ಜಕಣಿ: ಕುಂದನಾಡಿನ ಅಪರೂಪದ ಜನಪದೀಯ ಆಚರಣೆ

Call us

ಮಂಜುನಾಥ ಹಿಲಿಯಾಣ | ಕುಂದಾಪ್ರ ಡಾಟ್ ಕಾಂ ಲೇಖನ |
ಜಕಣಿ(ಜಕ್ಣಿ) ಕುಂದಾಪುರ ನೆಲದ ಕೃಷಿ ಸಂಸ್ಕೃತಿಯೊಂದಿಗೆ ಹುಟ್ಟಿ ಬೆಳೆದಿರುವ ವಿಶಿಷ್ಟ-ವಿಭಿನ್ನ ಆಚರಣೆ. ಪ್ರತಿ ವರ್ಷ ಬೆಸಿಗೆಯ ವೃಷಭ ಸಂಕ್ರಮಣದಿಂದ ಮಿಥುನ ಸಂಕ್ರಮಣದವರೆಗೆ ನೆಡೆಯುವ ಗ್ರಾಮ್ಯ ಬದುಕಿನ ಈ ಆಚರಣೆ ಬಹುನಂಬಿಕೆಯ ಬಹು ಆಯಾಮವುಳ್ಳ ಅಪ್ಪಟ ಜನಪದೀಯ ಆಚರಣೆ. ಸ್ವಲ್ಪ ಮಟ್ಟಿಗೆ ವಿಕ್ಷಿಪ್ರತೆ-ವಿಭಿನ್ನತೆಯ ಆಯಾಮವುಳ್ಳ ಈ ಜಕಣಿ ಆಚರಣೆ ತುಳುನಾಡಿನ ಮೂಲ ಜನರ ಬದುಕಿನೊಂದಿಗೆ ಹುಟ್ಟಿಕೊಂಡ ಅತೀ ಪುರಾತನ ಆಚರಣೆಯೂ ಆಗಿದೆ. ಕಾರ್ತೇಲ್ ತಿಂಗಳಿನ ಮೊದಲ ಮಳೆ ನೆಲವನ್ನು ತಾಕಿದ ಕೂಡಲೇ ಕುಂದನಾಡಿನ ಎಲ್ಲರ ಮನೆಗಳಲ್ಲಿ ಜಕಣಿಯ ಗೌಜಿ ಮೆಲ್ಲಗೆ ಆರಂಭಗೊಳ್ಳುತ್ತದೆ. ಇರಿಸಿದ ಶುಭ ಮೂಹೂರ್ತವೊಂದರಲ್ಲಿ ಕುಟುಂಬದ ಹಿರಿ ಮನೆಗಳಲ್ಲಿ ಕುಟುಂಬದ ಸದಸ್ಯರೆಲ್ಲ ಸೇರಿ ಆಚರಿಸುವ ಈ ಜಕಣಿ ಆಚರಣಾ ಪದ್ದತಿ ಮಾತ್ರ ತೀರಾ ವಿಭಿನ್ನ. ಅಷ್ಟೇ ಕೌತುಕಪೂರ್ಣವಾದದ್ದು.

Call us

Call us

ಜಕಣಿ ವಿಧಿ-ವಿಧಾನಗಳ ಬಗ್ಗೆ:
ಸಂಜೆಯ ಸೂರ್ಯ ಪಡುವಣದಲ್ಲಿ ಕಂತುವ ವೇಳೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ತಲೆಯ ಮೇಲೆ ಹೊತ್ತು ಕುಟುಂಬದ ಹಿರಿ ತಲೆಗಳೆಲ್ಲ ಮನೆಯ ಹತ್ತಿರವಿರುವ ಹಾಡಿಗೆ ದೌಡಾಯಿಸುತ್ತಾರೆ. ಕೈಯಲ್ಲಿ ಊರ ಕೋಳಿಗಳನ್ನು ಹಿಡಿದು ಹಿರಿಯರನ್ನು ಹಿಂಬಾಲಿಸಿ ಬರುವ ಮಕ್ಕಳಿಗೆಲ್ಲ ಅದೊಂದು ಭಯಮಿಶ್ರಿತ ಕೌತುಕದ ಸಂಜೆ.

ಹಾಡಿಯಲ್ಲಿ ಹೆಚ್ಚಾಗಿ ನಾಗ ಸಂಪಿಗೆ ಅಥವಾ ಬನ್ನೇರಳೆ ಮರದಡಿಯಲ್ಲಿ ಪ್ರತಿಷ್ಠಾಪಿಸಿದ್ದ ರಾಯಿ ಕಲ್ಲುಗಳಿಗೆ, ಸತ್ತ ಪಿತೃಗಳ ನೆನಪಿನಲ್ಲಿ ಹುದುಗಿಸಿದ್ದ ಪಿತೃ ಕಲ್ಲುಗಳಿಗೆ ಕಾಯಿಯನ್ನು ಒಡೆಯಲಾಗುತ್ತದೆ, ದಾಸವಾಳ, ಕಿಸ್ಕೂರ ಇನ್ನಿತರ ಕಾಡ ಹೂಗಳನ್ನು ಇರಿಸಿ ಶೃಂಗರಿಸಲಾಗುತ್ತದೆ. ನಂತರ ಕೂಡಿ ಬಾಳೆ ಎಲೆಯ ಮೇಲೆ ಚೆರು (ಅನ್ನು) ಹಾಕಿ, ಎಣ್ಣೆಯಲ್ಲಿ ಅದ್ದಿ ತೆಗೆದ ಬಟ್ಟೆಯ ತುಂಡನ್ನು ಸುತ್ತಿ ತಯಾರಿಸಿದ್ದ ನೆಣೆ ಕೋಲಿಗೆ ಬೆಂಕಿ ಹತ್ತಿಸಲಾಗುತ್ತದೆ. ಅರಸಿನ ಮತ್ತು ಸುಣ್ಣವನ್ನು ನೀರಿನಲ್ಲಿ ಕರಡಿ ಅಡಿಕೆ ಹಾಳೆಯನ್ನು ಕಟ್ಟಿ ತಯಾರಿಸಿದ ಹಾನದ ಕೊಟ್ಟೆಗೆ ಎರೆದು ಕೆಂಪಗಿನ ಹಾನವನ್ನು ತಯಾರಿಸಲಾಗುತ್ತದೆ.

Call us

Call us

ಹಾಡಿಯಲ್ಲಿ ಸೇರಿದ ಕಿರಿಯರೆಲ್ಲ ಕೋಳಿಯ ಕಾಲನ್ನು ತೊಳೆದು ರೆಡಿ ಮಾಡುತ್ತಿದ್ದಂತೆ ಹಿರಿಯ ಸದಸ್ಯನೊರ್ವರು ಕೋಳಿ ಕುತ್ತಿಗೆಯನ್ನು ಕೊಯ್ದು ಕತ್ತರಿಸುತ್ತಾರೆ ಚಿಮ್ಮುವ ಕೆಂಪು ರಕ್ತವನ್ನು ಹಾನದ ಕೊಟ್ಟೆಗೆ, ಚೆರುವಿಗೆ ತಾಗಿಸಿ ಕೋಳಿ ಕಾಲನ್ನು ಎಳೆದು ಬಿಡಲಾಗುತ್ತದೆ. ಕೊನೆಯಲ್ಲಿ ಹಾಡಿಯಲ್ಲಿ ನೆರೆದ ಎಲ್ಲ ಸದಸ್ಯರು ಒಂದೈದು ನಿಮಿಷ ಬೆನ್ನು ತಿರುಗಿಸಿ ನಿಲ್ಲುತ್ತಾರೆ. ಸತ್ತ ಕುಟುಂಬದ ಆತ್ಮಗಳು ಆ ಸಮಯದಲ್ಲಿ ಬಂದು ಉಣ್ಣುತ್ತಾರೆ ಎಂಬ ನಂಬಿಕೆ ಅಷ್ಟೆ. ಹಿರಿಯರ ಪ್ರಾರ್ಥನೆ ಮುಗಿದ ಮೇಲೆ ಚೊಂಬಿನಲ್ಲಿದ್ದ ಜಲವನ್ನು ತುಳಸಿ ದಳದಿಂದ ಸುತ್ತೆಲ್ಲ ಪ್ರೋಕ್ಷಣೆ ಮಾಡಲಾಗುತ್ತದೆ. ನಂತರ ಗೌಜಿನಲ್ಲಿ ಊರ ಕೋಳಿಗಳ ರಿಪೇರಿ ಕಾರ್ಯ ನೆಡೆಯುತ್ತದೆ. ಪಿರಿ ಪಿರಿ ಮಳೆಯಲ್ಲಿ, ನುಸಿಯ ಹಿಂಡಿನಲ್ಲಿ, ಕೋಳಿ ಸಮಾ ಮಾಡಿ ಕೊಚ್ಚಿ ತೊಳೆಯುವ ಕೆಲಸ ನಿಜಕ್ಕೂ ಮಕ್ಕಳಿಗೆ ಯಮಯಾತನೆ ನೀಡುವಂತಹದ್ದು. ಒಂದಿಷ್ಟು ಖುಷಿ ಸಂಭ್ರಮವನ್ನು ನೀಡುವಂತಹದ್ದು! ಕುಂದಾಪ್ರ ಡಾಟ್ ಕಾಂ ಲೇಖನ.

ಜಕಣಿ ಅನ್ನುವುದು ವರ್ಷದ ಒಂದು ದಿನ ಕುಟುಂಬದ ಎಲ್ಲ ಸದಸ್ಯರು ಸೇರಿ ಕಲೆತು ಆಚರಿಸುವ ಒಂದು ಸಂಭ್ರಮದ ಆಚರಣೆ. ಹಲಸಿನ ಹಣ್ಣಿನ ಕಡಬು, ಇಡ್ಲಿ, ಊರ ಕೋಳಿ ತುಂಡು, ಕೋಳಿ ಗಸಿ ಜಕಣಿಯ ವಿಶಿಷ್ಟ ಖಾದ್ಯಗಳು. ಕುಂದನಾಡಿನ ಜನ ಇವತ್ತಿಗೂ ತುಳುನಾಡಿನ ಅವಿಭಾಜ್ಯ ಅಂಗವಾಗಿ ಬದುಕುತ್ತಿರುವವರು. ಕಲ್ಲುಕುಟಿಕ(ಕಲ್ಕುಡ), ಬೊಬ್ಬರ್ಯ, ನಂದಿ, ಇನ್ನಿತರ ದೈವಗಳ ಆರಾಧನೆ ಇವರ ಬದುಕಿನ ಅವಿಭಾಜ್ಯ ಅಂಗ. ತಾವು ನಂಬಿದ ದೈವಗಳನ್ನು ಜಕಣಿ ದಿನ ಪೂಜಿಸಿ ದೈವ ದರ್ಶನ ಮಾಡಿಸಿ ಕುಟುಂಬವನ್ನು ಸಲಹುವಂತೆ ಬೇಡಿಕೊಳ್ಳುವುದು ಜಕಣಿಯ ಮುಖ್ಯ ಉದ್ದೇಶ. ಕೆಲವೆಡೆ ದೈವದ ದರ್ಶನ ನೆಡೆಯುತ್ತಿರುವಾಗಲೇ ಅನಾಥರಾಗಿ ಸತ್ತ ಕುಟುಂಬದ ಆತ್ಮಗಳು ಕುಟುಂಬದ ಯಾವುದಾದರೂ ಸದಸ್ಯರ ಮೈ ಮೇಲೆ ಅಹಾವನೆ ಆಗಿ ಕೂಗುವುದು, ಅಳುವುದು, ಒರಲುವುದು ಉಂಟು.

ಜಕಣಿಯ ಅಧೀಕೃತ ಪೂಜೆ ಪುನಸ್ಕಾರಗಳೆಲ್ಲ ಮುಗಿದ ಮೇಲೆ ಹಲಸಿನ ಹಣ್ಣಿನ ಕಡುಬು, ಇಡ್ಲಿ, ಕೋಳಿ ತುಂಡನ್ನು ಸೇರಿಸಿ ಕೊಡಿ ಬಾಳೆ ಎಲೆಯ ಮೇಲೆ ಉಣಬಡಿಸಿದ ’ಮೀಸಲು’ ಎಡೆಯನ್ನು ಸತ್ತ ಪಿತೃಗಳಿಗೆ ಇಡಲಾಗುತ್ತದೆ. ಮುಂದಿನ ಕಾರ್ತೇಲ್ ತಿಂಗಳವರೆಗೆ ಕುಟುಂಬಕ್ಕೇನೂ ಉಪದ್ರ, ಅನಾಚಾರ, ತೊಂದರೆಗಳು ನೀಡದಂತೆ ಕೇಳಿಕೊಳ್ಳಲಾಗುತ್ತದೆ. ನಂತರ ಕುಟುಂಬದವರೆಲ್ಲ ಸೇರಿ ಸಹಪಂಕ್ತಿಯಲ್ಲಿ ಉಂಡು ತೇಗಿ ಸಂಭ್ರಮಿಸುತ್ತಾರೆ. ಕುಂದಾಪ್ರ ಡಾಟ್ ಕಾಂ ಲೇಖನ.

ಜಕಣಿ: ಒಂದು ವಿಮರ್ಷೆ

ಮಂಜುನಾಥ ಹಿಲಿಯಾಣ

ಈ ಜಕಣಿ ಅನ್ನುವುದನ್ನು ವಿಮರ್ಶಾ ದೃಷ್ಟಿಕೋನದಲ್ಲಿ ನೋಡುವುದಾದರೆ ಇದೊಂದು ಸತ್ತ ಆತ್ಮಗಳ ಆರಾಧನೆಯ ಆಚರಣೆ. ಸತ್ತ ಆತ್ಮಗಳನ್ನು “ಜಕಣಿ” ಅಂತಾನೇ ಕರೆಯುವ ವಾಡಿಕೆ ಕುಂದಾಪುರದಲ್ಲಿ ಉಂಟು. ಕುಟುಂಬ ಸದಸ್ಯನೊಬ್ಬ ಸತ್ತು ಅವನನ್ನು ಬೂದಿ ಮಾಡಿದ ಮೇಲೂ ಅವನ ಆತ್ಮವನ್ನು ವರ್ಷಕ್ಕೊಂದು ಬಾರಿ ಕರೆದು ಸತ್ಕರಿಸಿ ಕಳಿಸುವ ಅದ್ಬುತ ಪರಿಕಲ್ಪನೆಯ ಆಚರಣೆ ಈ ಜಕಣಿ.

ಇನ್ನೊಂದು ಆಯಾಮದಲ್ಲಿ ನೋಡುವುದಾದರೆ ಹಿಂದೆಲ್ಲ ಮಳೆಗಾಲ ಅಂದರೆ ಸಾಲು ಸಾಲು ಕಾಯಿಲೆಗಳು ಬರುವ ಕಾಲವು ಹೌದು. ಚಿತ್ರ ವಿಚಿತ್ರ ಸಾಂಕ್ರಾಮಿಕ ರೋಗಗಳು ಬಂದು ಕುಟುಂಬದ ಸದಸ್ಯರನ್ನು ಬಲಿ ತೆಗೆದುಕೊಳ್ಳುತ್ತಿದ್ದವು. ಇದಕ್ಕೆ ವೈಜ್ಞಾನಿಕ ಸತ್ಯ ಅರಿಯದ ಜನಸಾಮನ್ಯರು ಸತ್ತ ಜಕಣಿಗಳ ಉಪದ್ರ ಎಂದೇ ಭಾವಿಸುತ್ತಿದ್ದರೇನೋ. ಹಾಗಾಗಿ ಕುಟುಂಬದ ಶಿಶುಗಳಿಗೆ ಸತ್ತ ಆತ್ಮಗಳ ಉಪದ್ರ ಭಾರದಿರಲಿ ಎಂಬ ನೆಲೆಯಲ್ಲೂ ಜಕಣಿ ಆಚರಣೆ ಹುಟ್ಟಿರಬಹುದೇನೊ!

ಪ್ರತಿ ಕುಟುಂಬದ ಮೂಲ ಮನೆಯಲ್ಲಿ ನಡೆಯುವ ಈ ಭಿನ್ನ ವಾಮ-ನ್ಯಾಮ ಸಂಸ್ಕೃತಿಗೆ ಕಲ್ಲುಕುಟಿಕನ ಬೋಗ, ಕೊಲೆಭೂತ ಎಂಬಿತ್ಯಾದಿ ಅನೇಕ ಆಡು ನಾಮಧೇಯಗಳು ಕುಂದನಾಡಿನಲ್ಲಿ ಉಂಟು. ತೌಳವ ನಾಡಿನಲ್ಲಿ ಭೂತ ಕಟ್ಟುವುದು, ತಂಬಿಲ ಎಂಬ ಇದಕ್ಕೆ ಸಮೀಪವಾದ ಆಚರಣೆಗಳಿರುವುದನ್ನು ನಾವು ಗಮನಿಸಬಹುದು.

ಜಕಣಿಯ ಗೌಜಿ ಹಿಂದಿನಂತೆ ಇಂದಿಲ್ಲ ನಿಜ. ಆದರೆ ಸತ್ತಿಲ್ಲ. ಹಲವು ಆಧುನಿಕ ಬದಲಾವಣೆಗಳೊಂದಿಗೆ ಅನಿರ್ವಾತೆಯ ಹೆಸರಿನಲ್ಲಾದರೂ ಇವತ್ತಿಗೂ ಕುಂದಾಪುರದ ಪ್ರತಿ ಮನೆಯಲ್ಲಿ ಆಚರಣೆಯಲ್ಲಿ ಉಂಟು. ವರ್ಷಕ್ಕೊಂದು ಬಾರಿಯಾದರೂ ಕುಟುಂಬದ ಸದಸ್ಯರನ್ನು ಸೇರಿಸಿ ಕಷ್ಟ ಸುಖಗಳನ್ನು ಹಂಚಿಕೊಳ್ಳುವಂತೆ ಮಾಡುವ ತಾಕತ್ತಿರುವುದು ಈ ಜಕಣಿಗೆ ಮಾತ್ರ.. ಇದು ಇನ್ನೂ ನೂರ್ಕಾಲ ಹೀಗೆ ಸಾಗಲಿ!! ಏನಂತೀರಿ?? ಕುಂದಾಪ್ರ ಡಾಟ್ ಕಾಂ ಲೇಖನ.

 

 

Leave a Reply

Your email address will not be published. Required fields are marked *

five − 4 =