ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ದ ತೀರ್ಥಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಮನ್ಮಹಾರಥೋತ್ಸವ ಬುಧವಾರ ಸಡಗರ ಸಂಭ್ರಮದಿಂದ ಜರುಗಿತು.
ದೇವಳದ ತಂತ್ರಿ, ಪ್ರಧಾನ ಅರ್ಚಕ ಡಾ.ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರಬಲಿ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಮಧ್ಯಾಹ್ನ ದೇವಳದ ಭೋಜನಶಾಲೆಯಲ್ಲಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು.
ಕೊಲ್ಲೂರು ಕ್ಷೇತ್ರದ ಅಧಿದೇವತೆ ಹಾಗೂ ಗ್ರಾಮದೇವತೆ ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಮಾ.೦೮ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ಊರಿನ ಹತ್ತು ಸಮಸ್ತರು, ಭಕ್ತಾದಿಗಳು ಸೇರಿ ತಮ್ಮ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಗುರುವಾರ ರಾತ್ರಿ ದೇವರ ಅವಭ್ರತಸ್ನಾನ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ ಮಹಾಪೂರ್ಣಾಹುತಿ, ಧ್ವಜಾವರೋಹಣ, ಪೂರ್ಣಕುಂಭಾಭಿಷೇಕದ ನಂತರ ಅಂಕುರ ಪ್ರಸಾದ ವಿತರಿಸಲಾಗುತ್ತದೆ.
ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಮಾರ್ಗದರ್ಶನದಲ್ಲಿ ಅಪರ ಜಿಲ್ಲಾಧಿಕಾರಿ, ದೇವಳದ ಪ್ರಭಾರ ಕಾರ್ಯನಿರ್ವಹಣಾಕಾರಿ ವೀಣಾ ಬಿ. ಎನ್., ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರಾದ ಜಯಾನಂದ ಹೋಬಳಿದಾರ್, ಗಣೇಶ ಕಿಣಿ ಬೆಳ್ವೆ, ಡಾ. ಅತುಲ್‌ಕುಮಾರ್ ಶೆಟ್ಟಿ, ಕೆ. ಪಿ. ಶೇಖರ್, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ ಕುಂದರ್ ಉಸ್ತುವಾರಿ ವಹಿಸಿದ್ದರು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್, ಅರ್ಚಕವೃಂದ, ದೇವಳದ ಹಾಗೂ ಗ್ರಾಮ ಪಂಚಾಯತ್‌ನ ಸಿಬ್ಬಂದಿವರ್ಗ ಜಾತ್ರೆಯ ಯಶಸ್ಸಿಗೆ ಸಹಕರಿಸಿದ್ದರು. ಸಂಸದ ಬಿ. ವೈ. ರಾಘವೇಂದ್ರ, ಮಾಜಿ ಸಚಿವ ಕೆ. ಎಸ್. ಈಶ್ವಪ್ಪ, ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹಾಗೂ ವಿವಿಧ ಸ್ತರದ ಜನಪ್ರತಿನಿಧಿಗಳು ಉತ್ಸವದಲ್ಲಿ ಪಾಲ್ಗೊಂಡರು.
ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ ನೇತೃತ್ವದಲ್ಲಿ ಕೊಲ್ಲೂರು ಠಾಣಾಧಿಕಾರಿ ಈರಣ್ಣ ಶಿರಗುಂಪಿ ಮತ್ತು ಸುಧಾರಾಣಿ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದಾರಿಯುದ್ದಕ್ಕೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೇ ವಾರ್ಷಿಕ ಉತ್ಸವದ ಪ್ರಯುಕ್ತ ಕಳೆದ ರಾಜ್ಯ-ಹೊರರಾಜ್ಯದ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.