯೆಂದರೆ ವ್ಯಾಪಕವಾಗಿ ಬಳಸುವುದು. ಕುಂದಾಪುರದವರಿಗೆ ಕುಂದಾಪ್ರ ಕನ್ನಡ ಮಾತನಾಡಲು ಏನು ಸಮಸ್ಯೆ. ನಾಚಿಕೆ ಏಕೆ? ಅದನ್ನು ತಮಾಷೆಯ ವಿಷಯವಾಗಿ ಮಾತ್ರ ಏಕೆ ತೆಗೆದುಕೊಳ್ಳಬೇಕು. ಭಾಷೆ ಹೃದಯಕ್ಕೆ ಹತ್ತಿರವಾದುದು. ಎಲ್ಲಿದ್ದರೂ ಹೃದಯದಿಂದ ಮೂಡುವ ಭಾಷೆಯನ್ನೇ ಆಡುಭಾಷೆಯನ್ನಾಗಿಸಿಕೊಂಡಾಗ ಭಾಷೆ ಉಳಿವು ಸಾಧ್ಯವಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಬೇಕೆನ್ನುತ್ತೀರಾ?
ಚಪ್ಪರಿಕೆ: ೧೦ನೇ ತರಗತಿಯವರೆಗೆ ಮಾತೃಭಾಷೆ ಶಿಕ್ಷಣ ಕಡ್ಡಾಯವಾಗಬೇಕು. ಅದರೊಂದಿಗೆ ಇಂಗ್ಲೀಷ್ ಹಿಂದಿಯನ್ನೂ ಕಲಿಸಿ. ಒಂದು ಮಗುವಿಗೆ ೫ ಭಾಷೆಯನ್ನು ಕಲಿಯುವ ತಾಕತ್ತಿರುತ್ತೆ. ಹತ್ತರ ವರೆಗೆ ಮೂರು ಭಾಷೆಯನ್ನು ಕಲಿಸಿದರೆ ಏನೂ ಆಗದು. ಇಂಗ್ಲೀಷ ಮಾಧ್ಯಮ ಶಾಲೆಗಳಲ್ಲಿಯೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿಸಬೇಕು. ಪ್ರವಾಹದ ವಿರುದ್ಧ ಈಜಲು ಸದ್ಯಕ್ಕಂತೂ ಸಾಧ್ಯವಿಲ್ಲ. ಹಾಗಾಗಿ ಎಲ್ಲವನ್ನೂ ಕಲಿಸುವ ಕೆಲಸವಾಗಬೇಕು.

ಕುಂದನಾಡಿನ ಬಗೆಗೆ
ಚಪ್ಪರಿಕೆ: ಎಲ್ಲಾ ಭಾಷೆ ಮತ್ತು ಪ್ರದೇಶಕ್ಕಿರುವ ಸಮಸ್ಯೆಗಳು ಕುಂದಾಪುರ ತಾಲೂಕಿಗಿದೆ. ಆದರೆ ಕುಂದಾಪುರದ ಜನರಲ್ಲಿನ ಸಾಹಸ ಮನೋವೃತ್ತಿ ಎಲ್ಲೆಡೆಯೂ ಇಲ್ಲ. ಅದು ಹಾಗೇಯೆ ಉಳಿಯಲಿ ಎಂಬುದು ನನ್ನ ಆಶಯ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಆಗುತ್ತಿರುವ ಕೋಮು ಸಂಘರ್ಷದ ಘರ್ಷಣೆಗಳು ಅದೇ ಜಿಲ್ಲೆಯ ಉತ್ತರ ಭಾಗದಲ್ಲಿ ಆಗುತ್ತಿಲ್ಲ ಎಂಬುದು ಈ ಭಾಗದ ಜನರ ಜಾಗೃತ ಸಾಮಾಜಿಕ ಪ್ರಜ್ಞೆಯನ್ನು ಸೂಚಿಸುತ್ತದೆ. ಇಲ್ಲಿನ ಕೋಮು ಸೌಹಾರ್ದತೆ ಹಾಗೆ ಉಳಿಯಬೇಕು ಎಂಬುದು ನನ್ನ ಆಶಯ.

ಕುಂದಗನ್ನಡಕ್ಕೆ ಅರೆಭಾಷಾ ಅಕಾಡೆಮಿ ಬೇಕೆನ್ನುತ್ತಿದ್ದಾರಲ್ಲ
ಚಪ್ಪರಿಕೆ: ಖುರ್ಚಿ, ದುಡ್ಡು, ಅಧಿಕಾರಕ್ಕಾಗಿ ಅಕಾಡೆಮಿ ಮಾಡುವ ಬದಲು ಕುಂದಾಪ್ರ ಭಾಷೆ ಎಷ್ಟು ಬರೆದಿದ್ದಿರಿ ಮಾತನಾಡಿದ್ದೀರಿ ಹೇಳಿ. ಅಕಾಡೆಮಿಯಿಂದ ಏನು ಪ್ರಯೋಜನ. ಆದರೆ ಒಂದು ಅಧ್ಯಯನ ಕೇಂದ್ರದ ಅಗತ್ಯವಿದೆ. ಕುಂದಗನ್ನಡ ಭಾಷೆ, ಇತಿಹಾಸದ ಬಗೆಗೆ ಅಧ್ಯಯನ ಹಾಗೂ ಬೆಳವಣಿಗೆಗೆ ಅಧ್ಯಯನ ಕೇಂದ್ರವೊಂದು ಬೇಕಿದೆ.

ಹಿರಿಯ ಪತ್ರಕರ್ತರಾಗಿ ಯುವ ಪತ್ರಕರ್ತರಿಗೆ ಸಲಹೆ ಏನು?
ಚಪ್ಪರಿಕೆ: ಮನುಷ್ಯತ್ವವನ್ನು ಮೊದಲು ಕಲಿಯಬೇಕು. ಪತ್ರಿಕೋದ್ಯಮ ಪತ್ರಕರ್ತರಲ್ಲೊಂದು ಅಹಂಕಾರ ತಂದುಕೊಡುತ್ತದೆ. ಅದನ್ನು ಮೊದಲು ಬಿಟ್ಟುಬಿಡಬೇಕು. ಪತ್ರಕರ್ತರು ಯಾವಾಗಲೂ ಸಮಾಜದ ಪರವಾಗಿ ನಿಲ್ಲುತ್ತಾರೆ, ಸಮಾಜ ಪರವಾಗಿಯೇ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿಂದ ಸಮಾಜವೂ ಪತ್ರಕರ್ತರಿಗೆ ರತ್ನಗಂಬಳಿ ಹಾಸುತ್ತದೆ. ಕಾರ್ಯಕ್ರಮದಲ್ಲಿ, ಮೊದಲ ಸಾಲು, ಮೊದಲ ಖುರ್ಚಿ ನೀಡುವುದು ನಾವು ಮೇಲಿಂದ ಇಳಿದು ಬಂದವರು ಎಂಬ ಕಾರಣಕ್ಕಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಕುಂದಾಪ್ರ ಕನ್ನಡವನ್ನು ಇಷ್ಟು ನಿರರ್ಗಳವಾಗಿ ಮಾತನಾಡುತ್ತಿರುವುದು ಹೇಗೆ?
ಕುಂದಾಪ್ರ ಕನ್ನಡ ಮಾತಾಡುಕೆ ನನಗೆ ನಾಚ್ಕಿ ಇಲ್ಲ. ಎಲ್ ಹ್ವಾರೂ ಕುಂದಾಪ್ರ ಭಾಷ್ಯಗೆ ಮಾತಾಡುಕ್ ಸುರು ಮಾಡ್ತೆ. ನಮ್ ಭಾಷಿ ಬಗ್ಗೆ ಯಾಕ್ ನಾಚ್ಕಿ ಪಡ್ಕಣ್ಕ್. ಕುಂದಾಪ್ರ ಕನ್ನಡು ಕನ್ನಡಕ್ಕ್ ಹತ್ರವಾದ್ ಭಾಷಿ.

ಸತೀಶ್ ಚಪ್ಪರಿಕೆ ಅವರ ಬಗೆಗೆ:
ಸತೀಶ್ ಚಪ್ಪರಿಕೆ ಅವರು ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮದ ಚಪ್ಪರಿಕೆ ಎನ್ನುವ ಅತ್ಯಂತ ಗ್ರಾಮೀಣ ಪ್ರದೇಶದವರಾದರೂ ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಪತ್ರಕರ್ತರಾಗಿದ್ದಾರೆ. ಪದವಿಪೂರ್ವ ಶಿಕ್ಷಣದ ವರೆಗೆ ತಾಲೂಕಿನಲ್ಲೇ ಓದಿ ಅನಂತರ ಬೆಂಗಳೂರು ವಿವಿ.ಯಲ್ಲಿ ಬಿ.ಎಸ್ಸಿ. ಪದವಿ ಪಡೆದು ಅಣ್ಣಾಮಲೈ ವಿ.ವಿ.ಯಲ್ಲಿ ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿರುತ್ತಾರೆ. ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿ.ವಿ.ಯಲ್ಲಿಯೂ ಅಧ್ಯಯನ ಮಾಡಿರುವ ಹೆಗ್ಗಳಿಕೆ ಇವರದ್ದು.

ಬ್ರಿಟಿಷ್ ಚೆವೆನ್ನಿಂಗ್ ಸ್ಕಾಲರ್ ಆಗಿರುವ ಸತೀಶರವರು ಸುಮಾರು ೨೫ ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಹಾಗೂ ಪ್ರಜಾವಾಣಿಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಚಪ್ಪರಿಕೆಯವರು ಹಲವು ವರ್ಷಗಳ ಕಾಲ ಕ್ರೀಡಾ ವರದಿಗಾರರಾಗಿ ದುಡಿದಿದ್ದಾರೆ. ದಿ ಸಂಡೆ ಇಂಡಿಯನ್ – ಕನ್ನಡ ಪತ್ರಿಕೆಯ ಹಿರಿಯ ಸಂಪಾದಕರಾಗಿ, ವಿಆರ್‌ಎಲ್ ಮೀಡಿಯಾ ಲಿ.ನ ಒಡೆತನದ ಪತ್ರಿಕೆಯಲ್ಲಿ ಮುಖ್ಯ ಸಂಪಾದಕರಾಗಿಯೂ ಕೆಲಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮಿಡಿಯಾ ಮತ್ತು ಕಮ್ಯೂನಿಕೇಷನ್‌ನಲ್ಲಿ ಅಸಿಸ್ಟೆಂಟ್ ಪ್ರೋಫೆಸರ್ ಆಗಿಯೂ, ಬೆಂಗಳೂರಿನ ಸಿಟಿ ಮಿಡಿಯಾದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವೆರ‍್ಬಿಂದೆನ್ ಕಮ್ಯೂನಿಕೇಶನ್ ಪ್ರೈ.ಲಿ.ನ ಆಡಳಿತ ನಿರ್ದೇಶಕರಾಗಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ಗಣ್ಯಾತಿಗಣ್ಯರನೇಕರನ್ನು ಸಂದರ್ಶನ ಮಾಡಿರುವ ಸತೀಶ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ’ಮಾತೊಂದು ಮೌನ ಕಣಿವೆ’, ’ಹಸಿರು ಹಾದಿ’, ’ವಿಶ್ವಕಪ್ ಕ್ರಿಕೆಟ್’, ’ಬೇರು’, ’ಥೇಮ್ಸ್ ತಟದ ತವಕ ತಲ್ಲಣ’, ’ದೇವಕ್ರು’, ’ಗರ್ಭ’, ’ಎಡಮಾವಿನ ಹೊಳೆಯ ದಡದಲ್ಲಿ’ ಮುಂತಾದುವು ಇವರ ಪ್ರಕಟಿತ ಕೃತಿಗಳು. ಚಪ್ಪರಿಕೆಯವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

One thought on “ಸಂದರ್ಶನ – ಮನುಷ್ಯತ್ವ ಹಾಗೂ ಮನುಷ್ಯ ಸಂವೇದನೆಯ ಸಾಹಿತ್ಯವೇ ಮೇಲು: ಸತೀಶ ಚಪ್ಪರಿಕೆ

Leave a Reply

Your email address will not be published. Required fields are marked *

three × 4 =