ಮರಳು ಸಮಸ್ಯೆ ನೆಪದಲ್ಲಿ ಚುನಾವಣಾ ರಾಜಕೀಯ: ಸಚಿವೆ ಜಯಮಾಲಾ ಕಿಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ,
ಬೈಂದೂರು: ಸಮಿಶ್ರ ಸರಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿದ್ದು ಈ ಭಾರಿ ಅಧಿಕ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದರು.

ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದು ಕೋಮುವಾದ ಪಕ್ಷವನ್ನು ಓಡಿಸಲು ಎರಡು ಪಕ್ಷಗಳು ಒಟ್ಟಾಗುವುದು ಅಗತ್ಯ. ಉಭಯ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಬೆಂಬಲಿಗರು ಸಂಪೂರ್ಣವಾಗಿ ಜೆಡಿಎಸ್ ಅಭ್ಯರ್ಥಿಯನ್ನೆ ಬೆಂಬಲಿಸಲಿದ್ದಾರೆ ಎಂದರು.

ಮರಳು ಸಮಸ್ಯೆ ವಿರುದ್ಧ ಪ್ರತಿಭಟಿಸುವವರು ಯಾಕೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿಲ್ಲ. ಉಡುಪಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಚುನಾವಣಾ ರಾಜಕೀಯವೇ ಹೊರತು ಮತ್ತೇನಲ್ಲ. ಕೇಂದ್ರದಲ್ಲಿ ಪರಿಸರ ಸೂಕ್ಷ್ಮ ವಲಯದಲ್ಲಿ ಬದಲಾವಣೆ ತರಲು ಅವಕಾಶವಿದ್ದರೂ ಬಿಜೆಪಿಗರು ಯಾಕೆ ಸುಮ್ಮನಿದ್ದಾರೆ. ಸಿಆರ್‌ಝಡ್ ವ್ಯಾಪ್ತಿ ಯಾಕೆ ಬದಲಿಸಲು ಸಾಧ್ಯವಿಲ್ಲ. ಇಷ್ಟೊಂದು ಜನ ಎಂಪಿಗಳಿದ್ದಾರಲ್ಲ ಏನು ಮಾಡುತ್ತಿದ್ದಾರೆ. ಇಂತದ ದ್ವಂದ ನೀತಿಯನ್ನಿಟ್ಟುಕೊಂಡು ಜನರ ದಾರಿ ತಪ್ಪಿಸಬಾರದು ಎಂದ ಅವರು, ಟೆಂಡರ್ ಕರೆಯಲು ಡಿಸಿ ಸಮಯವಕಾಶ ಕೇಳಿದ್ದಾರೆ. ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡಲು ಸಿದ್ಧವಿದ್ದೇವೆ ಆದರೆ ಬೇಡಿಕೆಗೆ ತಕ್ಕಷ್ಟು ಮರಳು ಲಭ್ಯವಿಲ್ಲ ಹಾಗೂ ಮರಳುಗಾರಿಕೆಗೆ ಸಿಆರ್‌ಝಡ್ ತೊಡಕು ಮೀರಿ ಅವಕಾಶ ನೀಡಲು ಸಾಧ್ಯವಿಲ್ಲ. ಕಾನೂನು ಪ್ರಕಾರವೇ ಶೀಘ್ರ ಸೂಕ್ತ ಕ್ರಮ ಕೈಗೊಂಡು ಮರಳು ಸಮಸ್ಯಗೆ ಶೀಘ್ರ ಇತಿಶ್ರೀ ಹಾಡುತ್ತೇವೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಜಿ.ಎ ಭಾವ, ಮಕ್ಕಳ ಆಯೋಗದ ಮಾಜಿ ಅಧ್ಯಕ್ಷ ಕೃಪಾ ಅಮರ ಆಳ್ವಾ, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಎಸ್. ರಾಜು ಪೂಜಾರಿ, ಪಿ.ಎಲ್ ಜೋಸ್ ಇದ್ದರು.

Leave a Reply

Your email address will not be published. Required fields are marked *

fifteen + nineteen =