ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು, ಮೇ.3: ಇಂದು ನಿಧನರಾದ ನಿತ್ಯೋತ್ಸವದ ಕವಿ ಕೆ. ಎಸ್. ನಿಸಾರ್ ಅಹಮದ್ ಅವರು ಕರಾವಳಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ವಿವಿಧ ಕಾರ್ಯಕ್ರಮಗಳಿಲ್ಲಿಯೂ ಭಾಗವಹಿಸಿದ್ದರು. 2017ರಲ್ಲಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2020ರಲ್ಲಿ ಬೈಂದೂರು ತಾಲೂಕಿನ ಮೊಗೇರಿ ಹಾಗೂ 2014ರಲ್ಲಿ ಬೈಂದೂರಿನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
2017ರ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕನ್ನಡ ಪರ ಹೋರಾಟಗಳ ಅಗತ್ಯ, ಇಂಗ್ಲಿಷ್ ಕಲಿಕೆಯ ಅಗತ್ಯತೆ, ರಾಜಕೀಯ ಪ್ರಕ್ಷುಬ್ಧತೆ, ಕನ್ನಡ ನಾಡಿನ ಪ್ರಾಕೃತಿಕ ವೈಭವ ಹೀಗೆ ಹತ್ತು ಹಲವು ವಿಷಯಗಳ ಕುರಿತಾಗಿ ಮನಮುಟ್ಟುವ ಮನಮುಟ್ಟುವಂತೆ ಮಾತನಾಡಿದ್ದರು.
2012ರ ನವಂಬರ್ 20ರ ವೇಳೆಗೆ ಅಡಿಗರು ಹುಟ್ಟಿದ ನೆಲ ಮತ್ತು ಮನೆ ನೋಡಬೇಕು ಎಂದು ಆಶಿಸಿದರು. ನಿಸಾರ್ ಅವರನ್ನು ಬೈಂದೂರಿನ ಸಾಂಸ್ಕೃತಿಕ ಸಂಘಟಕ ಸುಧಾಕರ ಪಿ. ಬೈಂದೂರು ಮತ್ತು ಲೇಖಕ ಓಂ ಗಣೇಶ್ ಅವರು ಮೊಗೇರಿ ಮತ್ತು ಅಡಿಗರ ಮನೆಗೆ ಕರೆದೊಯ್ದಿದ್ದರು. ಅಲ್ಲಿ ತೀರ ಬಾವುಕರಾದ ಅವರು ಅಡಿಗರ ಕವನಗಳನ್ನು ಗುಣುಗುಣಿಸುತ್ತಿದ್ದರು. ಅಡಿಗರು ಹುಟ್ಟಿ, ಬಾಲ್ಯದ ದಿನಗಳನ್ನು ಕಳೆದ ಮನೆಯ ತುಂಬೆಲ್ಲ ಓಡಾಡಿ, ನೋಡಿ ಅಡಿಗರನ್ನು ಮತ್ತೆಮತ್ತೆ ನೆನೆಯುತ್ತ ಪುಲಕಿತರಾಗಿದ್ದರು. ಅಡಿಗರ ದೊಡ್ಡಪ್ಪನ ಮಗ ಶಂಕರನಾರಾಯಣ ಅಡಿಗರಿಂದ ಕವಿ ಅಡಿಗರ ಬಗೆಗೆ ಅವರು ತಿಳಿದಿದ್ದ ವಿಷಯಗಳನ್ನು ಕೇಳಿಸಿಕೊಂಡಿದ್ದರು.
ನಿಸಾರ್ ಅಹಮದ್ ಎರಡನೆ ಬಾರಿ ಬೈಂದೂರಿಗೆ ಬಂದಿದ್ದು 2014ರ ಡಿಸೆಂಬರ್ 27 ಮತ್ತು 28ರಂದು. ಕವಿ ಮೊಗೇರಿ ಗೋಪಾಕೃಷ್ಣ ಅಡಿಗರು ಓದಿದ್ದ ಬೈಂದೂರು ಜ್ಯೂನಿಯರ್ ಕಾಲೇಜಿನಲ್ಲಿ ಸುರಭಿ ರಿ. ಬೈಂದೂರು ಆಯೋಜಿಸಿದ್ದ ’ಅಡಿಗ ಸಾಹಿತ್ಯೋತ್ಸವ’ದ ಅಧ್ಯಕ್ಷತೆ ವಹಿಸಿದ್ದರು. ಎರಡೂ ದಿನ ನಡೆದ ಅದರ ವಿವಿಧ ಕಾರ್ಯಕ್ರಮಗಳಲ್ಲಿ ಅತ್ಯಂತ ಸಂತಸ ಮತ್ತು ಲವಲವಿಕೆಯಿಂದ ಭಾಗವಹಿಸಿದ್ದರು. ಎಲ್ಲರೊಂದಿಗೆ ಬೆರೆತು, ಕಲೆತು ಆತ್ಮೀಯತೆ ತೋರಿದ್ದರು. ಅದೇ ಸಂದರ್ಭ ಕವಿ, ಕತೆಗಾರ ಜಯಂತ ಕಾಯ್ಕಿಣಿ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ ನಡೆದ ’ಸುರಭಿ’ಯ ವಾರ್ಷಿಕ ಕಾರ್ಯಕ್ರಮದಲ್ಲಿ ನಿಸಾರ್ ಅಹಮದ್ ಅವರನ್ನು ಸಂಸ್ಥೆ ಸನ್ಮಾನಿಸಿತ್ತು. ಅವರ ಈ ಎರಡೂ ಭೇಟಿಗಳನ್ನು ಇಲ್ಲಿನ ಸಂಘಟಕರು ಮತ್ತು ಸಹೃದಯಿಗಳು ಈಗಲೂ ಮೆಲುಕು ಹಾಕುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರಿನಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಬಗ್ಗೆ ನಿಸಾರ್ ಅವರಾಡಿದ್ದ ಮಾತು:
ಕನ್ನಡಕಾವ್ಯ ಪರಂಪರೆಯ ಮೇಲೆ ಅಗಾಧ ಪ್ರಭಾವ ಬೀರಿ ಕಾವ್ಯವನ್ನು ನೋಡುವ ದೃಷ್ಟಿಯನ್ನು ಬದಲಿಸಿದ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಕಾವ್ಯ ಆಸ್ವಾದಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಪೂರ್ವ ಕವಿಗಳನ್ನು ಅನುಕರಿಸಿ ಬರೆಯುತ್ತಿದ್ದ ನನ್ನಂತಹ ಹಲವರನ್ನು ಅಡಿಗರು ತಿದ್ದಿ ಸ್ವಂತಿಕೆ ರೂಢಿಸಿಕೊಳ್ಳುವಂತೆ ಮಾಡಿದರು. ಕನ್ನಡದಲ್ಲಿ ಕೃತಿನಿಷ್ಠ ವಿಮರ್ಶೆ ಕಲಿಸಿದ ಅವರಲ್ಲಿ ಇದ್ದ ಮಾನವೀಯತೆ, ಸದಭಿರುಚಿ, ಧೀರ ನಿಷ್ಠೆ, ಅಸಾಧಾರಣವಾದುದು. ಓದುಗನ ಮೇಲೆ ಪ್ರಭಾವ ಬೀರುವಂತೆ, ಅವನನ್ನು ದೀರ್ಘಕಾಲ ಕಾಡುವಂತೆ ಬರೆಯುವವನೇ ಶ್ರೇಷ್ಠ ಕವಿ. ಅಡಿಗರ ಕವನಗಳ ಪ್ರಮುಖ ಗುಣ ಅದು. ಅಡಿಗರು ಆರಂಭಿಕ ಶಿಕ್ಷಣ ಪಡೆದ ಶಾಲೆಯಲ್ಲಿ ಅವರ ಕಾವ್ಯಾವಲೋಕನ ನಡೆಯುತ್ತಿರುವುದು ಅರ್ಥಪೂರ್ಣವಾದುದು.
ಕವಿ ನಿಸಾರ್ ಅಹಮದರ ಕವಿತೆಗಳನ್ನು ಮಲೆಯಾಳಕ್ಕೆ ಅನುವಾದಿಸಿದ್ದ ಕುಂದಾಪುರದ ಹಿರಿಯ ಲೇಖಕಿ ಪಾರ್ವಜಿ ಜಿ. ಐತಾಳ್ ಅವರು ನಿಸಾರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.
Good news media Kundapur. Com