ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬಾಲ್ಯದಲ್ಲಿ ಪ್ರಪಂಚ ಆಕರ್ಷಣಿಯವಾಗಿ ಕಾಣುತ್ತದೆ. ಅದರ ನಡುವೆ ಸವಾಲುಗಳನ್ನು ಎದುರಿಸಲು ಅಣಿಯಾಗದೇ ಕುಳಿತರೆ ಭವಿಷ್ಯ ಕಠಿಣವಾಗುತ್ತದೆ. ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಬೇಕು. ಆತ್ಮವಿಶ್ವಾಸ ಅಚಲವಾಗಿರಬೇಕು. ಹಾಗಿದ್ದಾಗಲೇ ಬದುಕು ಹಸನಾಗಲು ಸಾಧ್ಯ ಎಂದು ನಿಟ್ಟೂರಿನ ನಿವೃತ್ತ ಉಪನ್ಯಾಸಕ ಡಾ. ಶಾಂತಾರಾಮ ಪ್ರಭು ಹೇಳಿದರು.
ಅವರು ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಶ್ರೀ ಮುಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಇದರ 2019-20ನೇ ಸಾಲಿನ ವಿವಿಧ ಸಂಘಗಳ ಚಟುವಟಿಕೆಗಳ ಉದ್ಘಾಟನಾ ಹಾಗೂ ವಿದ್ಯಾರ್ಥಿಗಳ ಸಂಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಸಂಘವನ್ನು ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಮಾತನಾಡಿ ಮನುಷ್ಯ ವಿದ್ಯಾವಂತನಾದರೆ ಸಾಲದು. ವಿನಯ ಸಂಪನ್ನನೂ ಆಗಿರಬೇಕು. ವಿದ್ಯಾವಂತ ದುರಹಂಕಾರಿಯಾದರೆ ಕಲಿತ ವಿದ್ಯೆಗೂ ಬೆಲೆ ಸಿಗಲಾರದು ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಕೊಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ದೇವಳದ ಕಾರ್ಯನಿರ್ವಹಣಾಧಿಕಾರಿ ಎಚ್. ಹಾಲಪ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ನರಸಿಂಹ ಹಳಗೇರಿ, ರಮೇಶ್ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಎನ್ಎಸ್ಎಸ್ ಯೋಜನಾಧಿಕಾರಿ ಗೋಪಾಲಕೃಷ್ಣ ಜಿ. ಬಿ. ಉಪಸ್ಥಿತರಿದ್ದರು.
2019ಮಾರ್ಚ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದಲಿರುವ ದೇವಳದ ಕಾರ್ಯನಿರ್ವಹಣಾಧಿಕಾರಿ ಎಚ್. ಹಾಲಪ್ಪ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಎಸ್. ಅರುಣ್ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ನರಸಿಂಹ ಹಳಗೇರಿ ಪ್ರತಿಜ್ಞಾ ವಿಧಿ ಭೋಧಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪೂರ್ಣಾ ಎಸ್. ಭಟ್ ಹಾಗೂ ಅನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.