ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ 44ನೇ ವಾರ್ಷಿಕ ಮಹಾಸಭೆಯು ಇಲ್ಲಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶುಕ್ರವಾರ ಜರುಗಿತು
ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 43 ವರ್ಷಗಳುದ್ದಕ್ಕೆ ಏರುಗತಿಯ ಪ್ರಗತಿಯನ್ನು ದಾಖಲಿಸುತ್ತ ಬಂದಿದೆ. ವರದಿ ವರ್ಷದಲ್ಲಿ ರೂ 635.32 ಕೋಟಿ ವ್ಯವಹಾರ ನಡೆಸಿ, ರೂ 3.45 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಸಂಘವು ವರ್ಷದಲ್ಲಿ ರೂ. 141 ಕೋಟಿ ಠೇವಣಿ ಸಂಗ್ರಹಿಸಿ, ರೂ. 126 ಕೋಟಿ ಸಾಲ ನೀಡಿದೆ. ವಿವಿಧ ಸಂಸ್ಥೆಗಳಲ್ಲಿ ರೂ. 62.19 ಕೋಟಿ ಹೂಡಿಕೆ ಮಾಡಿದೆ. ಸಂಘದ ಬಳಿ ರೂ. 24 ಕೋಟಿ ನಿಧಿ ಇದೆ. ಮುಂದಿನ ವರ್ಷ ವ್ಯವಹಾರವನ್ನು ರೂ. 700 ಕೋಟಿಗೇರಿಸುವ ಗುರಿ ಹೊಂದಲಾಗಿದೆ ಎಂದರು.
ಕೃಷಿ ಉತ್ತೇಜಕ ದಾಸ್ತಾನು ಮತ್ತು ಬಹೂಪಯೋಗಿ ಜನಾವಶ್ಯಕ ಸಾಮಗ್ರಿಗಳ ಮಾರಾಟ ಮಳಿಗೆ:
ಕೆರ್ಗಾಲಿನ ಹೆದ್ದಾರಿ ಅಂಚಿನಲ್ಲಿ ಕೃಷಿ ಉತ್ತೇಜಕ ದಾಸ್ತಾನು ಮತ್ತು ಬಹೂಪಯೋಗಿ ಜನಾವಶ್ಯಕ ಸಾಮಗ್ರಿಗಳ ಮಾರಾಟ ಮಳಿಗೆ ಮತ್ತು ಸೇವಾಕೇಂದ್ರವನ್ನು ರೂ. 7.6ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಕರಾವಳಿ ಭಾಗದಲ್ಲಿ ಸಹಕಾರಿ ಸಂಸ್ಥೆಗೆ ಸೇರಿದ ಮೊದಲಿನದೆನಿಸಲಿರುವ ಸಂಘದ ಬಹುಮಹಡಿ ಸರ್ವ ಸರಕಿನ ಮಳಿಗೆ ಹಾಗೂ ಸೇವಾ ಕೇಂದ್ರಕ್ಕೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಯಡಿ ನಬಾರ್ಡ್ ರೂ. 5.6 ಕೋಟಿ ಮಂಜೂರು ಮಾಡಿದೆ. ಈ ಮಳಿಗೆಯಲ್ಲಿ ರೂ. 5 ಕೋಟಿ ಬಂಡವಾಳ ವಿನಿಯೋಗಿಸಿ ಮಾರುಕಟ್ಟೆ ಸೌಲಭ್ಯ ಸೃಜಿಸಲಾಗುವುದು. ಹಲವರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಈಶ್ವರ, ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಕೆ. ಮೋಹನ ಪೂಜಾರಿ, ಬಿ. ಎಸ್. ಸುರೇಶ ಶೆಟ್ಟಿ, ಗುರುರಾಜ್ ಹೆಬ್ಬಾರ್, ವೀರೇಂದ್ರ ಶೆಟ್ಟಿ, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ, ಹೂವ ನಾಯ್ಕ್, ದಿನಿತಾ ಶೆಟ್ಟಿ, ಜಲಜಾಕ್ಷಿ ಪೂಜಾರಿ, ಜಿಲ್ಲಾ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ, ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸ್ವಾಗತಿಸಿ, ಹಿರಿಯ ಪ್ರಬಂಧಕ ಚಂದಯ್ಯ ಶೆಟ್ಟಿ ವಂದಿಸಿದರು.
ಇದನ್ನೂ ಓದಿ:
► ಖಂಬದಕೋಣೆ ರೈ. ಸೇ. ಸ. ಸಂಘದ ಆಶ್ರಯದಲ್ಲಿ ರೈತ ದಿನಾಚರಣೆ – https://kundapraa.com/?p=43589 .