ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಅಭಿವೃದ್ದಿಗೆ 20 ಕೋಟಿ ರೂ. ಅನುದಾನ ಮಂಜೂರಾಗಿದೆ.
ಮಹತ್ವಾಕಾಂಕ್ಷೆಯ ಯೋಜನೆ:
2006-07ನೇ ಸಾಲಿನಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ ಸಾಕಾರಗೊಂಡ ಈ ಮಹತ್ವಾಕಾಂಕ್ಷೆಯ ಯೋಜನೆ ನಿರ್ವಹಣೆ ಇಲ್ಲದೆ ಸೊರಗುತ್ತಿತ್ತು. ಆರಂಭದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಿಂಗ್‌ರೋಡ್ ಆನಂತರ ದಿನಗಳಲ್ಲಿ ನಿರ್ವಹಣೆ ಕಾಣದೆ ವರ್ಷಗಳೇ ಸಂದುಹೋಗಿವೆ. ಪೂರ್ಣ ಪ್ರಮಾಣದಲ್ಲಿ ರಿಂಗ್‌ರೋಡ್ ನಿರ್ಮಾಣದ ಅವಶ್ಯವನ್ನು ಶಾಸಕರು ಮನಗಂಡಿದ್ದರು. ಆದರೆ ನಾನಾ ಕಾರಣಗಳಿಂದ ಅನೇಕ ಬಾರಿ ಪ್ರಸ್ತಾವ ಸಲ್ಲಿಸಿದ್ದರೂ ಮಂಜೂರಾತಿ ವಿಳಂಬವಾಗುತ್ತಿತ್ತು. ಕುಂದಾಪುರದ ಸಂಗಮ್‌ನಿಂದ ಮೊದಲ್ಗೊಂಡು ಪಂಚಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್ ರೋಡ್ ಚರ್ಚ್ ರಸ್ತೆಯನ್ನು ಸಂಧಿಸುತ್ತದೆ.
ಸಂಚಾರ ದಟ್ಟಣ ತಗ್ಗಲಿದೆ:
ರಿಂಗ್‌ರೋಡ್ ನಿರ್ಮಾಣವಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಗರದೊಳಗೆ ಪ್ರವೇಶ ಪಡೆಯದೇ ಕೋಡಿ ಮೊದಲಾದ ಭಾಗಗಳಿಗೆ ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್ ರೋಡ್ ಮೂಲಕ ಹೋಗಲು ಸಾಧ್ಯವಿದೆ.
ರಿಂಗ್ ರೋಡ್ ಸಾಕಾರಗೊಂಡು 15 ವರ್ಷ ಸಂದರೂ ಇನ್ನು ಪೂರ್ಣಪ್ರಮಾಣದಲ್ಲಿ ಡಾಮರು ಕಾಮಗಾರಿ ನಡೆದಿರಲಿಲ್ಲ. ಹಲವೆಡೆ ನದಿ ದಂಡೆಗೆ ರಿಂಗ್ ರೋಡ್‌ಗೆಂದು ಕಟ್ಟಿದ ರಿವಿಟ್‌ಮೆಂಟ್ ಕುಸಿದಿದೆ. ಮಳೆಯ ಅಬ್ಬರಕ್ಕೆ ರಿಂಗ್‌ರೋಡ್‌ನಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿ ವಾಹನ ಓಡಾಟ ದುಸ್ತರವೆನಿಸಿದೆ. ಸಂಜೆ ವಿಹಾರಿಗಳು, ಪ್ರವಾಸಿಗರನ್ನು ಬರ ಸೆಳೆಯುವ ರಿಂಗ್ ರೋಡ್‌ನ ಉದ್ದಕ್ಕೂ ಕೊಳಚೆ ಕಣ್ಣಿಗೆ ಕಟ್ಟುತ್ತಿದೆ. ಸ್ಥಳೀಯಾಡಳಿತ ರಿಂಗ್‌ರೋಡ್ ನಿರ್ವಹಣೆಗೆ ಅನುದಾನ ತರುವಲ್ಲಿ ಸೋತಿದೆ ಎಂಬ ಆರೋಪ ಕೇಳಿಬಂದಿದೆ.
ಮೀನುಗಾರಿಕೆ ವಲಯ ಎಂದು ಗುರುತಿಸಿಕೊಂಡಿರುವ ಖಾರ್ವಿಕೇರಿ ಪಂಚಗಂಗಾವಳಿ, ಮದ್ದುಗುಡ್ಡೆ ಪ್ರದೇಶದಲ್ಲಿ ರಿಂಗ್ ರೋಡ್ ಹಾದು ಹೋಗಿದೆ ಈ ಎರಡು ಪ್ರದೇಶಗಳು ಅಂತ್ಯಂತ ಜನಸಂದಣಿಯಿಂದ ಕೂಡಿವೆ. ಸಹಸ್ರಾರು ಮನೆಗಳು ಇಲ್ಲಿವೆ. ಮುಖ್ಯವಾಗಿ ನದಿಪಾತ್ರದ ಇಲ್ಲಿಯ ಜನರು ಹೆಚ್ಚಾಗಿ ಮೀನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನದಿ ಪಾತ್ರದ ಜನರ ಸಂಪರ್ಕಕ್ಕೆ ಹಾದಿ ಇದಾಗಿದ್ದರೂ ಅಭಿವೃದ್ದಿ ನನೆಗುದಿಗೆ ಬಿದ್ದ ಬಗ್ಗೆ ಆಕ್ರೋಶ ಇತ್ತು.
ಸ್ಥಳೀಯರ ಅನೇಕ ವರ್ಷಗಳ ಬೇಡಿಕೆಯಾಗಿದ್ದ ರಿಂಗ್ ರೋಡ್ ಕಾಮಗಾರಿಯನ್ನು 20 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿ ಅವರು ಅನುಮೋದಿಸಿದ್ದಾರೆ. ಈ ಬಗ್ಗೆ ಆಡಳಿತ ಇಲಾಖೆಗೆ ತಿಳಿಸಲಾಗಿದೆ. ಇನ್ನು ಟೆಂಡರ್ ಪ್ರಕ್ರಿಯೆ ನಡೆಯುವುದು ಬಾಕಿ ಇದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.