ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಗ್ರಾಮಸಭೆ, ಜಮಾಬಂದಿ ಹಾಗೂ ಗ್ರಾಮ ಪಂಚಾಯತ್‌ನ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಗ್ರಾಮಸ್ಥರ ಭಾಗವಹಿಸುವಿಕೆ ಗರಿಷ್ಠ ಪ್ರಮಾಣದಲ್ಲಿರಬೇಕು. ಇಲ್ಲಿ ನಡೆದ ಪರಸ್ಪರ ಆರೋಗ್ಯಕರ ಚರ್ಚೆಯಿಂದ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುವುದರೊಂದಿಗೆ ಸಭೆಗಳು ಔಚಿತ್ಯ ಪೂರ್ಣವಾಗಿರಲು ಸಾಧ್ಯವಾಗುತ್ತದೆ ಎಂದು ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಹೇಳಿದರು.
ಕಾಲ್ತೋಡು ಅಂಬೇಡ್ಕರ್ ಭವನದಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಗ್ರಾಮಸ್ಥರ ಕುಂದು ಕೊರತೆಗಳನ್ನು ತಿಳಿಸಲು, ಗ್ರಾಮಸ್ಥರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಮತ್ತು ವಿವಿಧ ಯೋಜನೆಗಳ ಮಾಹಿತಿ ಪಡೆಯಲು ಇಂತಹ ವೇದಿಕೆಗಳನ್ನು ಗ್ರಾಮಸ್ಥರು ಬಳಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ನೀಡಿದರು.
ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಿದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಮಾತನಾಡಿ, ಈ ಭಾಗದ ಕೆಲವು ಕಾಮಗಾರಿಗಳನ್ನು ಸ್ಥಳ ಸಮೀಕ್ಷೆ ನಡೆಸಿ ಪರಿಶೀಲಿಸಿದ ನಂತರ ಚಾಲನೆ ನೀಡಲಾಗುವುದು ಎಂದ ಅವರು ಜಮಾಬಂದಿಯಲ್ಲಿ ಮಂಡಿಸಿದ ಗ್ರಾಪಂನ ವಾರ್ಷಿಕ ಲೆಕ್ಕಪತ್ರದ ಬಗ್ಗೆ ಗ್ರಾಮಸ್ಥರು ಯಾರೂ ಆಕ್ಷೇಪಣೆ ಮಾಡದ ಹಾಗೂ ಯಾವುದೇ ದೂರು ನೀಡದ ನೆಲೆಯಲ್ಲಿ ಗ್ರಾಪಂನ ಆಯ-ವ್ಯಯವನ್ನು ಅಂಗೀಕರಿಸುವುದಾಗಿ ಹೇಳಿದರು. ತಾಲೂಕು ಪಂಚಾಯತ್ ವ್ಯಸ್ಥಾಪಕ ರಾಮಚಂದ್ರ ಮಯ್ಯ, ಜಿಪಂ ಅಭಿಯಂತರ ಶ್ರೀಕಾಂತ್ ಉಪಸ್ಥಿತರಿದ್ದರು. ಪಿಡಿಒ ಸತೀಶ್ ತೋಳಾರ್ ಲೆಕ್ಕಪತ್ರ ಮಂಡಿಸಿ, ನಿರೂಪಿಸಿದರು.