ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಕಿರಿಮಂಜೇಶ್ವರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಸಂಘದ ವತಿಯಿಂದ ವೈದ್ಯಕೀಯ ಕಿಟ್ ಹಾಗೂ ಸಲಕರಣೆಗಳನ್ನು ದೇಣಿಗೆಯಾಗಿ ನೀಡಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ ಎಲ್ಲೆಡೆ ಕೋವಿಡ್ ವ್ಯಾಪವಾಗಿ ಹರಡುತ್ತಿದ್ದು, ಆರೋಗ್ಯ ಸಿಬ್ಬಂದಿಗಳು ಶ್ರಮವಹಿಸಿ ದುಡಿಯುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭ ನಮ್ಮ ಸಂಘದಿಂದ ಕಳೆದ ವರ್ಷ 2.35 ಲಕ್ಷ ರೂ.ಗಳ ವೈದ್ಯಕೀಯ ಸಲಕರಣೆಗಳನ್ನು ವಿತರಿಸಲಾಗಿದ್ದು, ಈ ವರ್ಷವೂ ಕೂಡ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಪಿಪಿಇ ಕಿಟ್, ವೈದ್ಯರಿಗೆ ಗ್ಲೌಸ್, ಮಾಸ್ಕ್, ಗೌನ್ ಮೊದಲಾದ ಉಪಕರಣಗಳನ್ನು ವಿತರಿಸಲಾಗಿದೆ. ಆರೋಗ್ಯ ಕೇಂದ್ರದ ಸಿಬ್ಬಂದಿಯ ಸಂಚಾರಕ್ಕೆ ಅನುಕೂಲವಾಗುವಂತೆ ಕೋವಿಡ್ ಅಲೆ ತಗ್ಗುವ ತನಕ ಸಂಘದ ವತಿಯಿಂದ ವಾರದಲ್ಲಿ ನಾಲ್ಕು ದಿನಗಳ ಕಾಲ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಿರಿಮಂಜೇಶ್ವರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ನಿಶಾ ರೆಬೆಲ್ಲೋ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ, ಹಿರಿಯ ವ್ಯವಸ್ಥಾಪಕ ಚಂದ್ರಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.