ಕುಂದಾಪ್ರ ಡಾಟ್ ಕಾಂ ಸುದ್ದಿ.
ದುಬೈ: ಯು.ಎ.ಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಕೋರೋನ ಭೀತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಲ್ಲಿನ ಕೆಲವು ಕನ್ನಡಿಗರು ಆರೋಗ್ಯ, ಉದ್ಯೋಗ ಕಳೆದುಕೊಳ್ಳುವ ಆತಂಕ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರು ಕರ್ನಾಟಕಕ್ಕೆ ಮರಳಲು ಶೀಘ್ರ ವಿಮಾನಯಾನ ಸೇವೆ ಆರಂಭಿಸುವ ಕುರಿತು ರಾಜ್ಯ ಸರಕಾರ ಗಮನಹರಿಸುವಂತೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ – ಯುಎಇ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದೆ.
ಕೊಲ್ಲಿ ರಾಷ್ಟ್ರಗಳಲ್ಲಿರುವ ಕೆಲವು ಕನ್ನಡಿಗರು, ಪ್ರವಾಸಕ್ಕಾಗಿ ಬಂದಿರುವ ಹಿರಿಯರು, ಉದ್ಯೋಗ ಆರಿಸಿ ಬಂದವರು ಸೇರಿದಂತೆ ಹಲವರು, ವಿಮಾನಯಾನ ಸೇವೆ ಸ್ಥಗಿತಗೊಂಡಿರುವುದರಿಂದ ಭಾರತಕ್ಕೆ ಮರಳಲು ಸಾಧ್ಯವಾಗದೆ ಕೊರೋನಾ ಆತಂಕ ಎದುರಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕ್ವಾರಂಟೈನ್‌ಗೆ ಸಹಕಾರ ನೀಡುವ ಭರವಸೆ:
ಕರ್ನಾಕಕ್ಕೆ ಮರಳುವ ಅನಿವಾಸಿ ಕನ್ನಡಿಗರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ರಾಜ್ಯ ಸರಕಾರಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಅನಿವಾಸಿ ಉದ್ಯಮಿಗಳು, ಕನ್ನಡಪರ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಕನ್ನಡಪರ ಸಾಮಾಜಿಕ ಕಾರ್ಯಕರ್ತರು ಇವರೆಲ್ಲರೊಂದಿಗೆ ಕೆಎನ್‌ಆರ್‌ಐ – ಯುಎಇ ಪೋರಂ ಮೂಲಕ ಕೈಜೋಡಿಸಿ ಸಾಧ್ಯವಾಗುವ ಎಲ್ಲಾ ಸಹಕಾರ ಮಾಡುವುದಾಗಿ ಕೆಎನ್‌ಆರ್‌ಐ-ಯು.ಎ.ಇ ಇದರ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ಜಂಟಿಯಾಗಿ ಇಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.