ಬೈಂದೂರು ಕ್ಷೆತ್ರದಲ್ಲಿ ಮುಖ್ಯಮಂತ್ರಿ ಸ್ವಾಗತಕ್ಕೆ ಭರದ ಸಿದ್ಧತೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಜ್ಯ ಸರಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಜ.8ರ ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಗಮಿಸಲಿದ್ದು, ವಿವಿಧ ಇಲಾಖೆಗಳ 490.97 ಕೋಟಿ ರೂ. ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರು ಹೇಳಿದರು.
ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಬೈಂದೂರು ಗಾಂಧಿ ಮೈದಾನದಲ್ಲಿ ಸರ್ವ ತಯಾರಿಗಳ ನಡೆಯುತ್ತಿದ್ದು ಅಂದು ಸುಮಾರು 35,000 ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬೈಂದೂರು ಕ್ಷೇತ್ರದ ಕರಾವಳಿ ಭಾಗಕ್ಕೆ ಮೊದಲ ಭಾರಿಗೆ ಮುಖ್ಯಂತ್ರಿಗಳು ಆಗಮಿಸುತ್ತಿರುವುದರಿಂದ ಪಕ್ಷದ ಕಾರ್ಯಕರ್ತರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಗುತ್ತಿದೆ. ಸಾಲಮನ್ನಕ್ಕೆ ಪೂರ್ವಭಾವಿಯಾಗಿ ಪೂರ್ಣ ಸಾಲ ಕಟ್ಟಿದವರಿಗೆ ಸಾಲಮನ್ನ ಮಾಡಬೇಕು ಹಾಗೂ ಸ್ವಸಹಾಯ ಗುಂಪುಗಳಿಗೆ ನೀಡುತ್ತಿರುವ ಸಾಲಕ್ಕೆಶೇ.4% ಇರುವ ಬಡ್ಡಿಯನ್ನು ರಾಜ್ಯ ಸರಕಾರವೇ ಶೂನ್ಯಬಡ್ಡಿಗೆ ಇಳಿಸಬೇಕು ಹಾಗೂ ಮೀನುಗಾರರಿಗೆ ರಾಜ್ಯ ಸರಕಾರದಿಂದಲೇ ಪೂರ್ಣಪ್ರಮಾಣದಲ್ಲಿ ಸೀಮೆಯಂತೆ ದೊರೆಯುವಂತೆ ಮಾಡಿ ಬಜೆಟ್ ನಲ್ಲಿ ಘೋಷಿಸುವಂತೆ ಮನವಿ ನೀಡಲಾಗುವುದು ಎಂದರು.
ಬೈಂದೂರು ಕ್ಷೇತ್ರಕ್ಕೆ 2,000 ಕೋಟಿ ಅನುದಾನ
ಬೈಂದೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಳೆದ ನಾಲ್ಕೂವರೆ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಈವರೆಗೆ ಸುಮಾರು 2,000 ಕೋಟಿ ಅನುದಾನ ಮಂಜೂರು ರಾಜ್ಯ ಸರಕಾರದಿಂದ ತರಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ 178.22 ಕೋಟಿ, ಸಣ್ಣ ನೀರಾವರಿ ಇಲಾಖೆ 50.34 ಕೋಟಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಗ್ರಾಮೀಣಾಭಿವೃದ್ದಿ ಇಲಾಖೆ 45.11 ಕೋಟಿ, ವರಾಹಿ ನಿರಾವರಿ ನಿಗಮ 41.98 ಕೋಟಿ, ಕರಾವಳಿ ಪ್ರಾಧಿಕಾರ 1.45 ಕೋಟಿ, ಬಂದರು ಮತ್ತು ಮೀನುಗಾರಿಕಾ ಇಲಾಖೆ 241.45 ಕೋಟಿ, ಸಮಾಜ ಕಲ್ಯಾಣ ಇಲಾಖೆ 8.12 ಕೋಟಿ, ಸಮಗ್ರ ಗಿರಿಜನ ಅಭಿವೃದ್ದಿ ಇಲಾಖೆ (ಐ.ಟಿ.ಡಿ.ಪಿ) 37.19, ಕರ್ನಾಟಕ ರಸ್ತೆ ಸಾರಿಗೆ ನಿಗಮ 17.19 ಕೋಟಿ, ಪ್ರವಾಸೋದ್ಯಮ ಇಲಾಖೆ 12.58, ಗ್ರಾಮ ವಿಕಾಸ ಯೋಜನೆ 9.75 ಕೋಟಿ, ಎಡಿಬಿ ನೆರವಿನ ಯೋಜನೆ 92.23 ಕೋಟಿ, ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ) 63.49, ಮಲೆನಾಡು ಪ್ರದೇಶಾಬಿವೃದ್ದಿ ಯೋಜನೆ 1.58 ಕೋಟಿ, ಡಾ. ಅಂಬೇಡ್ಕರ್ ಅಬಿವೃದ್ದಿ ನಿಗಮ (ವೈಯಕ್ತಿಕ ಸಾಲ ಸಹಾಯಧನ) 3.08 ಕೋಟಿ, ಡಾ. ದೇವರಾಜ್ ಅರಸು ಅಭಿವೃದ್ದಿ ನಿಗಮ (ವೈಯಕ್ತಿಕ ಸಾಲ ಸಹಾಯಧನ) 5.28 ಕೋಟಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿ. (ವೈಯಕ್ತಿಕ ಸಾಲ ಸಹಾಯಧನ) 10.50 ಕೋಟಿ, ದಾರ್ಮಿಕ ಕ್ಷೇತ್ರ ಅಬಿವೃದಿಗೆ 2.29, ಕಾಮಗಾರಿಳಿಗೆ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ನಡೆದಿದ್ದು ಮುಖ್ಯಂತ್ರಿಗಳು ವಿವಿಧ ಇಲಾಖೆಗಳ ಒಟ್ಟು 490.97 ಕೋಟಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು ವಿಧಾಸಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3180 ಫಲಾನಿಭವಿಗಳಿಗೆ 94ಸಿ ಹಕ್ಕು ಪತ್ರ, 524 ಎನ್.ಸಿ.ಆರ್ ಹಕ್ಕು ಪತ್ರ ವಿತರಿಸಲಾಗಿದೆ. 3926 ಬಸವ ವಸತಿ ಮನೆ ಹಾಗೂ 503 ಮೀನುಗಾರಿಕಾ ಮನೆಗಳನ್ನು ಮಂಜೂರು ಮಾಡಲಾಗಿದೆ. ಕ್ಷೇತ್ರ 3664 ವಸತಿಗಳ 104.94 ಕೋಟಿ ವಸತಿ ಸಾಲ ಮತ್ತು ಬಡ್ಡಿ ಮನ್ನ ಮಾಡಲಾಗಿದೆ, 43637 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ, ಕಾರ್ಯದರ್ಶಿ ನಾಗರಾಜ ಗಾಣಿಗ, ತಾಪಂ ಸದಸ್ಯ ಜಗದೀಶ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು /ಕುಂದಾಪ್ರ ಡಾಟ್ ಕಾಂ ಸುದ್ದಿ/