ಕರ್ನಾಟಕ ಬ್ಯಾಂಕ್ ಬೈಂದೂರು ಶಾಖೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಅಂಚಿನ ಜಗನ್ನಾಥ ಶೆಟ್ಟಿ ಅವರ ವ್ಯವಹಾರ ಸಂಕೀರ್ಣದಲ್ಲಿ ಆರಂಭವಾದ ಕರ್ನಾಟಕ ಬ್ಯಾಂಕ್‌ನ ೭೯೫ನೆ ಶಾಖೆಯನ್ನು ಬ್ಯಾಂಕ್‌ನ ಮಾಜಿ ನಿರ್ದೇಶಕ ಎ. ಜಿ. ಕೊಡ್ಗಿ ಉದ್ಘಾಟಿಸಿದರು.

ಆ ಬಳಿಕ ಮಾತನಾಡಿದ ಅವರು ೧೯೨೪ರಲ್ಲಿ ಸ್ಥಾಪನೆಯಾದ ಕರ್ನಾಟಕ ಬ್ಯಾಂಕ್ ಶೀಘ್ರವೇ ೮೦೦ ಶಾಖೆಗಳನ್ನು ಹೊಂದಲಿದೆ. ಅದು ಸಾಧನೆಯ ಮೂಲಕ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಸೇವೆ ಸಲ್ಲಿಸುವ ಮೂಲಕ ಸ್ಥಾಪಕರ ಆಶಯವನ್ನು ಈಡೇರಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಮಹಾ ಪ್ರಬಂಧಕ ವೈ. ವಿ. ಬಾಲಚಂದ್ರ ಮಾತನಾಡಿ ಕರ್ನಾಟಕ ಬ್ಯಾಂಕನ್ನು ಸಾಮಾನ್ಯ ಜನರು ರೂ. ೧೧,೫೮೨ರ ಬಂಡವಾಳದೊಂದಿಗೆ ಸ್ಥಾಪಿಸಿದರು. ಅದು ಸಾಮಾನ್ಯರಿಗೆ ಆರ್ಥಿಕ ನೆರವು ನೀಡಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ೯೫ನೆಯ ವರ್ಷ ತಲಪಿರುವ ಬ್ಯಾಂಕ್ ರೂ. ೫೪೦೦ ಕೋಟಿ ಬಂಡವಾಳ ಹೊಂದಿದೆ. ಉತ್ತಮ ಲಾಭ ಗಳಿಸುವ ಮೂಲಕ ೧.೬೮ ಲಕ್ಷ ಪಾಲುದಾರರಿಗೆ ಗರಿಷ್ಠ ಸಾಧ್ಯ ಡಿವಿಡೆಂಡ್ ನೀಡುತ್ತಿದೆ. ೨೨ ರಾಜ್ಯ ಮತ್ತು ೨ ಕೇಂದ್ರಾಡಳಿತ ಪ್ರದೇಶದಲ್ಲಿ ವ್ಯವಹಾರ ನಡೆಸುತ್ತಿದೆ. ಅದರ

ಅನುತ್ಪಾದಕ ಸಾಲ ಶೇ ೫ಕ್ಕಿಂತ ಕಡಿಮೆ ಇದೆ. ಅದು ನೀಡುವ ಸಾಲದ ಗರಿಷ್ಠ ಭಾಗ ಸಾಮಾನ್ಯ ಜನರು ಪಡೆಯುತ್ತಿದ್ದಾರೆ. ಶೇ. ೭೭ ಠೇವಣಿ ಅಂತವರಿಂದ ಸಂಗ್ರಹವಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಕೆಯ ಮೂಲಕವೂ ಗ್ರಾಹಕರಿಗೆ ಉತ್ಕೃಷ್ಠ ಸೇವೆ ನೀಡುತ್ತಿದೆ. ಎಲ್ಲ ವಿಧದ ಆರ್ಥಿಕ ಸೇವೆ ಒದಗಿಸುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಗರಿಷ್ಠ ಮಟ್ಟದ ಗ್ರಾಹಕ ವಿಶ್ವಾಸ ಗಳಿಸಿದೆ ಎಂದರು. ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ ಎಟಿಎಂ ಉದ್ಘಾಟಿಸಿದರು.

ರತ್ತುಬಾಯಿ ಜನತಾ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಜಾಹ್ನವಿ, ಸುಮಿತ್ರಾ ಪ್ರಾರ್ಥನೆ ಹಾಡಿದರು. ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕಿ ವಿದ್ಯಾಲಕ್ಷ್ಮೀ ಆರ್ ಸ್ವಾಗತಿಸಿದರು. ಶಾಖಾ ಪ್ರಬಂಧಕ ಪರಮೇಶ್ವರ ವಂದಿಸಿದರು. ಪ್ರಧಾನ ವ್ಯವಸ್ಥಾಪಕ ವಾದಿರಾಜ್ ಕೆ. ನಿರೂಪಿಸಿದರು. ಎ. ಜಿ. ಕೊಡ್ಗಿ ಮತ್ತು ಕಟ್ಟಡದ ಮಾಲೀಕ ಜಗನ್ನಾಥ ಶೆಟ್ಟಿ-ಪ್ರೇಮಾ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

thirteen − 7 =