ಕವಿತೆಗಳೊಂದಿಗೆ ಜನರನ್ನು ಬೆಸೆದ ಗಾಯಕ

Call us

Call us

ನವೋದಯದ ಪ್ರಮುಖ ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ ಮತ್ತಿತರರ ಗೀತೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದವರೇ ಕಾಳಿಂಗರಾಯರು. ಹಳ್ಳಿ, ಪಟ್ಟಣಗಳಲ್ಲಿ ಹಾಡುತ್ತಾ ಸಾಗಿದ ರಾಯರು ಭಾವಗೀತೆ ಪ್ರಕಾರವನ್ನು ಜನಪ್ರಿಯಗೊಳಿಸಿದರು. ಅವರ ಹಾಡುಗಾರಿಕೆ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ದೊಡ್ಡ ಪ್ರಭಾವ ಬೀರಿತ್ತು. ವಿದ್ಯೆಯಿಂದ ವಂಚಿತರಾದ ಲಕ್ಷಾಂತರ ಕನ್ನಡಿಗರಿಗೆ ಕಾಳಿಂಗರಾಯರು ಮತ್ತು ಬಾಳಪ್ಪ ಹುಕ್ಕೇರಿ ಅವರ ಹಾಡುಗಾರಿಕೆಯಿಂದ ನವೋದಯ ಸಾಹಿತ್ಯ ಪರಿಚಯವಾಯ್ತು. ಈ ಕಾರಣಕ್ಕಾಗಿ ಕನ್ನಡಿಗರು ಇವರಿಬ್ಬರಿಗೆ ಕೃತಜ್ಞರಾಗಿರಬೇಕು.

Call us

Click here

Click Here

Call us

Call us

Visit Now

Call us

ಕಾಳಿಂಗರಾಯರು ಶಾಸ್ತ್ರೀಯ ಸಂಗೀತ ವಾತಾವರಣದಲ್ಲಿ ಬೆಳೆದುಬಂದವರು. ಅವರಿಗೆ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿಯಿತ್ತು. ಈ ಹಿನ್ನೆಲೆಯೊಂದಿಗೆ ಭಾವಗೀತೆ ಪ್ರಪಂಚಕ್ಕೆ ಕಾಲಿಟ್ಟ ಅವರು ನಂತರದ ಗಾಯನ ಪ್ರತಿಭೆಗಳಿಗೆ ಮಾದರಿಯಾದರು. ಸಿನಿಮಾ ಕ್ಷೇತ್ರದಲ್ಲೂ ಪಿ.ಕಾಳಿಂಗರಾವ್ ವಿಶಿಷ್ಟ ಛಾಪು ಮೂಡಿಸಿದ್ದಾರೆ. ನವೋದಯ ಕವಿಗಳ ಅರ್ಥಪೂರ್ಣ ಗೀತೆಗಳು ಸಿನಿಮಾಗೆ ಪರಿಚಯವಾಗಿದ್ದೇ ಕಾಳಿಂಗರಾಯರ ಮೂಲಕ. ಹತ್ತಾರು ಭಾವಗೀತೆಗಳು ಅವರ ಕಂಠಸಿರಿಯಲ್ಲಿ ಬೆಳ್ಳಿತೆರೆಗೆ ಅಳವಡಿಸಲ್ಪಟ್ಟಿವೆ. ಮುಂದೆ ಮೈಸೂರು ಅನಂತಸ್ವಾಮಿ, ಗುಣಸಿಂಗ್, ಸಿ.ಅಶ್ವಥ್ ಮತ್ತಿತರೆ ಸಂಗೀತಗಾರರು ಕಾಳಿಂಗರಾಯರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದರು. ಈ ಮೂಲಕ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳ ಬಾಂಧವ್ಯ ಗಟ್ಟಿಯಾಯ್ತು.

ಸಾಹಿತ್ಯವನ್ನು ತಲುಪಿಸುವ ವಾಹಕವಾಗಷ್ಟೇ ಸಂಗೀತ ಕೆಲಸ ಮಾಡಬೇಕು ಎನ್ನುವುದು ಕಾಳಿಂಗರಾಯರ ನಿಲುವು. ತಬಲ, ಹಾರ್ಮೋನಿಯಂನಂಥ ಕೆಲವೇ ವಾದ್ಯಗಳ ಬಳಕೆ ಮಾಡುತ್ತಿದ್ದ ಅವರಿಗೆ ಸಾಹಿತ್ಯವೇ ಮುಖ್ಯ. ಸಂಗೀತವನ್ನು ಅತಿ ಮಾಡದೆ, ಸಾಹಿತ್ಯವನ್ನು ಜನರಿಗೆ ಮುಟ್ಟಿಸಬೇಕೆನ್ನುವುದು ಅವರ ಕಾಳಜಿ. ಕಾಳಿಂಗರಾಯರ ಸಿನಿಮಾ ಗೀತೆಗಳಲ್ಲಿಯೂ ಈ ಅಂಶವನ್ನು ನಾವು ಗುರುತಿಸಬಹುದು. ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ನಾನು ಅವರ ಅಭಿಮಾನಿಯಾಗಿದ್ದೆ. ವೈಯಕ್ತಿಕವಾಗಿ ನನ್ನ ಹಾಡುಗಾರಿಕೆಯ ಮೇಲೂ ಅವರ ಪ್ರಭಾವವಿದೆ.

ಸ್ನೇಹಪರ ವ್ಯಕ್ತಿತ್ವದ ಕಾಳಿಂಗರಾಯರು ಶಿಸ್ತಿನ ವ್ಯಕ್ತಿ. ಸಂಗೀತಕ್ಕಿಂತ ಸಾಹಿತ್ಯವೇ ಪ್ರಧಾನವಾಗಿರಬೇಕೆನ್ನುವ ಅವರ ಆಶಯವೇ ಭಾವಗೀತ ಪ್ರಪಂಚಕ್ಕೆ ದೊಡ್ಡ ಆಸ್ತಿ. ಈ ಶ್ರೀಮಂತ ಪರಂಪರೆ ಮುಂದುವರೆಯಬೇಕು. ಈಗಿನ ಯುವ ಸಂಗೀತಗಾರರು ಟ್ಯೂನ್ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಇದರಿಂದ ಗೀತೆಗೆ ಸಿಗಬೇಕಾದ ಭಾವ ದಕ್ಕುವುದಿಲ್ಲ. ಇವರಿಗೆಲ್ಲಾ ಕಾಳಿಂಗರಾಯರು ಮಾದರಿಯಾಗಬೇಕು. ಇದೇ ಮೇರು ಗಾಯಕನಿಗೆ ನಾವು ಸಲ್ಲಿಸಬಹುದಾದ ಗೌರವ.

ಜನ್ಮ ಶತಮಾನೋತ್ಸವ
ಸುಗಮ ಸಂಗೀತ, ಚಿತ್ರಸಂಗೀತಕ್ಕೆ ದೊಡ್ಡ ಕೊಡುಗೆಯಿತ್ತ ಕಾಳಿಂಗರಾಯರ ಜನ್ಮಶತಮಾನೋತ್ಸವದ ವರ್ಷವಿದು. ತನ್ನಿಮಿತ್ತ ಹೊಂಬಾಳೆ ಪ್ರತಿಭಾರಂಗ ‘ಭಾವ – ಚಿತ್ರ – ನಮನ’ ಎರಡು ದಿನಗಳ ಕಾರ್ಯಕ್ರಮಗಳೊಂದಿಗೆ ಅವರನ್ನು ಸ್ಮರಿಸುತ್ತಿದೆ. ಇಂದು ಸಂಜೆ 4ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಡಿನ ಖ್ಯಾತ ಗಾಯಕ, ಗಾಯಕಿಯರಿಂದ ಕಾಳಿಂಗರಾಯರಿಗೆ ಗೀತ ನಮನ.

Call us

(ಶಿವಮೊಗ್ಗ ಸುಬ್ಬಣ್ಣ ಖ್ಯಾತ ಗಾಯಕರು, ನಿರೂಪಣೆ ಶಶಿಧರ. ಕೃಪೆ: ವಿಕ)

Leave a Reply

Your email address will not be published. Required fields are marked *

seven + two =