ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ದಲಿತರಿಗಾಗಿ ಮೀಸಲಿರಿಸಿರುವ ಸುಮಾರು 800 ಏಕ್ರೆ ಡಿಸಿ ಮನ್ನಾ ಭೂಮಿಯಿದ್ದು, ಯಾವ ಪ್ರಮಾಣದಲ್ಲಿ ಯಾವ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಎನ್ನುವುದರ ಬಗ್ಗೆ ಸರ್ಕಾರ ಮಾನದಂಡದ ಅಗತ್ಯವಿದೆ. ಈ ಬಗ್ಗೆ ಶೀಘ್ರ ಹೊಸನೀತಿ ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ರಾಜ್ಯದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಆಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಭೂಹಿತ ಶೋಷಿತ ಸಮುದಾಯಗಳಿಗೆ ಡಿಸಿ ಮನ್ನಾ ಭೂಮಿ ಹಂಚಿಕೆ ಆಗ್ರಹಿಸಿ ನಡೆದ ಜನಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಡಿ.ಸಿ. ಮನ್ನಾ ಭೂಮಿಯಲ್ಲಿ ಬಹುತೇಕ ಭೂಮಿ ಹಡಿಲು ಬಿದ್ದಿದೆ, ಇದನ್ನು ಶೀಘ್ರ ದಲಿತರಿಗೆ ಹಂಚಿದ್ದರೆ ಅವರು ಅದನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಸ್ವಾವಲಂಬಿ ಜೀವನ ನಡೆಸುವಂತಾಗುತ್ತದೆ. ದಲಿತರು ತಮ್ಮಲ್ಲಿರುವ ಕೀಳರಿಮೆ ಬದಿಗೊತ್ತಿಗೆ ನಾನಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಆ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಕ್ರಾಂತಿಕಾರಕ ಭೂಮಸೂದೆ ಕಾನೂನಿಂದಾಗಿ ಅನ್ನದ ಅಗಳನ್ನು ಕಾಣದ ಕುಟುಂಬಗಳು ಇಂದು ಹೊಟ್ಟೆ ತುಂಬ ಊಟ ಮಾಡುವಂತಾಯಿತು. ಇದು ಅನ್ಯ ರಾಜ್ಯದಲ್ಲಿ ನಡೆದಿದ್ದರೆ, ಮುಖ್ಯಮಂತ್ರಿಯ ತಲೆಹೋಗುತ್ತಿತ್ತು ಎಂಬ ಜಸ್ಟಿಸ್ ಭೀಮಯ್ಯನವರ ಹೇಳಿಕೆಯನ್ನು ನೆನೆಸಿಕೊಂಡು, ದಲಿತರಿಗೆ ಡಿಸಿ ಮನ್ನಾ ಭೂಮಿ ಹಂಚುವ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದ ಅವರು ಅದು ಅನುಷ್ಠಾನಗೊಳ್ಳುವವರೆಗೂ ಹೋರಾಟ ನಡೆಸಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, ಡಿಸಿ ಮನ್ನಾ ಭೂಮಿಗಾಗಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯೊಂದಿಗೆ ಕಳೆದ ೨ ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ, ಆದರೆ ಸರ್ಕಾರದಿಂದ ಯಾವುದೇ ಪ್ರಕಿಯೆ ಆಗಿಲ್ಲ. ನಮ್ಮ ಆಡಳಿತ ವ್ಯವಸ್ಥೆಗೆ ದಲಿತರನ್ನು ಸ್ವಾವಲಭಿಗಳನ್ನಾಗಿ ಮಾಡುವ ಇಚ್ಛಾಶಕ್ತಿಯಿಲ್ಲ ಎಂದು ದೂರಿದ ಅವರು ದಲಿತ ಭೂಮಿಯನ್ನು ಬೇರೆಯವರಿಗೆ ಹಂಚಲು ಸಾಧ್ಯವಿಲ್ಲ, ಅದನ್ನು ಹಾಗೆಯೇ ಬಿಟ್ಟರೆ ಅದು ಅತಿಕ್ರಮಣಗೊಂಡು ಉಳ್ಳವರ ಪಾಲಾಗಲಿದೆ. ಭೂಮಿ ಹಂಚುವ ಬಗ್ಗೆ ಷಡ್ಯಂತರವಿದ್ದು, ಮುಂದಿನ ೪೫ ದಿನದೊಳಗೆ ಈ ಬಗ್ಗೆ ಯಾವುದೇ ಪ್ರಕ್ರಿಯೆ ಆಗದಿದ್ದರೆ ಜಿಲ್ಲಾಕಾರಿಗಳ ಕಛೇರಿ ಎದುರು ಅಹೋರಾತ್ರಿ ಪ್ರತಿ‘ಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಂಚಾಲಕ ರಾಜು ಕೆ.ಸಿ. ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಶಂಕರ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಮಾಜಿ ಜಿ.ಪಂ. ಸದಸ್ಯ ಮದನ ಕುಮಾರ, ಕುಂದಾಪುರ ಸಹಾಯಕ ಕಮೀಷನರ್ ಟಿ. ಭೂಬಾಲನ್, ಸಹಾಯಕ ಪೊಲೀಸ್ ವರಿಷ್ಠಾಕಾರಿ ಕುಮಾರಸ್ವಾಮಿ, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ ಗೋರಯ್ಯ, ಮಂಗಳೂರು ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಆನಂದ ಬೆಳ್ಳಾರಿ, ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಜಿಲ್ಲಾ ಸಮಿತಿಯ ಮುಖಂಡರಾದ ಚಂದ್ರ ಹಳಗೇರಿ, ಸುರೇಶ ಬೆ‘ಂದೂರು, ಧರ್ಮರಾಜ್ ಮುದಲಿಯಾರ್, ಕೃಷ್ಣಮೂರ್ತಿ ದೇವರಸ, ಹೊಂಬಾಡಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.
ರಾಜು ಕೆ.ಸಿ. ಬೆಟ್ಟಿನಮನೆ, ಪ್ರಗತಿಪರ ಚಿಂತಕ ಜಯನ್ ಮಲ್ಪೆ, ಚೈತ್ರ ಯಡ್ತರೆ, ನೇತ್ರಾವತಿ ಅವರನ್ನು ಸನ್ಮಾನಿಸಲಾಯಿತು. ಗೀತಾ ಸುರೇಶ ಕುಮಾರ್ ಸ್ವಾಗತಿಸಿದರು, ನರಸಿಂಹ ಹಳಗೇರಿ ಮನವಿ ಪತ್ರ ವಾಚಿಸಿದರು, ಚೈತ್ರ ಯಡ್ತರೆ, ನೇತ್ರಾವತಿ ಹಾಗೂ ನಾಗರಾಜ ಉಪ್ಪುಂದ ನಿರೂಪಿಸಿದರು, ಚಂದ್ರ ಹಳಗೇರಿ ವಂದಿಸಿದರು.