ಕುಂದಾಪುರ ಹೆದ್ದಾರಿ ಅವ್ಯವಸ್ಥೆ: ಸ್ಥಳಕ್ಕೆ ಜಿಲ್ಲಾಧಿಕಾರಿ, ಪ್ರಾಧಿಕಾರ ಅಧಿಕಾರಿಗಳ ಭೇಟಿಗೆ ಅಗ್ರಹಿಸಿದ ಹೋರಾಟ ಸಮಿತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2010ರಲ್ಲಿ ಹೆದ್ದಾರಿ ವಿಸ್ತರಣೆ ಆರಂಭವಾಗಿದ್ದು, 910 ದಿನದಲ್ಲಿ ಮುಗಿಯಬೇಕಿದ್ದ ಕಾಮಗಾರಿ ಒಂದು ದಶಕ ಕಳೆದರೂ ಪೂರ್ಣವಾಗಿಲ್ಲ. ಸದ್ಯ ತರಾತುರಿಯಲ್ಲಿ ಪ್ಲೈಓವರ್, ಅಂಡರ್‌ಪಾಸ್ ಕಾಮಗಾರಿ ಮುಗಿಸಿ ಗುತ್ತಿಗೆದಾರರು ಕಾಲು ಕೀಳಲಿದ್ದು, ಕುಂದಾಪುರದ ನಾಗರಿಕರು ಎಚ್ಚೆತ್ತುಕೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿ ಖಾಯಂ ಸಮಸ್ಯೆಯ ಆಗರವಾಗಲಿದೆ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಎಚ್ಚರಿಸಿದ್ದಾರೆ.

ಇಲ್ಲಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಕುಂದಾಪುರ ಹೆದ್ದಾರಿ ಹೋರಾಟ ಸಮಿತಿ ಆಯೋಜಿಸಿದ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕಾಗಿ ಹತ್ಕೊತ್ತಾಯ ಸಭೆಯಲ್ಲಿ ಮಾತನಾಡಿ, ಕುಂದಾಪುರದ ನಗರ ಭಾಗದಲ್ಲಿ ಹೆದ್ದಾರಿ ಸಂಚಾರ ಗೊಂದಲದ ಗೂಡಾಗಿದೆ. ಪ್ಲೈಓವರ್‌ನ ಹೊಸ ರಸ್ತೆ ಸಂಚಾರ ಅಪಾಯದ ಮುನ್ಸೂಚನೆ ನೀಡುತ್ತಿದೆ. ಮಳೆಗಾಲದಲ್ಲಿ ಮಳೆನೀರು ಹರಿಯಲು ಸುಗಮ ಮಾರ್ಗವಿಲ್ಲ. ಪಾದಾಚಾರಿ ಮಾರ್ಗವೂ ಅವ್ಯವಸ್ಥಿತ. ಇವೆಲ್ಲದಕ್ಕೂ ಗುತ್ತಿಗೆ ಕಂಪೆನಿ ಕಾಮಗಾರಿ ಮುಗಿಸಿ ಹೊರಡುವ ಮೊದಲು ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಶೆಟ್ಟಿ ಮಾತನಾಡಿ, ಹೆದ್ದಾರಿ ವಿಸ್ತರಣೆ ಗುತ್ತಿಗೆದಾರರು ರಸ್ತೆ ಅಭಿವೃದ್ಧಿ ಶೇ.80ರಷ್ಟು ಆಗಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದೆ. 69 ಕಿಮೀ ಸರ್ವೀಸ್ ರಸ್ತೆ, 39 ಕಡೆ ಬಸ್ ನಿಲ್ದಾಣ ಆಗಬೇಕಿದ್ದು, ಕಾಮಗಾರಿ ಇನ್ನು ಬಾಕಿಯಿದೆ ಎಂದು ಹೇಳಿದರು.

ಹಕ್ಕೊತ್ತಾಯ:
ಸಭೆಯಲ್ಲಿ ಸೇರಿದ್ದ ಕುಂದಾಪುರದ ನಾಗರಿಕರ ಅಭಿಪ್ರಾಯವನ್ನು ಕೊನೆಯಲ್ಲಿ ಕ್ರೋಢೀಕರಿಸಿ ಸಮಸ್ಯೆ ಪರಿಹಾರಕ್ಕಾಗಿ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸುವುದು ಮತ್ತು ಅವರನ್ನೇ ಹೊಣೆಗಾರರನ್ನಾಗಿಸುವುದಕ್ಕೆ ತೀರ್ಮಾನಿಸಲಾಯಿತು. ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಅರಿಯಲು ಸ್ವತಃ ಜಿಲ್ಲಾಧಿಕಾರಿಗಳು ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಗಳು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಜೊತೆಗೆ ಶಾಶ್ವತ ಪರಿಹಾರಕ್ಕೆ ಸೂಚಿಸಬೇಕು. ಕುಂದಾಪುರದ ಸಂಗಮ್‌ನಿಂದ ವಿನಾಯಕದ ತನಕ ಹೆದ್ದಾರಿ, ಸರ್ವಿಸ್ ರಸ್ತೆ, ಶಾಸ್ತ್ರೀ ವೃತ್ತ, ಬಸ್ರೂರು ಮೂರುಕೈ ಹಾಗೂ ಎಲ್ಲಾ ರಸ್ತೆಗಳಿಗೆ ಸಂಬಂಧಿಸಿದ ನಾಗರಿಕರಲ್ಲಿರುವ ಗೊಂದಲಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಈ ಬಗ್ಗೆ ಸೋಮವಾರ ಉಪವಿಭಾಗಾಧಿಕಾರಿಗಳಿಗೆ ಮತ್ತೆ ಮನವಿ ನೀಡಿ ತಕ್ಷಣ ಕಾರ್ಯಪ್ರವೃತ್ತರಾಗಲು ತಿಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಉದ್ಯಮಿ ಮಾಧವ ಪೈ, ಸುದೀಪ್ ಪೂಜಾರಿ, ಜಯಾನಂದ ಖಾರ್ವಿ, ವಕೀಲ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಶ್ರೀಪತಿ ಆಚಾರ್ಯ, ರಾಜೇಶ್ ಕಾವೇರಿ, ಗಿರೀಶ್ ಜಿ.ಕೆ., ವಿಕಾಸ್ ಹೆಗ್ಡೆ, ಮಹೇಶ್ ಶೆಣೈ, ವೆಂಕಟೇಶ್ ಮುಂತಾದವರು ಮಾತನಾಡಿ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆ ವಿರುದ್ಧ ಹೋರಾಟ ಇನ್ನಷ್ಟು ಗಟ್ಟಿಯಾಗಬೇಕು ಎಂದು ಸಲಹೆ ನೀಡಿದರು.

ಸಾಸ್ತಾನ ಟೋಲ್‌ಗೇಟ್ ಹೋರಾಟ ಸಮಿತಿ ಪ್ರತಾಪ್ ಶೆಟ್ಟಿ, ರೈಲ್ವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಕಾರ‍್ಯದರ್ಶಿ ವಿವೇಕ್ ಶ್ಯಾನುಭಾಗ್ ಇದ್ದರು. ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಸ್ವಾಗತಿಸಿ, ನಿರೂಪಿಸಿದರು.
Leave a Reply

Your email address will not be published. Required fields are marked *

fifteen − twelve =