ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಹಟ್ಟಿಯಂಗಡಿ ಮೇಳ ಹಾಗೂ ಅತಿಥಿ ಕಲಾವಿದರಿಂದ ಮೊದಲ ಭಾರಿಗೆ ಶನಿವಾರ ರಾತ್ರಿ ೧೦ ಗಂಟೆಗೆ ’ಕೃಷ್ಣ ಸಂಧಾನ – ಮಂತ್ರ ಮಯೂರಿ’ ಯಕ್ಷಗಾನ ಪ್ರದರ್ಶನಗೊಳ್ಳಿದೆ. ಯಕ್ಷ ಸಿಂಧೂರದ ಸಾರಥ್ಯದಲ್ಲಿ ಒಂದೇ ರಾತ್ರಿ ಅವಳಿ ಆಖ್ಯಾನ ನಡೆಯಲಿದ್ದು ಯಕ್ಷಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
ಪೌರಾಣಿಕ ಮತ್ತು ಸಾಮಾಜಿಕ ಉಭಯ ಪ್ರೇಕ್ಷಕ ವರ್ಗಕ್ಕೂ ಒಂದೇ ದಿನ ಸವಿ ಉಣಬಡಿಸಲು ಯಕ್ಷಸಿಂಧೂರ ತಂಡ ಸಜ್ಜಾಗಿದೆ. ತೆಂಕುತಿಟ್ಟಿನ ಭಾರಿ ಬಿಸಿಯ ವಾಕ್ ವೈಖರಿಯ ಜೋಡಿ ಪೆರ್ಮದೆ ಜಯಪ್ರಕಾಶ್ ಶೆಟ್ಟರ ಕೌರವನಿಗೆ ರಂಗಾಭಟ್ಟರ ಕೃಷ್ಣ, ಇದು ಈಗಾಗಲೇ ಪ್ರೇಕ್ಷಕರಲ್ಲಿ ಚರ್ಚೆಯಾಗುತ್ತಿದೆ. ಇಬ್ಬರು ಅತ್ಯುತ್ತಮ ಕೂಟದ ಕಲಾವಿದರು ಆಟದಲ್ಲಿ ಅದೂ ಬಡಗಿನಲ್ಲಿ ಹಿಲ್ಲೂರು ಗಾನ ಸಾರಥ್ಯದಲ್ಲಿ ಹೇಗೆ ಸಂಧಾನ ಮಾತುಕತೆ ಮಾಡಲಿದ್ದಾರೆ ಎನ್ನುವುದಕ್ಕೆ ನೀವು ಸಾಕ್ಷಿಯಾಗಬೇಕು.
ಇನ್ನು ಊರಿನ ತಿರುಗಾಟದಲ್ಲಿ ಜನಮೆಚ್ಚುಗೆಯ ಪ್ರಸಂಗ ಮಂತ್ರ ಮಯೂರಿ . ಈಗ ಚಾಲ್ತಿಯಲ್ಲಿರುವ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಹಟ್ಟಿಯಂಗಡಿ ಮೇಳದ ಹಿಟ್ ಪ್ರಸಂಗವಿದು. ಅವಳಿ ರಂಗಸ್ಥಳದಲ್ಲಿ ಪ್ರದರ್ಶನಗೊಳ್ಳುವ ಈ ಪ್ರಸಂಗದ ಕಥಾಹಂದರ ಈಗಾಗಲೇ ಸದ್ದು ಮಾಡುತ್ತಿದೆ. ಐರಬೈಲ್ ಆನಂದ ಶೆಟ್ಟಿ, ಸುರೇಶ ಶೆಟ್ಟಿ, ಹೆನ್ನಾಬೈಲ್ ವಿಶ್ವನಾಥ, ಪ್ರಶಾಂತ ಗಾಣಿಗ, ನಿತೀನ್ ಶೆಟ್ಟಿ, ಭರತ್ ಪರ್ಕಳ, ಹಳ್ಳಾಡಿ ಜಯರಾಮ ಶೆಟ್ಟಿ, ಯಳಬೇರು ಶೇಖರ ಶೆಟ್ಟಿ, ದೇವಲ್ಕುಂದ, ಕಿರಾಡಿ, ರಾಜೇಶ್ ಬೈಕಾಡಿ, ಅಮಾಸ್ಬೈಲ್, ಇನ್ನಿತರರ ರಂಗವೈಭವದ ಆಟ ಕಾಣಬೇಕೆಂಬ ಕುತೂಹಲಕ್ಕೆ ಕಲಾಕ್ಷೇತ್ರವೇ ದಾರಿ.
ಸಂಪರ್ಕ:
ಪ್ರದೀಪ ಆಜ್ರಿ – 9880158466
ರಾಘು ನೈಕಂಬ್ಳಿ – 9686844833