ಕುಂದಾಪುರ: ಲಾಠಿ ಹಿಡಿದು ಫೀಲ್ಡಿಗಿಳಿದ ಎಸಿ. ಯುವಕನ ಮೇಲೆ ಕೇಸ್ ದಾಖಲು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್‌ನ ಮೂರನೇ ದಿನವಾದ ಗುರುವಾರ ಕುಂದಾಪುರ ಪೇಟೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಕುಂದಾಪುರದ ಸಹಾಯಕ ಕಮೀಷನರ್(ಎಸಿ) ಕೂಡ ಇದಕ್ಕೆ ಸಾಥ್ ನೀಡಿದರು.

ಕುಂದಾಪುರ ಎಸಿ ಕೆ. ರಾಜು ಅವರು ಒಂದೆಡೆ ರಸ್ತೆಯಲ್ಲಿ ಅಲೆಯುತ್ತಿದ್ದ ಯುವಕರಿಗೆ ಲಾಠಿ ರುಚಿ ತೋರಿಸಿದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಅಂಗಡಿಗಳಿಗೆ ತೆರಳಿ ಹೆಚ್ಚಿನ ದರ ವಿಧಿಸದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ನಿಯಮ ಪಾಲಿಸದಿದ ಬಗ್ಗೆ ದೂರು ಬಂದರೆ ಅಂಗಡಿ ಮುಚ್ಚಿಸುವ ಜೊತೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಸಿದರು. ಮೆಡಿಕಲ್ ಸ್ಟೋರ್, ಜನ ಔಷಧಿ ಕೇಂದ್ರಗಳಿಗೆ ತೆರಳಿ ಸರಿತಿಯಲ್ಲಿ ನಿಲ್ಲುವಂತೆ ಸೂಚಿಸಿ ಒಬ್ಬರಿಂದ ಒಬ್ಬರಿಗೆ ಅಂತರ ಕಾಪಾಡುವಂತೆ ಸೂಚಿಸಿ, ರಸ್ತೆ ಬದಿಯಲ್ಲಿ ಅನಾವಶ್ಯಕ ನಿಂತ ವಾನಗಳ ತೆರವು ಮಾಡಿದರು. ನಂತರ ಶಾಸ್ತ್ರಿ ವೃತ್ತದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ನಿಲ್ಲುವ ಮೂಲಕ ಅನಾವಶ್ಯಕವಾಗಿ ಬರುವ ವಾನಗಳ ಚಾಲಕರಿಗೆ ಯಾಕೆ ಸುಖಾಸುಮ್ಮನೆ ಬರುತ್ತೀರಾ ಮನೆಯಲ್ಲಿ ಇರೋದಕ್ಕೆ ಏನು ಅಡ್ಡಿ ಎಂದು ತರಾಟೆಗೆ ತೆಗೆದುಕೊಂಡರು.

ಯುವಕನ ವಿರುದ್ಧ ಕೇಸ್ ದಾಖಲು:
ಬೈಕ್ ಸವಾರನೂಬ್ಬ ಮೆಡಿಕಲ್‌ಗೆ ತೆರಳುವ ಸಂದರ್ಭ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡು ಹೋಗಿದ್ದು, ಪೊಲೀಸರ ವಿರುದ್ದ ದೂರು ದಾಖಲು ಮಾಡಲು ಪೊಲೀಸ್ ಠಾಣೆಗೂ ತೆರಳಿದ್ದ. ಅಲ್ಲಿ ಬುದ್ದಿ ಹೇಳಿ ಕಳುಹಿಸಿದ್ದರಿಂದ ವಾಪಸ್ಸು ಬರುವ ಸಂದರ್ಭ ಸ್ಥಳದಲ್ಲಿ ಸಹಾಯಕ ಕಮೀಷನರ್ ಕೆ.ರಾಜು ಹಾಗೂ ಠಾಣಾಧಿಕಾರಿ ಹರೀಶ್ ಆರ್.ನಾಯ್ಕ್ ಜೊತೆ ಮತ್ತೆ ವಾಗ್ವಾದಕ್ಕೆ ಇಳಿದ. ಎಸಿ ಪೊಲೀಸರ ಎದುರೇ ಡಿಸಿಗೆ ಕಾಲ್ ಮಾಡುತ್ತೇನೆ ಅಂತ ಮೊಬೈಲ್ ತೆಗೆದ. ಸ್ಥಳದಲ್ಲೆ ಇರುವ ಸಹಾಯಕ ಕಮೀಷನರ್ ಕೇಸ್ ದಾಖಲು ಮಾಡಿ ಒಳಗೆ ತಳ್ಳಿ ಎಂದಾಗ ಕೂಡಲೇ ಕುಂದಾಪುರ ಠಾಣಾಧಿಖಾರಿ ಹರೀಶ್ ಆರ್. ನಾಯ್ಕ್ ಯುವಕನ ಬಂಧಿಸಿ ದೂರು ದಾಖಲಿಸಿಕೊಂಡರು. ಬಂಧಿತ ವಿಶ್ವನಾಥ ಶೇರುಗಾರ ಎಂಬ ಯುವಕ ಉಪ್ಪಿನಕುದ್ರು ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ. ರಜೆ ಇದ್ದುದರಿಂದ ಊರಿಗೆ ಬಂದಿದ್ದು ಈಗ ಕಂಬಿ ಎಣಿಸುವಂತಾಗಿದೆ.

ನಗರದ ಸ್ವಚ್ಛತೆಯಲ್ಲಿ ನಿರತರಾದ ಪೌರ ಕಾರ್ಮಿಕರು:
ಲಾಕ್‌ಡೌನ್ ಘೋಷಣೆ, ಪೊಲೀಸ್ ಲಾಠಿ ಏಟು, ಹತ್ತಾರು ಸಂಗತಿಗಳ ನಡುವೆಯೂ ಪೌರ ಕಾರ್ಮಿಕರು ತಮ್ಮ ಪಾಡಿಗೆ ತಾವು ಸ್ಚಚ್ಛತೆ ಕಾಪಾಡುವ ಕೆಲಸ ಮಾಡುತ್ತಿರುವುದು ಪ್ರಶಂಸೆಗೆ ಪಾತ್ರವಾಯಿತು. ಕುಂದಾಪುರ ಪೇಟೆ ಉದ್ದಗಲಕ್ಕೂ ಮಳೆಗಾಲದ ಹಿನ್ನೆಲೆಯಲ್ಲಿ ಒಳಚರಂಡಿ ಹೂಳೆತ್ತುವಿಕೆ, ಸ್ಚಚ್ಛತೆಯಲ್ಲಿ ಪೌರ ಕಾರ್ಮಿಕರು ತಲ್ಲೀನರಾಗಿದ್ದರು.

 

Leave a Reply

Your email address will not be published. Required fields are marked *

one × three =