ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಗರಿಗೆದರಿರುವ ಕಾಂಗ್ರೆಸ್ ಹಾಗೂ ಸರ್ಕಾರದ ಚಟುವಟಿಕೆಗಳಿಂದ ಜರ್ಜರಿತಗೊಂಡಿರುವ ಬಿಜೆಪಿ ಪಕ್ಷ ತನ್ನ ಹೇಡಿತನವನ್ನು ಪ್ರದರ್ಶಿಸಲು ಮುಂದಾಗಿದ್ದು, ಕೇಂದ್ರದ ಮೋದಿ ಸರ್ಕಾರ ಕರ್ನಾಟಕದ ಸಚಿವರ ಮೇಲೆ ಐಟಿ ದಾಳಿ ಮಾಡಿಸುವ ಮೂಲಕ ದ್ವೇಷದ ರಾಜಕೀಯವನ್ನು ಕರ್ನಾಟಕದಲ್ಲಿ ಮುಂದುವರೆಸಿದೆ ಎಂದು ಉಡುಪಿ ಜಿಲ್ಲಾ ಅಧ್ಯಕ್ಷರು ಮಾಹಿತಿ ತಂತ್ರಜ್ಞಾನ ವಿಭಾಗ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಹೇಳಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್‌ರನ್ನು ಸೋಲಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ಲೆಕ್ಕವಿಲ್ಲದಷ್ಟು ಕೋಟಿಗಟ್ಟಲೇ ಹಣ ನೀಡಿ ಖರೀದಿಸಲು ಹೊರಟಿತ್ತು. ಆದರೆ ಇದನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕದ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಮೇಲೆ ಐಟಿ ದಾಳಿ ನಡೆಸಿ ಹೆದರಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಇಡೀ ದೇಶದಲ್ಲಿ ಬಿಜೆಪಿ ಲೋಕಸಭಾ ನಂತರ ಎದುರಿಸಿರುವ ಪ್ರತಿಯೊಂದು ಸೋಲಿಗೆ, ಹಾಗೂ ಕಾಂಗ್ರೆಸ್‌ನ ಪ್ರತಿ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಡಿ.ಕೆ. ಶಿವಕುಮಾರ್ರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಈ ಐಟಿ ದಾಳಿ ಮಾಡಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಐಟಿ ದಾಳಿಯ ಮೂಲಕ ಹೇಡಿತನಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ. ಯಡಿಯೂರಪ್ಪ ಅವರ ವಿರುದ್ಧ ಲಿಂಗಾಯುತರು ಸೆಟೆದು ನಿಂತಿರುವುದರಿಂದ ಭಯಭೀತರಾಗಿದ್ದರು. ಕರ್ನಾಟಕದಲ್ಲಿ ಕನ್ನಡವನ್ನು ಬೆಂಬಲಿಸದೆ ಹಿಂದಿ ಹೇರಿಕೆಗೆ ಬೆಂಬಲ ಕೊಟ್ಟಿದ್ದರಿಂದ ಬಿಜೆಪಿ ರಾಜ್ಯದಲ್ಲಿ ಜನರ ಸಾಕಷ್ಟು ವಿರೋದಕ್ಕೂ ಒಳಗಾಗಿತ್ತು. ಇದನ್ನೆಲ್ಲಾ ಮನಸಿನಲ್ಲಿಟ್ಟುಕೊಂಡು ಕೇಂದ್ರದ ಮೂಲಕ ಐಟಿ ದಾಳಿ ಮಾಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.