ಖಂಬದಕೋಣೆ ರೈ.ಸೇ.ಸ.ಸಂ ಚುನಾವಣೆ: ಪ್ರಕಾಶ್ಚಂದ್ರ ಶೆಟ್ಟಿ ನೇತೃತ್ವದ ತಂಡಕ್ಕೆ ಗೆಲುವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ನೇತೃತ್ವದ ತಂಡಕ್ಕೆ ಜಯ ದೊರಕಿದ್ದು, ಈ ಹಿಂದಿನ ಆಡಳಿತ ಮಂಡಳಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

ಪ್ರಕಾಶ್ಚಂದ್ರ ಶೆಟ್ಟಿ, ಬಿ. ರಘುರಾಮಶೆಟ್ಟಿ, ಬಿ. ಎಸ್. ಸುರೇಶ್ ಶೆಟ್ಟಿ, ಗುರುರಾಜ್ ಹೆಬ್ಬಾರ್, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ ಹಾಗೂ ಮೋಹನ ಪೂಜಾರಿ ಚುನಾವಣೆಯಲ್ಲಿ ಜಯಗಳಿಸಿ ನೂತನ ಆಡಳಿ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 2200 ಮತಗಳಿದ್ದು, ಅದರಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ 1920 ಮತಗಳು ಚಲಾವಣೆಗೊಂಡು ಶೇ.92 ಮತದಾನವಾಗಿತ್ತು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಒಟ್ಟು 13 ಸದಸ್ಯರ ನಿರ್ದೇಶಕ ಮಂಡಳಿ ಇದ್ದು ಹಿಂದಿನಿಂದಲೂ ಇಲ್ಲಿ ಚುನಾವಣೆ ನಡೆದಿರಲಿಲ್ಲ. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಇವರ ನೇತೃತ್ವದ ತಂಡಕ್ಕೆ ಈ ಬಾರಿಯ ಚುನಾವಣೆ ಸವಾಲಾಗಿ ಪರಿಣಮಿಸಿತ್ತು. ಆದರೆ ರಾಜಕೀಯ ಕಸರತ್ತಿನ ಬಳಿಕ ಮೀಸಲು ಕ್ಷೇತ್ರಗಳಲ್ಲಿ ಬಹುತೇಕ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಸಲಾಯಿತಾದರೂ ಪ್ರವರ್ಗ ಬಿ ಮತ್ತು ಸಾಮಾನ್ಯ ಕ್ಷೇತ್ರದಲ್ಲಿ ಚುನಾವಣೆ ಅನಿವಾರ್ಯವಾಗಿತ್ತು. ಸಾಮಾನ್ಯ ಕ್ಷೇತ್ರದಿಂದ 7 ಸ್ಥಾನಗಳು ಮತ್ತು ಪ್ರವರ್ಗ ಬಿ ದಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆದಿದ್ದು ಭಾನುವಾರ ಚುನಾವಣೆಯಲ್ಲಿ ಹಳೆಯ ನಿರ್ದೇಶಕ ಮಂಡಳಿ ನೇತೃತ್ವದ ತಂಡ ಜಯಭೇರಿ ಭಾರಿಸಿದೆ.

                                                                  ವಿಜೇತರಿಗೆ ಅಭಿಮಾನಿಗಳು ಹಾಗೂ ಹಿತೈಶಿಗಳು ಅಭಿನಂದಿಸುತ್ತಿರುವುದು

 

Leave a Reply

Your email address will not be published. Required fields are marked *

four + 11 =