ನಾವುಂದದಿಂದ ಬೈಂದೂರು ತನಕ ಜನಧ್ವನಿ ಪಾದಯಾತ್ರೆ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ, ಕೃಷಿ ಮುಸೂದೆ, ಇಂದಿನ ಬೆಲೆ ಏರಿಕೆ, ದಿನಬಳಿಕೆ ವಸ್ತು ಹಾಗೂ ಕರಾವಳಿ ತೀರದ ಜ್ವಲಂತ ಸಮಸ್ಯೆಗಳ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಹೆಜಮಾಡಿಯಿಂದ ಬೈಂದೂರು ತನಕ ನಡೆಯಲಿರುವ ಕಾಂಗ್ರೆಸ್ ಜನದ್ವನಿ ಪಾದಯಾತ್ರೆ ಸಮಾರೋಪ ಫೆ.27. ಅಪರಾಹ್ನ 3ಕ್ಕೆ ಬೈಂದೂರಿನಲ್ಲಿ ನಡೆಯಲಿದೆ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದಿದ್ದಾರೆ.

ಫೆ.26 ಬೆಳಗ್ಗೆ ತಲ್ಲೂರಿಗೆ ಆಗಮಿಸಲಿರುವ ಪಾದಯಾತ್ರೆಯಲ್ಲಿ ಬೈಂದೂರು ಪ್ರದೇಶದಿಂದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿಕೊಂಡು ಪಾದಯಾತ್ರೆ ಮುಂದುವರಿಯಲಿದ್ದು, ಸಂಜೆ ನಾವುಂದ ವಾಸ್ತವ್ಯ ಮಾಡಿ, ಫೆ.27 ಬೆಳಗ್ಗೆ 9ಕ್ಕೆ ನಾವುಂದಿಂದ ಪಾದಯಾತ್ರೆ ಹೊರಡಲಿದ್ದು, ಮಧ್ಯಹ್ನ 2ಕ್ಕೆ ಬೈಂದೂರು ಸೇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಂಧನ ಬೆಲೆ ಹಾಗೂ ನಿತ್ಯಬಳಿಕೆ ವಸ್ತುಗಳು ಬೆಲೆ ಏರಿಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ಜನರಿಗೆ ತಲುಪಿಸಿ, ಜನಜಾಗ್ರತಿ ಮೂಡಿಸುವುದು ಪಾದಯಾತ್ರೆ ಉದ್ದೇಶವಾಗಿದ್ದು, ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಪಾದಯಾತ್ರೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಪಾದಯಾತ್ರೆಯಲ್ಲಿ ಕರಾವಳಿ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಲಾಗುತ್ತದೆ. ಕಳೆದ ಮೂರು ತಿಂಗಳಿಂದ ಮೀನುಗಾರರಿಗೆ ಸೀಮೆ ಎಣ್ಣೆ ಸಿಕ್ಕಿಲ್ಲ, ಆಶ್ರಯ ಮನೆಗಳಿಗೆ ಹಣ ಬಿಡುಗಡೆ ಆಗಿಲ್ಲ. ಪರೀಕ್ ಮೇಸ್ತ ಸಾವು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಗೆದ್ದ ನಂತರವೂ ಸಿಬಿಐ ತನಿಖೆ ಆರಂಭವಾಗಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಆಡಳಿತವೇ ಗೊತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಆಡಳಿತ ವೈಫಲ್ಯಕ್ಕೆ ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆಯಾಗದಿರುವುದು ನಮ್ಮ ಕಣ್ಣ ಮುಂದಿರುವ ಸ್ಪಷ್ಟ ಸಾಕ್ಷಿಯಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ದರ ನೇಮಕ ಮಾಡಲಾಗದವರು ಜನರಿಗೆ ಎನ್ನೆಷ್ಟು ಒಳ್ಳೆಯ ಆಡಳಿತ ನೀಡಲು ಸಾಧ್ಯ ಎಂದ ಅವರು, ಈ ಎಲ್ಲಾ ಸಂಗತಿಗಳ ಮುಂದಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಬೈಂದೂರು ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡುಬೆಟ್ಟು ಇದ್ದರು.

Leave a Reply

Your email address will not be published. Required fields are marked *

one × one =