ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮೊದಲ ಸಭೆ ಸೋಮವಾರ ನಡೆದಿದ್ದು ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ದೇವಳದ ಜಗದಾಂಬಿಕಾ ಸಭಾಭವನದಲ್ಲಿ ಚುನಾವಣೆ ಪ್ರಕ್ರೀಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಡಾ. ಅತುಲ್ ಕುಮಾರ್ ಶೆಟ್ಟಿ ಮತ್ತು ಚಂದ್ರಶೇಖರ ಶೆಟ್ಟಿ ಉಮೇದುದಾರರಾಗಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಚಂದ್ರಶೇಖರ ಶೆಟ್ಟಿ ಕೆರಾಡಿ ಅವರು 5 ಮತಗಳನ್ನು ಡಾ. ಅತುಲ್ ಕುಮಾರ್ ಶೆಟ್ಟಿ 4 ಮತಗಳನ್ನು ಪಡೆದರು.
ನೂತನ ಸಮಿತಿಯ ಸದಸ್ಯರಾದ ಪ್ರಧಾನ ಅರ್ಚಕರಾದ ಡಾ. ಕೆ. ರಾಮಚಂದ್ರ ಅಡಿಗ, ರತ್ನಾ ರಮೇಶ್ ಕುಂದರ್ ಕೊಲ್ಲೂರು, ಸಂಧ್ಯಾ ರಮೇಶ್ ಮಚ್ಚಟ್ಟು, ಗೋಪಾಲಕೃಷ್ಣ ಸೇನಾಪುರ, ಜಯಾನಂದ ಹೋಬಳಿದಾರ್ ಬೈಂದೂರು, ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ ಬೆಳ್ವೆ, ಡಾ. ಅತುಲ್‌ಕುಮಾರ್ ಶೆಟ್ಟಿ ಚಿತ್ತೂರು ಹಾಗೂ ಶೇಖರ ಪೂಜಾರಿ ಕಾರ್ಕಡ ನೇಮಕಗೊಂಡಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ ಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿ, ಈ ಜಾಗದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅತ್ಯಂತ ಸಂತೋಷವಾಗುತ್ತದೆ. ಇಲ್ಲಿ ಅಧ್ಯಕ್ಷರು, ಸದಸ್ಯರು ಎಂಬ ಯಾವುದೇ ಬೇಧವಿಲ್ಲದೆ ಕೆಲಸ ಮಾಡಬೇಕು. ಸ್ವಾರ್ಥವಿಲ್ಲದೆ ನಿಸ್ವಾರ್ಥತೆಯಿಂದ ಸೇವೆ ಮಾಡುವ ಅವಕಾಶ ನಮಗೆ ಲಬಿಸಿಸಡ.ಕೋಟಿ ಕೋಟಿ ಭಕ್ತಾಧಿಗಳ ಮನದ ಬಯಕೆಗಳನ್ನು ಮೂಕಾಂಬಿಕೆ ಈಡೇರಿಸಿದ್ದಾಳೆ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಕೊಲ್ಲೂರು ಕೇವಲ ಧಾರ್ಮಿಕತೆ ಮಾತ್ರವಲ್ಲದೇ ಶೈಕ್ಷಣಿಕವಾಗಿಯೂ ಗುರುತಿಸಿಕೊಂಡಿದೆ. ಕ್ಷೇತ್ರದ ಅಭಿವೃದ್ದಿ, ಶುಚಿತ್ವಕ್ಕೆ ಆದ್ಯತೆ ನೀಡುತ್ತಾ, ಹಿರಿಯರ, ಗ್ರಾಮಸ್ಥರ ಸಹಕಾರ ಮಾರ್ಗದರ್ಶನ ಪಡೆದುಕೊಳ್ಳುತ್ತಾ ಗರಿಷ್ಠ ಮಟ್ಟದಲ್ಲಿ ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತೇವೆ ಎಂದ ಅವರು, ನನ್ನನ್ನು ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಿದ ಸರ್ಕಾರಕ್ಕೂ, ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ವ್ಯವಸ್ಥಾಪನಾ ಸಮಿತಿ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ಕೆ.ರಾಜು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.


ವ್ಯವಸ್ಥಾನಪನಾ ಸಮಿತಿ ಸದಸ್ಯರು ನೇಮಕಗೊಂಡು 6 ತಿಂಗಳು ಕಳೆದರೂ ಧರ್ಮದರ್ಶಿಯ ಆಯ್ಕೆ ನಡೆದಿರಲಿಲ್ಲ. ಸದಸ್ಯರಾದ ಗಣೇಶ್ ಕಿಣಿ ಬೆಳ್ವೆ ಹಾಗೂ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ವಿಳಂಬ ಪ್ರಕ್ರಿಯೆಯಿಂದ ಬೇಸತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಸ್ಥಳೀಯ ಶಾಸಕರು ಹಾಗೂ ಸಂಘ ಪರಿವಾರವು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹುದ್ದೆಗೆ ಬೇರೆ ಬೇರೆ ವ್ಯಕ್ತಿಗಳನ್ನು ಸೂಚಿಸಿದ್ದರಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗಿತ್ತು. ಶಾಸಕರ ಕಡೆಯಿಂದ ಡಾ. ಅತುಲ್‌ಕುಮಾರ್ ಶೆಟ್ಟಿ ಚಿತ್ತೂರು ಬಲವಾಗಿ ಕೇಳಿಬಂದಿದ್ದರೇ, ಸಂಘ ಪರಿವಾರದ ಕಡೆಯಿಂದ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಜಯಾನಂದ ಹೋಬಳಿದಾರ ಬೈಂದೂರು ಅವರುಗಳ ಹೆಸರು ಕೇಳಿಬಂದಿತ್ತು. ಇಂದು ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಇಬ್ಬರು ಸದಸ್ಯರ ರಾಜಿನಾಮೆ ಅಂಗಿಕಾರವಾಗದ ಹಿನ್ನೆಲೆ ಎಲ್ಲಾ 9 ಮಂದಿ ಸದಸ್ಯರು ಹಾಜರಿದ್ದರು. ಅಂತಿಮವಾಗಿ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರೇ ಅಧ್ಯಕ್ಷ ಪದವಿಗೆ ಆಯ್ಕೆಯಾಗಿದ್ದಾರೆ.