ಸಾಲಿಗ್ರಾಮ: ಕಾಂಡ್ಲಾ ವನದ ನಡುವೆ ಕಯಾಕಿಂಗ್ ಸಾಹಸ ಯಾನ

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:
ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ ಎನ್ನುವ ಮಾತು ಯಾವಾಗಲೂ ಕೇಳಿ ಬರುತ್ತದೆ ಇತ್ತೀಚೆಗೆ ಜಿಲ್ಲೆಯ ಹಿನ್ನೀರಿನ ಪ್ರದೇಶಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಹೌಸ್ ಬೋಟ್, ಕುದ್ರುಗಳಿಗೆ ಪ್ರವಾಸ, ಕಯಾಕಿಂಗ್ ಚಟುವಟಿಕೆಯಂತಹ ಹೊಸ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಿಲ್ಲೆಯ ಸಾಲಿಗ್ರಾಮ ಸಮೀಪದಲ್ಲಿ ಸೀತಾ ನದಿಯ ಹಿನ್ನೀರಿನಲ್ಲಿನ ಕಾಂಡ್ಲಾ ವನದ ಮಧ್ಯದಲ್ಲಿ ಸಂಚರಿಸುವ ಕಯಾಕಿಂಗ್ ಸಾಹಸ ಯಾನ, ಪ್ರವಾಸಿಗರಿಗೆ ಪ್ರವಾಸದ ಹೊಸ ಅನುಭವ ನೀಡಲಿದೆ.

Call us

ಸ್ಥಳೀಯ ಯುವಕರಾದ ಮಿಥುನ್ ಕೋಡಿ ಮತ್ತು ಲೋಕೇಶ್ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಸಾಲಿಗ್ರಾಮದ ಪಾರಂಪಳ್ಳಿ ಬ್ರಿಡ್ಜ್ ಬಳಿ, ಸೀತಾನದಿಯ ಹಿನ್ನಿರಿನ ಕಾಂಡ್ಲಾ ವನದಲ್ಲಿ ಕಯಾಕಿಂಗ್ ಚಟುವಟಿಕೆಗಳನ್ನು ಆರಂಭಿಸಿದ್ದು, ಪ್ರವಾಸಿಗರಿಗೆ, ಸಾಹಸ ಚಟುವಟಿಕೆ ಕೈಗೊಳ್ಳುವ ಆಸಕ್ತರಿಗೆ ಇದು ಅತ್ಯಂತ ಪ್ರಶಸ್ತವಾದ ತಾಣವಾಗಿದೆ. ದಟ್ಟ ಕಾಂಡ್ಲಾವನದ ಮಧ್ಯೆದಲ್ಲಿ ಕಯಾಕಿಂಗ್ ಯಾನ ಆರಂಭಿಸಿರುವುದು ಜಿಲ್ಲೆಯಲ್ಲೆ ಪ್ರಪ್ರಥಮ ಯತ್ನವಾಗಿದೆ.

ಇದುವರೆಗೂ ಕಯಾಕಿಂಗ್ ಮಾಡಿ ಯಾವುದೇ ಅನುಭವ ಇಲ್ಲದವರಿಗೂ ಸಹ, ಇಲ್ಲಿನ ತರಬೇತುದಾರರು ಕೇವಲ 5 ರಿಂದ 10 ನಿಮಿಷದಲ್ಲಿ ಕಯಾಕಿಂಗ್ ನಡೆಸುವ ಕೌಶಲ್ಯಗಳನ್ನು ಸಮರ್ಥವಾಗಿ ಕಲಿಯುವಂತೆ, ನೀರಿನಲ್ಲಿಯೇ ಅಗತ್ಯ ತರಬೇತಿ ನೀಡಲಿದ್ದು, ದೋಣಿಯೊಂದಿಗೆ ನೀರಿಗಳಿದ ಪ್ರವಾಸಿಗರೇ ಸ್ವತಃ ದೋಣಿಗಳನ್ನು ನಡೆಸಬಹುದಾಗಿದೆ.

Call us

ಸಾಲಿಗ್ರಾಮದ ಪಾರಂಪಳ್ಳಿ ಸೇತುವೆ ಬಳಿಯಿಂದ ಆರಂಭವಾಗುವ ಯಾನದಲ್ಲಿ ಸೇತುವೆಯ ಕೆಳಗಿನಿಂದ ಹಿನ್ನಿರಿನಲ್ಲಿನ ದಟ್ಟ ಕಾಂಡ್ಲಾ ವನದ ನಡುವೆ ಪ್ರಯಾಣ ನಡೆಯಲಿದೆ. ಸುಮಾರು 2 ಗಂಟೆಯ ಈ ಪ್ರಯಾಣದ ಅವಧಿಯಲ್ಲಿ ಕಾಂಡ್ಲಾದ ಹಸಿರು ಪ್ರವಾಸಿಗರ ಕಣ್ಮಣ ಸೆಳೆಯಲಿದೆ, ಕಾಂಡ್ಲಾ ವನದಲ್ಲಿ ಸೂರ್ಯ ಕಿರಣಗಳು ಸಹ ಒಳ ಬರಲು ಪ್ರಯಾಸಪಡುವ ಜಾಗದಲ್ಲಿ ಸಹ ಸುಗಮವಾಗಿ ಯಾನ ನಡೆಸ ಬಹುದಾಗಿದೆ. ದೋಣಿ ನಡೆಸುವಾಗ ಆಯಾಸವಾದಲ್ಲಿ ಹಿನ್ನೀರಿನ ಮಧ್ಯೆಯೇ ದೋಣಿಯಲ್ಲಿ ಕುಳಿತು ವಿಶ್ರಾಂತಿ ಪಡೆದು ಯಾನ ಮುಂದುವರೆಸಬಹುದು. ಪ್ರವಾಸಿಗರು ನಡೆಸುವ ದೋಣಿಯ ಮುಂದೆ ಮಾರ್ಗದರ್ಶಕರಾಗಿ ಮತ್ತು ದೋಣಿಯ ಹಿಂದೆ ಸುರಕ್ಷತೆಯ ದೃಷ್ಠಿಯಿಂದ ತರಬೇತುದಾರರು ಇರಲಿದ್ದು, ದೋಣಿಯ ವೇಗ ಹೆಚ್ಚಿಸುವ, ಕಡಿಮೆಗೊಳಿಸುವ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾರೆ. ಅತ್ಯಂತ ದಟ್ಟವಾದ ಕಾಂಡ್ಲಾ ವನದೊಳಗಿನ ಪಕ್ಷಿಗಳ ಇಂಚರ, ತಂಪು ವಾತಾವರಣ , ಜುಳು ಜುಳು ಹಿನ್ನೀರಿನ ಹರಿವು , ಕಾಂಡ್ಲಾದ ಬೃಹತ್ ಬೇರುಗಳು, ಕತ್ತಲೆಯನ್ನು ಸೀಳಿ ಹೊರಬರುವ ಸೂರ್ಯ ಕಿರಣಗಳು ಪರಿಸರದ ವಿಸ್ಮಯ ಲೋಕವನ್ನು ನಿಮ್ಮೆದುರಿಗೆ ತೆರೆದಿಡುತ್ತವೆ.

ಕಯಾಕಿಂಗ್ ಗಾಗಿ ಇಲ್ಲಿ ಒಟ್ಟು 8 ದೋಣಿಗಳಿದ್ದು, ಒಂದು ದೋಣಿಯಲ್ಲಿ ಇಬ್ಬರಂತೆ ಒಂದೇ ಸಮಯದಲ್ಲಿ ಒಟ್ಟು 12 ಜನ ಈ ಯಾನದಲ್ಲಿ ಭಾಗವಹಿಸಬಹುದಾಗಿದ್ದು, 2 ದೋಣಿಯಲ್ಲಿ ತರಬೇತುದಾರರು ಜೊತೆಗಿರುತ್ತಾರೆ. ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ, ಹಿನ್ನೀರಿನ ಉಬ್ಬರ ಇಳಿತದ ಆಧಾರದಲ್ಲಿ ಕಯಾಕಿಂಗ್ ಚಟುವಟಿಕೆ ನಡೆಯಲಿದ್ದು, ಕಲೆವೊಮ್ಮೆ ನೀರಿನ ಇಳಿತವಿದ್ದಲ್ಲಿ ಕಾಂಡ್ಲಾ ವನದ ಕೆಲವು ಒಳ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ.

ಇಲ್ಲಿನ ಹಿನ್ನೀರಿನಲ್ಲಿ ಅಪಾಯಕಾರಿಯಾಗುವಷ್ಟು ಆಳ ಇಲ್ಲದಿರುವುರಿಂದ ಎಲ್ಲಾ ವಯೋಮಾನದವರು ಯಾವುದೇ ಭಯವಿಲ್ಲದೇ ಕಯಾಕಿಂಗ್ ಮಾಡಬಹುದಾಗಿದೆ. ಅಲ್ಲದೇ ಎಲ್ಲಾ ರೀತಿಯ ಸುರಕ್ಷಾ ಕ್ರಮಗಳು, ಲೈಫ್ ಜಾಕೆಟ್ ಗಳು ಹಾಗೂ ನುರಿತ ತರಬೇತುದಾರರು ಜೊತೆಯಲ್ಲಿಯೇ ಇರುವುದರಿಂದ, ಭಯವನ್ನು ಮರೆತು ಸಂಪೂರ್ಣವಾಗಿ ಕುಟುಂಬ ಸಮೇತ ಸಾಹಸ ಚಟುವಟಿಕೆಯ ಅನುಭವವನ್ನು ಆನಂದಿಸಬಹುದಾಗಿದೆ. ಪರಿಸರ ಪ್ರಿಯರು ಉತ್ತಮ ಪೋಟೋ ಮತ್ತು ವೀಡಿಯೋ ಚಿತ್ರೀಕರಣವನ್ನೂ ಕೂಡಾ ಮಾಡಿಕೊಳ್ಳಬಹುದು.

ಸಂಪರ್ಕ: ಮಿಥುನ್ ಕೋಡಿ: 72592 77799, ಲೋಕೇಶ್ : 98459 43030

Leave a Reply

Your email address will not be published. Required fields are marked *

1 × four =