ಕಾಸರಗೋಡು-ಕಣ್ಣೂರು-ಬೈಂದೂರು ರೈಲಿನ ಪುನರಾರಂಭಕ್ಕೆ ಕೇಂದ್ರ ಸಚಿವರಿಗೆ ಮನವಿ: ವೆಂಕಟೇಶ ಕಿಣಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಯಾಣಿಕರ ಕೊರತೆಯ ಕಾರಣ ರದ್ದಾಗಿರುವ ಕಾಸರಗೋಡು-ಕಣ್ಣೂರು-ಬೈಂದೂರು ಮೂಕಾಂಬಿಕಾ ರೋಡ್ ರೈಲನ್ನು ಸೂಕ್ತ ಮಾರ್ಪಾಡಿನೊಂದಿಗೆ ಪುನರಾರಂಭಿಸಬೇಕು ಎಂದು ರಾಷ್ಟ್ರೀಯ ರೈಲು ಬಳಕೆದಾರರ ಸಮಾಲೋಚನಾ ಸಮಿತಿಯ ಸದಸ್ಯ ಕೆ. ವೆಂಕಟೇಶ ಕಿಣಿ ಬೈಂದೂರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಉತ್ತರ ಮಲಬಾರು ಮತ್ತು ಕರಾವಳಿ ಕರ್ನಾಟಕದ ದೀರ್ಘಕಾಲದ ಜನಾಗ್ರಹದ ಫಲವಾಗಿ ಈ ರೈಲನ್ನು ಆರಂಭಿಸಿದಾಗ ಅದು ಯಾತ್ರಾಸ್ಥಳವಾದ ಕೊಲ್ಲೂರಿಗೆ ಸುಲಭ ಸಂಪರ್ಕ ಸೌಲಭ್ಯ ಎಂದು ಈ ಪ್ರದೇಶದ ಜನರು ಸಂಭ್ರಮ ಪಟ್ಟಿದ್ದರು. ಆದರೆ ಅದು ತಾತ್ಕಾಲಿಕವಾಯಿತು. ಈ ರೈಲಿಗೆ ಪ್ರಯಾಣಿಕರ ಬೆಂಬಲ ದೊರೆಯದಿರುವುದಕ್ಕೆ ಎರಡು ಕಾರಣಗಳಿವೆ. ಅದು ಮಂಗಳೂರು ಸೆಂಟ್ರಲ್ ಸ್ಪರ್ಷಿಸದೆ ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುವಂತೆ ಮಾಡಿರುವುದು ಮೊದಲ ಮತ್ತು ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಮತ್ತೆಮತ್ತೆ ಮಾಡಿಕೊಂಡ ಮನವಿಗಳು ವ್ಯರ್ಥವಾಗಿದ್ದುವು. ಈಗಲಾದರೂ ಆ ರೈಲನ್ನು ಸಾಂಪ್ರದಾಯಿಕ ರೈಲು ಬದಲಿಗೆ ಡೆಮು ಆಗಿ ಮೇಲ್ದರ್ಜೆಗೇರಿಸಿದರೆ ಅದು ಮಂಗಳೂರು ಸೆಂಟ್ರಲ್ ಮೂಲಕ ಸಂಚರಿಸಬಹುದು. ಆಗ ಮಂಗಳೂರು ಸೆಂಟ್ರಲ್‌ನಲ್ಲಿ ಯಂತ್ರ ಬದಲಿಸುವ ತ್ರಾಸದಾಯಕ ಕ್ರಮ ಅಗತ್ಯವಿರುವುದಿಲ್ಲ. ಒಂದೆಡೆ ಇದು ಪ್ರಯಾಣಿಕರಿಗೆ ಅನುಕೂಲ ಮಾಡಿದರೆ, ಇನ್ನೊಂದೆಡೆ ರೈಲಿನ ವಾರಾಂತ್ಯದ ನಿರ್ವಹಣೆಗೂ ಸಹಕಾರಿಯಾಗಲಿದೆ.

ಈ ರೈಲಿನ ವೈಫಲ್ಯದ ಇನ್ನೊಂದು ಕಾರಣ ಕಣ್ಣೂರು ಮತ್ತು ಬೈಂದೂರು ನಿಲ್ದಾಣಗಳಲ್ಲಿನ ಅದರ ನಿರ್ಗಮನ ಸಮಯ ಜನರಿಗೆ ಅನುಕೂಲವಾಗಿಲ್ಲ. ಈ ಎರಡು ತೊಡಕುಗಳನ್ನು ನಿವಾರಿಸಿದರೆ ಈ ರೈಲು ಜನಪ್ರಿಯವಾಗುವುದು ಖಚಿತ.

ಕಣ್ಣೂರು-ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಸೆಂಟ್ರಲ್-ಕುಮಟಾ ನಡುವೆ ತೀವ್ರ ಪ್ರಯಾಣಿಕ ದಟ್ಟಣೆ ಇದೆ. ಈ ರೈಲನ್ನು ಕುಮಟಾ ತನಕ ವಿಸ್ತರಿಸಿದರೆ ಜನರಿಗೆ ತುಂಬ ಅನುಕೂಲ ಆಗಲಿದೆ. ಹಾಗೆಯೇ ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರು ನಡುವೆ ಪ್ಯಾಸೆಂಜರ್ ರೈಲು ಬೇಕು ಎನ್ನುವ ಆಗ್ರಹವೂ ಇದೆ.

ಕಣ್ಣೂರು-ಮಂಗಳೂರು ಸೆಂಟ್ರಲ್-ಬೈಂದೂರು ಮೂಕಾಂಬಿಕಾ ರೋಡ್-ಕುಮಟಾ ಪ್ಯಾಸೆಂಜರ್ ರೈಲು ಮುಂದಿನ ವೇಳಪಟ್ಟಿ ಅನುಸರಿಸಬಹುದು. ಕಣ್ಣೂರಿನಿಂದ 6 ಗಂಟೆಗೆ ನಿರ್ಗಮನ, 9.20ಕ್ಕೆಮಂಗಳೂರು ಸೆಂಟ್ರಲ್‌ಗೆ ಆಗಮನ, 9.40ಕ್ಕೆ ನಿರ್ಗಮನ. 12.40ಕ್ಕೆ ಬೈಂದೂರಿಗೆ ಆಗಮನ, 12.45ಕ್ಕೆ ನಿರ್ಗಮನ. 14.15ಕ್ಕೆ ಕುಮಟಾಗೆ ಆಗಮನ. 14.30ಕ್ಕೆ ಕುಮಟಾದಿಂದ ನಿರ್ಗಮನ. 15.55ಕ್ಕೆ ಬೈಂದೂರಿಗೆ ಆಗಮನ. 16.00ಕ್ಕೆ ನಿರ್ಗಮನ. 19.00ಕ್ಕೆ ಮಂಗಳೂರು ಸೆಂಟ್ರಲ್‌ಗೆ ಆಗಮನ, 19.10ಕ್ಕೆ ನಿರ್ಗಮನ. 22.35ಕ್ಕೆ ಕಣ್ಣೂರಿಗೆ ಆಗಮನ. ಕಿಣಿ ಈ ಸಲಹೆಯನ್ನು ತಮ್ಮ ಪತ್ರದಲ್ಲಿ ನೀಡಿದ್ದಾರೆ.

 

Leave a Reply

Your email address will not be published. Required fields are marked *

4 × 2 =