ಸರಕಾರ ವಶಪಡಿಸಿಕೊಂಡಿರುವ ಕಲ್ಮತ್ ಮಸೀದಿ ಜಾಗ ಹಿಂದಿರುಗಿಸಲು ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯ ಕೊಡವೂರಿನಲ್ಲಿರುವ ಟಿಪ್ಪು ಸುಲ್ತಾನ್ ಕಾಲದ ಐತಿಹಾಸಿಕ ಮಸೀದಿಯ ವಿಚಾರದಲ್ಲಿ ಜಿಲ್ಲೆಯ ಶಾಂತಿಗೆ ಕೊಳ್ಳಿ ಇಡುವ ಪ್ರಯತ್ನಗಳು ಆಗುತ್ತಿದೆ. 1980ರಿಂದಲೇ ಮಸೀದಿಗೆ ಸರಕಾರದಿಂದ ತಸ್ಘೀಕ್ ದೊರೆಯುತ್ತಿದ್ದು ಮಸೀದಿಯ ಜಾಗವು ವಕ್ಫಬೋಡ್ನಲ್ಲಿ ನೋಂದಾವಣೆಗೊಂಡಿದ್ದು, ಕಾನೂನಾತ್ಮಕ ದಾಖಲೆಗಳಿದ್ದರೂ ಮಸೀದಿಯ ಜಾಗವನ್ನು ವಶಪಡಿಸಿಕೊಂಡಿರುವುದರ ಹಿಂದೆ ಜಿಲ್ಲೆಯಲ್ಲಿ ಶಾಂತಿ ಕದಡುವ ಹುನ್ನಾರ ಅಡಗಿದೆ ಎಂದು ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿ ಹೇಳಿದರು.

ಸರ್ವೆ ನಂ 53A/6 ರಲ್ಲಿ ಮಸ್ಜೀದ್ಗೆ ಸೇರಿದ 67 ಸೆಂಟ್ಸ್ ಜಾಗದ ಬಗ್ಗೆ ಕೊಡವೂರು ಗ್ರಾಮದ ಅಡಂಗಲ್ನಲ್ಲಿ ಉಲ್ಲೇಖವಿದೆ. ಸರ್ವೆಯ ನಕ್ಷೆಯಲ್ಲಿ ಮಸ್ಜೀದ್ ಕಟ್ಟಡ ಮತ್ತು ಕೊಳವಿರುವುದು ಸ್ಪಷ್ಟವಾಗಿರುತ್ತದೆ. ಕಾನೂನು ಬದ್ದವಾಗಿ ವಕ್ಫನಲ್ಲಿ ನೋದಾವಣಿ ಹಾಗೂ ಗೆಝೆಟ್ ನೋಟಿಫಿಕೇಶನ್ ಆದ ಕಲ್ಮತ್ ಜಮ್ಮಾ ಮಸೀದಿಯು ಸ್ಥಿರಾಸ್ಥಿಯ ಪಹಣಿ ಪತ್ರದಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಕಲ್ಮತ್ ಜುಮ್ಮಾ ಮಸೀದಿಯ ಹಕ್ಕನ್ನು ಕಸಿದುಕೊಂಡು ಕಾನೂನು ಬಾಹಿರವಾಗಿ ಸರಕಾರದ ಹೆಸರನ್ನು ನಮೂದಿಸಲಾಗಿದೆ ಈ ಕೂಡಲೇ ಸರಕಾರವು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಈ ಕಾನೂನು ಬಾಹಿರ ಕ್ರಮದಿಂದ ಹಿಂದೆಸರಿಯಬೇಕು ಮತ್ತು ಪಹಣಿ ಪತ್ರದಲ್ಲಿ ಮಸೀದಿಯ ಹೆಸರನ್ನು ಮರುನೋಂದಾಯಿಸಿ ಅಲ್ಪಸಂಖ್ಯಾತರ ಸಮುದಾಯದೊಂದಿಗೆ ನ್ಯಾಯಯುತವಾಗಿ ನಡೆದುಕೊಳ್ಳಸಬೇಕು ಎಂದು ಜಸ್ಟೀಸ್ ಫಾರ್ ಕಲ್ಮತ್ ಮಸ್ಜೀದ್ ವೇದಿಕೆ ಒತ್ತಾಯಿಸುತ್ತದೆ ಎಂದರು.

ಇಷ್ಟೆಲ್ಲಾ ದಾಖಲೆಗಳಿದ್ದರೂ ಕೂಡ ಏಕಾಏಕಿಯಾಗಿ ಮಸೀದಿಯ ಜಾಗವನ್ನು ಸರಕಾರದ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಅಲ್ಲದೇ ಪ್ರಾರ್ಥನೆಗೆ ಅವಕಾಶವನ್ನು ನಿರಕರಿಸಲಾಗಿದೆ. ಈ ಭಾಗದಲ್ಲಿ ಭಯದ ವಾತವರಣ ಸೃಷ್ಟಿಸಿ ಶಾಂತಿ ಕೆದಡುವ ಹುನ್ನಾರ ನಡೆಯುತ್ತಿದೆ. ನ್ಯಾಯಯುತವಾಗಿರುವ ಭೂಮಿಯ ಬಗ್ಗೆ ತಪ್ಪು ವರದಿ ನೀಡಿ ಮಸೀದಿಯ ಜಾಗವನ್ನು ಸರಕಾರ ಹಿಂಪಡೆಯುವಂತೆ ಮಾಡಿರುವ ಜಿಲ್ಲಾಧಿಕಾರಿಯವರ ವಿರುದ್ದ ಸಮಗ್ರ ತನಿಖೆಯಾಗಬೇಕು ಅಲ್ಲದೇ ಇದರ ಹಿಂದೆ ಇರುವ ಕಾಣದ ಕೈಗಳ ವಿರುದ್ದ ತನಿಖೆಯಾಗಬೇಕು ಎಂದವರು ಆಗ್ರಹಿಸಿದರು.

ಈ ಸಂದರ್ಭ ಕುಂದಾಪುರ ಪುರಸಭೆಯ ಸದಸ್ಯರಾದ ಅಬು ಮಹಮ್ಮದ್, ಕುಂದಾಪರ ಮಸೀದಿ ಅಧ್ಯಕ್ಷರಾದ ಸೈಯದ್ ನಾಸೀರ್, ಸಾಮಾಜಿಕ ಮುಖಂಡರಾದ ಯಾಸೀನ್ ಹೆಮ್ಮಾಡಿ, ಹುಸೇನ್ ಹೈಕಾಡಿ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿ ವಿವಿಧ ಸಂಘನೆಯ ಸದಸ್ಯರು ಭಾಗವಹಿಸಿದ್ದರು. ಬಳಿಕ ಕುಂದಾಪುರ ತಹಶಿಲ್ದಾರರ ಮೂಲಕ ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

11 − 8 =