ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತು ಶನಿವಾರ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಸಭೆ ನಡೆಸಿದರು.
ಈ ಸಂದರ್ಭ ಅವರು ಮಾತನಾಡಿ, ಆಯಾ ಇಲಾಖೆಯಲ್ಲಿ ಸಮಸ್ಯೆ ಏನಿದೆ ಎನ್ನುವದರ ಮಾಹಿತಿ ಕೊಡಿ, ಮುಂದೆ ಅದಿಲ್ಲ ಇದಿಲ್ಲ ಉತ್ತರ ಬೇಡ. ಡೀಮ್ಡ್ ಫಾರೆಸ್ಟ್ ಯಾರದ್ದೋ ತಪ್ಪಿಗೆ ಡೀಮ್ಡ್ ಫಾರೆಸ್ಟ್ ಆಗಿದೆ. 94ಸಿಯಲ್ಲಿ ಅರ್ಜಿ ಬಂದಿರುವುದ ಬಾಕಿ ಇಡುವುದು ಸರಿಯಲ್ಲ. ತಾಲೂಕು ಮಟ್ಟದಿಂದ ಸೇರಿಸಿ ಎಲ್ಲಾ ಲೆಕ್ಕಕೊಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸೋಣ ಎಂದರು.
ಕುಂದಗನ್ನಡ ಪೀಠದ ಬಗ್ಗೆ ಮಂಗಳೂರು ವಿವಿಗೆ ಪತ್ರ ಬರೆದಿದ್ದು, ಅವರಿಂದ ಉತ್ತರ ಬಂದಿದೆ. ಕುಂದಗನ್ನಡ ಪೀಠ ಸ್ಥಾಪನೆಯಾದರೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಕೊಂಕಣಿ ಅಕಾಡೆಮೆ, ಬ್ಯಾರಿ ಅಕಾಡೆಮಿ ರೀತಿಯಲ್ಲಿ ಕುಂದಗನ್ನಡ ಅಕಾಡೆಮಿ ಆದರೆ ಒಳ್ಳೆಯದು. ಕುಂದಗನ್ನಡ ಜಿಲ್ಲೆ ಬಗ್ಗೆ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದರು.
ಎಲ್ಲಾ ಹಾಸ್ಟೆಲ್ ಮಕ್ಕಳು ಬಂದಮೇಲೆ ಸಿದ್ದತೆ ಮಾಡಿಕೊಳ್ಳುವುದಲ್ಲ. ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ ಮಾಡದೆ ಮುಂಚಿತವಾಗಿ ಸನ್ನಿದ್ದರಾಗಬೇಕು. ರಾಜ್ಯದಲ್ಲಿರುವ ಎಲ್ಲಾ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿತು ಪರಿಹಾರ ಅಲ್ಲಿನ ಮೂಲಭೂತ ಸೌಲಭ್ಯ, ಶೌಚಾಲಯ, ಹಾಸಿಗೆ, ಹೊದಿಕೆ ಮಂಚ ಎಲ್ಲವೂ ವ್ಯವಸ್ಥಿತವಾಗಿದೆಯೋ ಇಲ್ಲವ ನೋಡಿ, ಮೂಲಭೂತ ಸಮಸ್ಯೆಯಿದ್ದರೆ ಹಾಸ್ಟೆಲ್‌ಗಳಿಗೆ ಮಕ್ಕಳು ಬರುವ ಮುನ್ನಾ ಎಲ್ಲಾ ಸಿದ್ದತೆ ಮಾಡಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕುಡುಬಿ ಜನಾಂಗದವರ ಮೀಸಲು ವಿಷಯದಲ್ಲಿ ಸಮೀಕ್ಷೆ ಮಾಡುವ ಬಗ್ಗೆ ಸೂಚನೆ ನೀಡಲಾಗುತ್ತಿದ್ದು, ಅವರ ಸಾಮಾಜಿಕ, ಶಿಕ್ಷಣ, ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಕುಡಬಿ ಜನಾಂಗದವರ ಎಸ್ಸಿಎಸ್ಟಿ ವರ್ಗಕ್ಕೆ ಸೇರಿಸುವ ಪ್ರಯತ್ನ ಹಿಂದೆ ಕೂಡಾ ಮಾಡಿದ್ದು, ಅವರ ಸಮಾಜದ ಅಧ್ಯಯನದ ನಂತರ ಅವರ ಎಸ್ಸಿ ಅಥವಾ ಎಸ್ಟಿಗೆ ಸೇರಿಸುವ ಕುರಿತು ನಿರ್ಧಾರ ಮಾಡಲಾಗುತ್ತದೆ. ಎಸ್ಸಿಎಸ್ಟಿ ಕಮೀಶನ್‌ಗೆ ಡಾಟಾ ಸಲ್ಲಿಸಿ ಯಾವ ವರ್ಗಕ್ಕೆ ಸೇರಿಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕುಡಿಬಿ ಜನಾಂಗದ ಡಾಟಾ ನಮ್ಮಲ್ಲಿ ಸಿದ್ದಿವಿದೆ ಎಂಬ ಮಾಹಿತಿ ನೀಡಿದರು.
ಭೋವಿ ಜನಾಂಗದವರ ಬೇರೆ ಕಡೆಯಿಂದ ಬಂದು ಹಲವಾರು ವರ್ಷವಾಗಿದ್ದು, ಅವರಿಗೆ ಮೀಸಲು ಬಗ್ಗೆ ಗೊಂದಲವಿದ್ದು, ಎಸ್ಸಿಎಸ್ಟಿ ಕಮೀಶನ್ ಜೊತೆ ಮಾತನಾಡಿ, ಸರಿಯಾದ ನಿರ್ಧಾರ ಮಾಡಲಾಗುತ್ತದೆ. ನಾಯರಿ 2ಎಗೆ ಸೇರಿಸಲಾಗಿದೆ. ಇನ್ನೂ ಹಲವಾರು ಜಾತಿಗಳ ಮೀಸಲು ಬಾಕಿಯಿದ್ದು, ಕಳೆಮಟ್ಟದಿಂದ ಅದರ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಸಂಪೂರ್ಣ ಮಾಹಿತಿ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸಭೆಯಲ್ಲಿ ವಿಸ್ತರಣಾಧಿಕಾರಿ ನರಸಿಂಹ ಪೂಜಾರಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.