ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಕೆ. ಪ್ರತಾಪಚಂದ್ರ ಶೆಟ್ಟಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ.

1983 ರಿಂದ 1999ರ ವರೆಗೆ ಸತತವಾಗಿ 4ಬಾರಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ ಅವರು 2003ರಿಂದ ಇಂದಿನ ತನಕವೂ ವಿಧಾನಪರಿಷತ್ ಸದಸ್ಯರಾಗಿ ಜನಸೇವೆಯಲ್ಲಿ ಸಕ್ರಿಯರು. ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿ ಮತ್ತು ಕೊಳ್ಕೆಬೈಲು ಗುಲಾಬಿ ಶೆಡ್ತಿಯವರ ಸುಪುತ್ರನಾಗಿ 1949 ಸೆಪ್ಟೆಂಬರ್‌ 4ರಂದು ಜನಿಸಿದ ಪ್ರತಾಪ್ ಶೆಟ್ಟರು ಬಿ.ಎ ಪದವಿದರರು. ಪದವಿ ಪಡೆದ ನಂತರ ವಿಜಯಾ ಬ್ಯಾಂಕ್ ನ ಉದ್ಯೋಗಿ ಯಾಗಿ ಪುಣೆ ಹಾಗೂ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿ ಆ ನಂತರ ತಂದೆಯವರ ಮರಣದ ತರುವಾಯ ಬ್ಯಾಂಕ್ ಉದ್ಯೋಗ ತೊರೆದು ಊರಿಗೆ ವಾಪಾಸಾಗಿ ಆ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರಾಗಿ ತನ್ನ ರಾಜಕೀಯ ಜೀವನವನ್ನು ಜನಸೇವೆಯ ಮೂಲಕ ಆರಂಬಿಸಿದ್ದರು.

ಆ ನಂತರ ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿಯ ಉಪಾಧ್ಯಕ್ಷರಾಗಿ,ಎಐಸಿಸಿಯ ಸದಸ್ಯರಾಗಿ ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ ದೀರ್ಘಾವಧಿಯ ಕಾಲ ಜನತೆಯ ಹಾಗೂ ಪಕ್ಷದ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ.

ಕಳೆದ ಭಾರಿ ವಿಧಾನ ಪರಿಷತ್ ಚುನಾವಣೆಯ ವೇಳೆ ರಾಜಕೀಯ ಜೀವನ ಸಾಕು. ಮತ್ತೆ ಚುನಾವಣೆಗೆ ಸ್ವರ್ಧಿಸುವುದಿಲ್ಲ ಎಂದು ಹೇಳಿಕೊಂಡಿದ್ದ ಶೆಟ್ಟಿರು ಕಾರ್ಯಕರ್ತರ ಒತ್ತಡಕ್ಕೆ ಮಣಿದು, ವರಿಷ್ಠರ ತೀರ್ಮಾನ ಕಟ್ಟುಬಿದ್ದು ಮತ್ತೆ ಸ್ವರ್ಧಿಸಿ ಗೆದ್ದು ಬಂದಿದ್ದರು. ಸತತ 33ವರ್ಷಗಳ ಕಾಲ ಎರಡೂ ಸದನಗಳ ಆಗುಹೋಗುಗಳನ್ನು ಹತ್ತಿರದಿಂದ ಗಮನಿಸಿದವರು. ನಾಲ್ಕು ವರ್ಷಗಳ ಹಿಂದೆ ವಾರಾಹಿ ಯೋಜನೆ ಹಳ್ಳ ಹತ್ತುತ್ತಿರುವಾಗ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸ್ವತಃ ತಾವೇ ಪ್ರತಿಭಟನೆ ಕುಳಿತು ವಾರಾಹಿ ಯೋಜನೆ ವೇಗ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಿಂದಿನ ಕಾಂಗ್ರೆಸ್ ಸರಕಾರವಿರುವಾಗ, ಈಗಿನ ಮೈತ್ರಿ ಸರಕಾರವಿರುವಾಗ ಸಚಿವ ಸ್ಥಾನ ಒಲಿಯುವ ಮಾತುಗಳು ಕೇಳಿ ಬಂದಿದ್ದರೂ, ಪ್ರತಾಪಚಂದ್ರ ಶೆಟ್ಟಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ಸರಕಾರದ ಮೇಲೆ ಒತ್ತಡವನ್ನೂ ತರದೇ ಸುಮ್ಮನಾಗಿದ್ದರು.

ಕೆಲವು ತಿಂಗಳ ಹಿಂದಷ್ಟೇ ವಿಧಾನ ಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ಆಯ್ಕೆಯಾಗಿದ್ದರು. ಪರಿಷತ್ತಿನ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಪ್ರಬಲ ಹುದ್ದೆಗಳು ಕರಾವಳಿ ಮೂಲಕ ನಾಯಕರಿಗೆ ಒಲಿದಿರುವುದು ಹೆಮ್ಮೆಯ ಸಂಗತಿಯೇ ಸರಿ.

Leave a Reply

Your email address will not be published. Required fields are marked *

9 − 7 =