ಹೆಚ್ಚುತ್ತಿರುವ ಕೊರೋನಾ ಸೋಂಕು, ಭಯ. ಜಿಲ್ಲಾಡಳಿತದ ಕೈಮೀರುತ್ತಿದೆಯೇ ಕೊರೋನಾ ನಿಯಂತ್ರಣ?

Call us

Call us

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ,ಜೂ.2: ವಿವಿಧ ರಾಜ್ಯ ಹಾಗೂ ದೇಶಗಳಿಂದ ಬಂದು ಸರಕಾರಿ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದವರ ಕೋವಿಡ್-19 ಪರೀಕ್ಷಾ ವರದಿಗಳು ಈಗ ಬರಲಾರಭಿಸಿದೆ. ಅವುಗಳಲ್ಲಿ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿರುವಂತೆ ಜಿಲ್ಲೆಯ ಜನರಲ್ಲಿ ಆತಂಕವೂ ಹೆಚ್ಚುತ್ತಿದೆ.

Call us

Call us

ಕಳೆದೆರಡು ದಿನಗಳಿಂದ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು, ಇಂದೂ ಕೂಡ ಗರಿಷ್ಠ ಪ್ರಮಾಣದ ಪಾಸಿಟಿವ್ ಪ್ರಕರಣ ವರದಿಯಾಗುವ ಸೂಚನೆ ದೊರೆತಿದೆ. ಇಲ್ಲಿಯ ತನಕ ಉಡುಪಿ ಜಿಲ್ಲೆಯ ಸುಮಾರು 27 ಕಡೆಗಳಲ್ಲಿ ಸೀಲ್ ಡೌನ್, ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಈ ಪೈಕಿ ಮಂಗಳವಾರ ಬೈಂದೂರು ಹಾಗೂ ಕುಂದಾಪುರ ತಾಲೂಕು 15ಕ್ಕೂ ಹೆಚ್ಚು ಪ್ರದೇಶಗಳನ್ನು ಸೀಲ್‌ಡೌನ್, ಕಂಟೈನ್‌ಮೆಂಟ್ ಝೋನ್ ಮಾಡಲಾಗುತ್ತಿದೆ.

ಹೋಮ್ ಕ್ವಾರಂಟೈನ್ ಕಂಟಕ, 6,616 ವರದಿ ಬಾಕಿ:
ಉಡುಪಿ ಜಿಲ್ಲೆಯಲ್ಲಿ ಸರಕಾರಿ ಕ್ವಾರಂಟೈನ್ ಮುಗಿಸಿ ಹೋಂ ಕ್ವಾರಂಟೈನಿನಲ್ಲಿ ಇರುವವರಿಗೆ ಪಾಸಿಟಿವ್ ಬರುವ ಪ್ರಕರಣ ಒಂದೆಡೆ ಹೆಚ್ಚುತ್ತಿದ್ದರೇ, ಜಿಲ್ಲೆಯ ಪೊಲೀಸರು ಹಾಗೂ ಇತರರಲ್ಲಿಯೂ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದರಿಂದ ಸಮುದಾಯಕ್ಕೂ ಹರಡುತ್ತಿರುವ ಭೀತಿ ಹೆಚ್ಚುತ್ತಿದೆ. 14 ದಿನ ಸರ್ಕಾರಿ ಕ್ವಾರಂಟೈನ್ ಮುಗಿಸಿ ತೆರಳಿದ ಒಂದಿಷ್ಟು ಮಂದಿಯ ವರದಿಗಳು ಬರುವುದು ಇನ್ನೂ ಬಾಕಿ ಇದೆ. ಈ ನಡುವೆ ಕೆಲವರು ತಿರುಗಾಟ ಮಾಡುತ್ತಿರುವ ಬಗ್ಗೆ ಅಲ್ಲಲ್ಲಿ ದೂರುಗಳು ಕೇಳಿ ಬರುತ್ತಲೇ ಇವೆ. ಇದರಿಂದಾಗಿ ಸಮುದಾಯಕ್ಕೆ ಹರಡುವ ಆತಂಕವಿದೆ. ಈ ನಡುವೆ ಗರ್ಭಿಣಿ ಮಹಿಳೆಯ ವರದಿ ಪಡೆಯಲು ಮೊದಲ ಆದ್ಯತೆಯನ್ನು ನೀಡಲಾಗುವುದೆಂದು ಸರಕಾರ ಹೇಳಿತ್ತಾದರೂ 15 ದಿನ ಕಳೆದರೂ ಅವರ ವರದಿ ಕೈಸೇರದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಸೀಲ್ ಡೌನ್,ಕಂಟೈನ್‌ಮೆಂಟ್ ಝೋನ್ ತಲೆನೋವು:
ಕೋವಿಡ್ ಪಾಸಿಟಿವ್ ಬರುವ ವ್ಯಕ್ತಿ ವಾಸವಿರುವ ಮನೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡುವುದು, ಆ ಭಾಗದಲ್ಲಿ ಜನಸಂಚಾರಕ್ಕೆ ನಿರ್ಬಂಧ ವಿಧಿಸುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಲಾಕ್ ಡೌನ್ ಸಂಕಷ್ಟ ಮುಗಿಯಿತು ಅಂದುಕೊಳ್ಳುತ್ತಿದ್ದವರಿಗೆ ಹೊಸ ಸಂಕಷ್ಟ ಎದುರಾಗಿದೆ. ಕಂಟೈನ್’ಮೆಂಟ್ ಝೋನಿನಲ್ಲಿ ಜನಸಂಚಾರಕ್ಕೆ ನಿರ್ಬಂಧ ಇರುವುದರಿಂದ ಪಾಸಿಟಿವ್ ಬರುವ ವ್ಯಕ್ತಿಯ ಮನೆಯ ಸುತ್ತಲಿನವರೂ ತೊಂದರೆ ಅನುಭವಿಸುವಂತಾಗಿದೆ. ಪಾಸಿಟಿವ್ ಬರುವ ವ್ಯಕ್ತಿಗಳ ವರದಿ ಕೈಸೇರುತ್ತಿದ್ದಂತೆಯೇ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಅವರ ವಿಳಾಸ ಪತ್ತೆಹಚ್ಚಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿದ್ದು, ಇದು ಸಿಬ್ಬಂದಿಗಳ ಕೆಲಸದ ಒತ್ತಡವನ್ನೂ ಹೆಚ್ಚಿಸಿದೆ.

Call us

ಶನಿವಾರ ಹಾಗೂ ಭಾನುವಾರ ವಡೇರಹೋಬಳಿ, ಗುಜ್ಜಾಡಿ, ಬಸ್ರೂರು, ನೆಂಪು, ಕೋಡಿ, ಹಳ್ನಾಡು, ಉಳ್ಳೂರು–11, ಬಡಾಕೆರೆ, ಕಬ್ಸೆ ಗ್ರಾಮದ ಪಾಸಿಟಿವ್ ಬಂದ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು. ಸೋಮವಾರ ನಾಡ ಗ್ರಾಮದ ಚುಂಗಿಗುಡ್ಡೆ, ಆಲೂರು ಗ್ರಾಮದ ಸೆಳಕೋಡು, ಪಡುವರಿ ಗ್ರಾಮದ ದೊಂಬೆ, ಯಡ್ತರೆ ಗ್ರಾಮದ ಕುದ್ರುಹಿತ್ಲು, ಸಣ್ಣಹಿತ್ಲು, ಬಿಜೂರು ಗ್ರಾಮದ ಗಂಟಿಹೊಳೆ, ಕೆರ್ಗಾಲು, ಹರ್ಕೂರು, ಕೋಟತಟ್ಟುವಿನಲ್ಲಿ ಸೀಲ್ ಡೌನ್ ಮಾಡಲಾಗಿತ್ತು. ಬೈಂದೂರು ತಾಲೂಕಿನಲ್ಲಿ ಇನ್ನೂ ಕೆಲವೆಡೆ ಸೀಲ್‌ಡೌನ್, ಕಂಟೈನ್‌ಮೆಂಟ್ ಝೋನ್ ಮಾಡುವ ಸಾಧ್ಯತೆ ಇದೆ.  ಸಂಪರ್ಕಿತರ ಗಂಟಲ ದ್ರವದ ಮಾದರಿಯನ್ನು ಪರೀಕ್ಷಾ ವರದಿಗಾಗಿ ಕಳುಹಿಸಲಾಗುತ್ತಿದೆ. ಸೋಂಕು ಪತ್ತೆಯಾದವರ ಮನೆ ಇರುವ ಪ್ರದೇಶದ 100 ಮೀಟರ್‌ ಸುತ್ತ ಚಟುವಟಿಕೆ ನಿರ್ಬಂಧಿಸಲಾಗುತ್ತದೆ.

ಜಿಲ್ಲೆಯಲ್ಲಿ ಸದ್ಯ ಒಟ್ಟು 260 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 64 ಮಂದಿ ಬಿಡುಗಡೆಯಾಗಿದ್ದು, 195 ಮಂದಿ ಕೊರೋನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ.

ಜಿಲ್ಲಾಡಳಿತದ ಕೈಮೀರುತ್ತಿದೆಯೇ?
ಉಡುಪಿ ಜಿಲ್ಲೆಯಲ್ಲಿ ಎಪ್ರಿಲ್ 29 ರಿಂದ ಮೇ.14ರ ತನಕವೂ ಕೇವಲ 3 ಪ್ರಕರಣಗಳು ವರದಿಯಾಗಿದ್ದು, ಅವರೆಲ್ಲೂ ಗುಣಮುಖರಾಗಿ ಬಿಡುಗಡೆಯಾಗಿದ್ದರು. ಆದರೆ ಹೊರರಾಜ್ಯಗಳಿಂದ ಜನರು ಆಗಮಿಸುತ್ತಿದ್ದಂತೆ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗಿದೆ. ಎಲ್ಲಾ ವ್ಯವಸ್ಥೆಯನ್ನು ತಾವೇ ಮಾಡುವುದಾಗಿ ಜಿಲ್ಲಾಡಳಿತ ಹೇಳಿಕೊಂಡಿತ್ತಾದರೂ, ಬೈಂದೂರು ಕುಂದಾಪುರ ಭಾಗದ ಕೆಲವು ಸರಕಾರ ಕ್ವಾರಂಟೈನ್’ಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೇ ಆರಂಭದಲ್ಲಿ ಜನರು ಪರದಾಡಿದ್ದರು. ಬಳಿಕ ಶಾಸಕರು, ಸಂಸದರು ಹಾಗೂ ಸಚಿವ ಮಧ್ಯಸ್ಥಿಕೆ ಹಾಗೂ ಕೆಲವು ಸ್ವಯಂ ಸೇವಕರು ಸೇವೆಯಲ್ಲಿ ತೊಡಗಿಕೊಂಡಿದ್ದರಿಂದ ಒಂದಿಷ್ಟು ಸಮಸ್ಯೆಗಳು ಬಗೆಹರಿದಿದ್ದವು.  ಕುಂದಾಪ್ರ ಡಾಟ್ ಕಾಂ ವರದಿ.

Click here

Click Here

Call us

Call us

Visit Now

ಮಂಬೈನಿಂದ ಜನರ ಆಗಮಿಸುವ ಹೊತ್ತಿನಲ್ಲಿ ನಿಪ್ಪಾಣಿ ಸಮೀಪದ ಕರ್ನಾಟಕ ಗಡಿಯಲ್ಲಿ ಜನರು ಗುಂಪು ಗುಂಪಾಗಿಯೇ ಪ್ರವೇಶಿಸುತ್ತಿದ್ದರು. ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಇನ್ನು ಸರಕಾರಿ ಕ್ವಾರಂಟೈನಿಗೆ ಒಳಗಾದ ನಂತರವೂ ವ್ಯಕ್ತಿಗೆ ಪಾಸಿಟಿವ್ ಬಂದ ನಂತರ ಅವರೊಂದಿಗೆ ಇರುವವರನ್ನು ಪ್ರತ್ಯೇಕಿಸಿ ಇಡುವಲ್ಲಿ ಹಾಗೂ ಸ್ಯಾನೀಟೈಜ್ ಮಾಡುವಲ್ಲಿ ಅಲ್ಲಿನ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದರು. ಇದರಿಂದ ಕೆಲವೆಡೆ ಸರಕಾರಿ ಕ್ವಾರಂಟೈನಲ್ಲಿ ಇದ್ದವರು ಯಾತನೆ ಅನುಭವಿಸುವಂತಾಗಿತ್ತು.

ಜಿಲ್ಲೆಯಲ್ಲಿ ಸುಮಾರು 8,000 ವರದಿಗಳು ಬಾಕಿ ಇರುವ ಹೊತ್ತಿನಲ್ಲಿ ಸರಕಾರದ ಹೊಸ ನಿಯಮದಂತೆ 7 ದಿನ ಕ್ವಾರಂಟೈನ್ ಬಂದದ್ದರಿಂದ ಈಗಾಗಲೇ 14 ದಿನ ಕ್ವಾರಂಟೈನ್ ಮುಗಿಸಿ ವರದಿಗಾಗಿ ಕಾಯುತ್ತಿದ್ದವರನ್ನು, 7 ದಿನ ಪೂರ್ಣಗೊಂಡಿವರನ್ನು ಬಿಡುಗಡೆಗೊಳಿಸಲಾಯಿತು. ಈಗ ಅವರ ವರದಿಗಳಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಲಾಕ್ ಡೌನ್ 1 ರಿಂದ 4ರ ತನಕವೂ ಕಟ್ಟುನಿಟ್ಟಿನ ಕ್ರಮ ಅನುಷ್ಠಾನಕ್ಕೆ ತರಲಾಗಿತ್ತಾದರೂ ಸದ್ಯ ಜನರು ನಿರಾಳರಾಗವ ಹೊತ್ತಿನಲ್ಲಿ ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಒಟ್ಟಿನಲ್ಲಿ ವರದಿ ಕೈಸೇರುವ ಮೊದಲೇ ಕ್ವಾರಂಟೈನ್ ಇದ್ದವರನ್ನು ಮನೆಗೆ ಕಳುಹಿಸಿರುವುದೇ ಇಷ್ಟೆಲ್ಲಾ ಆತಂಕಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಹೆಚ್ಚುವರಿ ಕೋವಿಡ್-19 ಆಸ್ಪತ್ರೆಗೆ ಚಿಂತನೆ:
ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ 3,500ಕ್ಕೂ ಹೆಚ್ಚಿನ ಮಂದಿಯನ್ನು ಕ್ವಾರಂಟೈನ್ ಇರಿಸಲಾಗಿತ್ತು. ಸಹಜವಾಗಿ ಪಾಸಿಟಿವ್ ಪ್ರಕರಗಳು ಈ ಭಾಗದಲ್ಲಿಯೇ ಹೆಚ್ಚುತ್ತಿದೆ. ಇದಕ್ಕಾಗಿಯೇ ಕುಂದಾಪುರದಲ್ಲಿ 120 ಬೆಡ್ ಕೋವಿಡ್ ಆಸ್ಪತ್ರೆಯನ್ನು ಮಾಡಲಾಗಿದ್ದರೂ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕುಂದಾಪುರದ ಹಳೆ ಆದರ್ಶ ಆಸ್ಪತ್ರೆ, ಕುಂದಾಪುರದ ಒಂದು ಹಾಸ್ಟೆಲ್ ಹಾಗೂ ಬೈಂದೂರು ತಾಲೂಕಿನ ಕೊಲ್ಲೂರಿನ ಲಲಿತಾಂಬಿಕಾ ವಸತಿಗೃಹವನ್ನು ತಾತ್ಕಾಲಿಕವಾಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದೆ ಎನ್ನಲಾಗಿದೆ. ಪಾಸಿಟಿವ್ ಬರುವ ಗಂಭೀರವಲ್ಲದ ಪ್ರಕರಣಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡುವ ಬಗ್ಗೆಯೂ ಮಾಹಿತಿ ದೊರೆತಿದೆ.  ಕುಂದಾಪ್ರ ಡಾಟ್ ಕಾಂ ವರದಿ.

ಹೆಚ್ಚಿದ ಕೋವಿಡ್ ಪರೀಕ್ಷೆ ಕೇಂದ್ರಗಳು:
ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಕೋವಿಡ್ ಲ್ಯಾಬ್’ನಲ್ಲಿ ಸ್ವ್ಯಾಬ್ ಪರೀಕ್ಷೆ ನಡೆಸಲಾಗುತ್ತಿತ್ತು. ಬಳಿಕ ಶಿವಮೊಗ್ಗ ಹಾಗೂ ಕೆಎಂಸಿ ಮಂಗಳೂರಿನ ಲ್ಯಾಬ್’ಗಳಿಗೆ ಸ್ವ್ಯಾಬ್ ಕಳುಹಿಸಲಾಗುತ್ತಿತ್ತು. ಇದೀಗ ಹೆಚ್ಚುವರಿಯಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆ, ಮಂಗಳೂರಿನ ಯೇನಪೋಯ ಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಗಳಲ್ಲಿಯೂ ಮಾದರಿಗಳ ಪರೀಕ್ಷೆ ನಡೆಯುತ್ತಿದ್ದು, ಹೆಚ್ಚಿನ ಪ್ರಮಾಣದ ವರದಿಗಳು ದೊರೆಯುತ್ತಿದೆ. ಸೋಮವಾರ 650ಕ್ಕೂ ಹೆಚ್ಚಿನ ವರದಿ ಬಂದಿದ್ದು ಆ ಪೈಕಿ 570 ನೆಗೆಟಿವ್, 73 ಪಾಸಿಟಿವ್ ಪ್ರಕರಣವನ್ನಷ್ಟೇ ಜಿಲ್ಲಾಡಳಿತ ಘೋಷಿಸಿದೆ.  ಕುಂದಾಪ್ರ ಡಾಟ್ ಕಾಂ ವರದಿ.

ಜಾಗೃತಿ ಅಗತ್ಯ:
ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಜನಸಂಚಾರವೂ ಹೆಚ್ಚಿತ್ತಿದೆ. ಪರ್ಯಾಯವಾಗಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ. ಬಹತೇಕ ಹೋಂ ಕ್ವಾರಂಟೈನಿನಲ್ಲಿ ಇರುವವರು ಪಾಸಿಟಿವ್ ಬರುತ್ತಿರುವುದರಿಂದ ಅವರ ಸಂಪರ್ಕದಲ್ಲಿರುವ ಮನೆಯವರು ಹಾಗೂ ದ್ವಿತೀಯ ಹಂತದ ಸಂಪರ್ಕವನ್ನು ಪತ್ತೆ ಹೆಚ್ಚಿ ಕ್ವಾರಂಟೈನ್ ಮಾಡಬೇಕಾಗಿದೆ.

ಬದುಕಿಗಾಗಿ ಎರಡೂವರೆ ತಿಂಗಳ ಬಳಿಕ ಕೆಲಸ ಕಾರ್ಯಕ್ಕಾಗಿ ಸಂಚರಿಸುವವರಿಗೆ ಹೋಂ ಕ್ವಾರಂಟೈನಿನಲ್ಲಿ ಇರುವವರ ತಿರುಗಾಟ, ಕೊರೋನಾ ಸಮುದಾಯಕ್ಕೆ ಹರಡುವ ಭೀತಿ ಕಾಡುತ್ತಿದೆ. ಸದ್ಯ ಎಚ್ಚರದಿಂದ ಇರುವುದೊಂದೆ ದಾರಿ/ ಕುಂದಾಪ್ರ ಡಾಟ್ ಕಾಂ ವರದಿ/

ಇದನ್ನೂ ಓದಿ:
► ಮಹಾಘಾತ: ಉಡುಪಿ ಜಿಲ್ಲೆಯಲ್ಲಿ ಸೋಮವಾರ 73 ಕೊರೋನಾ ಪಾಸಿಟಿವ್ – https://kundapraa.com/?p=38126 .

 

 

Leave a Reply

Your email address will not be published. Required fields are marked *

15 + 10 =