ತಾ.ಪಂ ಸಾಮಾನ್ಯ ಸಭೆ: ‘ಗಣಿ ದಾಳಿ ಮಾಡ್ವತಿಗೆ ಹೇಳಿ ಮಾಡಿನಿ’ ಎಂದ ಸದಸ್ಯೆ!

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ನ.26: ಕುಂದಾಪುರ ತಾಲೂಕು ಪಂಚಾಯತಿಯ ಡಾ. ವಿಎಸ್ ಆಚಾರ್‍ಯ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಸದಸ್ಯರ ಜಟಾಪಟಿ, ಅಧಿಕಾರಿಗಳಿಗೆ ತರಾಟೆ ಮೊದಲಾದವುಗಳಿಗೆ ಸಾಕ್ಷಿಯಾಯಿತು.

Call us

Call us

Visit Now

ಆಲೂರಿನಲ್ಲಿ ನಡೆಯುತ್ತಿರುವ ಕೆಂಪುಕಲ್ಲು ಗಣಿ ನಿಂತ ಬಗ್ಗೆ ಸದಸ್ಯೆ ಇಂದಿರಾ ಶೆಟ್ಟಿ ಮಾತನಾಡಿ ಆಲೂರು ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕೆಂಪುಕಲ್ಲು ಗಣಿ ನಡೆಸಲು ಅವಕಾಶ ಮಾಡಿಕೊಡಬೇಕು. ಕಲ್ಲು ಕ್ವಾರಿ ನಿಂತಿದ್ದರಿಂದ ಬಡವರಿಗೆ ಕೆಲಸ ಇಲ್ಲದಂತಾಗಿದೆ. ಕಲ್ಲುಕ್ವಾರಿ ನಿಯಮಗಳನ್ನು ಸರಳಿಕರಿಸಿ ಕೆಂಪುಕಲ್ಲು ಗಣಿಗೆ ಮತ್ತೆ ಅವಕಾಶ ಮಾಡಿಕೊಡಬೇಕು. ಹಿಂದೆಲ್ಲಾ ದಾಳಿ ಮಾಡುವಾಗ ಮಾಹಿತಿ ಕೊಟ್ಟು ಅಧಿಕಾರಿಗಳು ದಾಳಿ ನಡೆಸುತ್ತಿದ್ದರು. ಈ ಭಾರಿ ಮಾಹಿತಿ ನೀಡದೇ ದಾಳಿ ನಡೆಸಿದ್ದು ಏಕೆ ಎಂದು ಪ್ರಶ್ನಿಸಿದ್ದು ಗಣಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನು ತೆರೆದಿಟ್ಟಿತು.

Click here

Call us

Call us

ಇದಕ್ಕೆ ಉತ್ತರಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂವಿಜ್ಞಾನಿ ಮಹೇಶ್ ಜಿಲ್ಲೆಯಲ್ಲಿ ಒಂದು ಕೆಂಪುಕಲ್ಲು ಗಣಿ ಹೊರತುಪಡಿಸಿ ಉಳಿದೆಲ್ಲ ಗಣಿಗಾರಿಕೆಯೂ ಅಕ್ರಮವಾಗಿ ನಡೆಯುತ್ತಿದೆ. ಗಣಿ ನಡೆಸುವವರಿಗೆ ಪರವಾನಿಗೆ ಪಡೆಯುವಂತೆ ಸೂಚಿಸಿದ್ದು ಎಲ್ಲರೂ ಅರ್ಜಿ ನೀಡಿದ್ದಾರೆ ಯಾರೂ ಹಣ ಪಾವತಿಸಿಲ್ಲ. ಕೃಷಿ ಉದ್ದೇಶಕ್ಕಾಗಿ ಗಣಿ ಪ್ರದೇಶಕ್ಕೆ ತಹಶೀಲ್ದಾರ್ ಎನ್‌ಓಸಿ ನೀಡಿದರೆ ಪರವಾನಿಗೆ ನೀಡುತ್ತೇವೆ. ನಾವು ಯಾರಿಗೂ ಮಾಹಿತಿ ನೀಡಬೇಕಾದ ಅವಶ್ಯಕತೆ ಇಲ್ಲ. ಅಕ್ರಮ ನಡೆದಲ್ಲಿ ದಾಳಿ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ವಿಜಯವಾಣಿ ಪತ್ರಿಕೆಯಲ್ಲಿ ಎರಡು ಭಾರಿ ವರದಿ ಬಂದಾಗಲೂ ದಾಳಿ ನಡೆಸಿ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ. ಈ ಭಾರಿ ಕೂಡ ೧೧ ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಿದ್ದೇವೆ.

ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಸಮಸ್ಯೆ ಬಗ್ಗೆ ಗಮನ ಸೆಳೆದ ಮಹೇಂದ್ರ ಪೂಜಾರಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ವಿಶೇಷ ವೇತನ ರೂ. 44,800 ಡ್ರಾ ಮಾಡಿದ್ದಾರೆ. ಆದರೆ ಅವರು ವಿಶೇಷ ಭತ್ಯೆ ರೂ. 23,000 ಅಷ್ಟೇ ಪಡೆಯಲು ಅರ್ಹರಾಗಿರುತ್ತಾರೆ. ವಿಶೇಷ ಭತ್ಯೆ ಹೆಚ್ಚುವರಿಯಾಗಿ ಪಡೆದುರುವುದು ಕಣ್ತಪ್ಪಿನಿಂದಾದ ಪ್ರಮಾದ ಎಂದು ಲೇಖಪಾಲಕರು ಮಾಹಿತಿ ನೀಡಿದ್ದಾರೆ. ಈ ಪ್ರಮಾದ ಆಗಿದ್ದು ಯಾರಿಂದ ಎಂಬುದು ಸ್ಪಷ್ಟತೆ ಇಲ್ಲ. ಹೆಚ್ಚುವರಿಯಾಗಿ ಪಡೆದ ವೇತನ ಸರಕಾರಕ್ಕೆ ಮರುಪಾವತಿಸಲು ಸೂಚಿಸಿದ್ದು ವರದಿ ನೀಡುವಂತೆ ಕೇಳಲಾಗಿದೆ. ಹೆಚ್ಚುವರಿ ಹಣ ಹಿಂಪಡೆಯಲಾಗಿದೆಯೇ ಎಂಬ ಮಾಹಿತಿ ಕೇಳಿದ ಅವರು ಅಕ್ರಮ ನಡೆದಿದ್ದರೆ ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸುವಂತೆ ಆಗ್ರಹಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿ ತಾಪಂ ಮಾಜಿ ಉಪಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ಏನೇ ಪ್ರಶ್ನೆ ಕೇಳಿದರೂ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಿಎಚ್‌ಓ ಅವರನ್ನು ಕೇಳುವಂತೆ ಹೇಳುತ್ತಾರೆ. ಡಿಎಚ್‌ಓ ಅವರಿಂದ ಉತ್ತರ ಪಡೆಯುವುದಾದರೆ ಇವರು ಸಭೆಗೆ ಬಂದ್ದದ್ಯಾಕೆ. ಸಭೆಯಿಂದ ಹೊರಕ್ಕೆ ಕಳುಹಿಸಿ ಎಂದರು. ತಾಪಂ ಸದಸ್ಯ ಕರಣ ಪೂಜಾರಿ ಮಾತನಾಡಿ ಡಯಾಲಿಸಿಸ್ ಮಾಡಿಸಲು ಬಂದ ರೋಗಿಯಲ್ಲಿ ಯಾರಾದರೂ ಖಾಲಿಯಾದರೆ ನಿಮ್ಮನ್ನು ಸೇರಿಸಿಕೊಳ್ಳುತ್ತೇವೆ ಎಂದು ಆಸ್ಪತ್ರೆಯ ಸಿಬ್ಬಂಧಿ ಉಡಾಫೆಯಾಗಿ ಮಾತನಾಡಿದ್ದಾರೆ. ಇದು ಸರಿಯಲ್ಲ. ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಸದಸ್ಯ ಜಗದೀಶ ದೇವಾಡಿಗ ಮಾತನಾಡಿ ತಾಲೂಕು ಪಂಚಾಯತ್ ಅನುದಾನದಲ್ಲಿ ಅಳವಡಿಸಲಾಗಿರುವ ಸೋಲಾರ್ ಬೀದಿದೀಪಗಳು ಕೆಟ್ಟು ನಿಂತಿವೆ. ಅಳವಡಿಸಿರುವ ಕಂಪೆನಿ ಅದರ ದುರಸ್ತಿ ಮಾಡುತ್ತಿಲ್ಲ. ಇದಕ್ಕೆ ಜವಾಬ್ದಾರು ಯಾರು ಎಂದು ಪ್ರಶ್ನಿಸಿದರಲ್ಲದೇ ಹಿಂದಿನ ತಾಲೂಕು ಪಂಚಾಯತ್ ಸಭೆ ಮುಂದೂಡಿರುವುದು ಆಡಳಿತ ಪಕ್ಷದ ವೈಫಲ್ಯ ಎಂದು ಜರಿದರು. ಇದರಿಂದಾಗಿ ಕೆಲಕಾಲ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷೆ ಶ್ಯಾಮಲಾ ಕುಂದರ್ ಇದಕ್ಕೆ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ಪ್ರಕರಣಕ್ಕೆ ಇತಿಶ್ರೀ ಹಾಡಿದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ 94ಸಿ, 94ಸಿಸಿ, ಅಕ್ರಮ ಸಕ್ರಮ ಹಾಗೂ ಭಾಗಶಃ ಡೀಮ್ಡ್ ಫಾರೆಸ್ಟ್‌ನಲ್ಲಿ ನೆಲೆಸಿರುವವರಿಗೆ ಹಿಂದೆ ಮಾನವೀಯತೆಯ ದೃಷ್ಟಿಯಲ್ಲಿ ಹಕ್ಕುಪತ್ರ ನೀಡಲಾಗುತ್ತಿತ್ತು ಆದರೆ ಈ ಪ್ರಕ್ರಿಯೆಯನ್ನು ಲೋಕಾಯುಕ್ತದಲ್ಲಿ ಪ್ರಶ್ನಿಸಿ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಮೇಲೆ ಪ್ರಕರಣ ದಾಖಲಾದ ನಂತರ ಹಕ್ಕುಪತ್ರ ನೀಡುವುದನ್ನು ನಿಲ್ಲಿಸಲಾಗಿದೆ. ಡೀಮ್ಡ್ ಫಾರೆಸ್ಟ್, ಭಾಗಶಃ ಡೀಮ್ಡ್ ಫಾರೆಸ್ಟ್‌ಗೆ ಕೊಡಬೇಕೊ ಬಿಡಬೇಕೊ ಎಂದು ಇನ್ನು ತೀರ್ಮಾನವಾಗಿಲ್ಲ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗುತ್ತದೆ.

ಸಭೆಯಲ್ಲಿ ಆಧಾರ್ ಕಾರ್ಡ್ ಕೇಂದ್ರ, ಸೋಲಾರ್ ವಿದ್ಯುತ್ ದೀಪ, ಸರ್ಕಾರಿ ಆಸ್ಪತ್ರೆಯಲ್ಲಿರುವ ದೇವಸ್ಥಾನ, ೯೪ಸಿ, ಅಕ್ರಮ ಸಕ್ರಮ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಬಗೆಗೆ ಚರ್ಚೆ ನಡೆಯಿತು. ತಾಪಂ ಸದಸ್ಯರಾದ ಪುಪ್ಪರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಜ್ಯೋತಿ ಪುತ್ರನ್, ಮಾಲತಿ, ವಾಸುದೇವ ಪೈ ಸಭೆಯ ಗಮನ ಸೆಳೆದರು.

ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ, ಪ್ರಭಾರ ಇಓ ಡಾ. ನಾಗಭೂಷಣ ಉಡುಪ ಹಾಗೂ ಬೈಂದೂರು ತಾಪಂ ಇಓ ಭಾರತಿ ಇದ್ದರು.

ಶಾಸಕರ ಧರಣಿ:
ಹಳ್ನಾಡು ಬಳಿ ಮರಳು ದಾಸ್ತಾನು ಕೇಂದ್ರದಲ್ಲಿ ಮರಳು ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ಮರಳು ಹಾಗೂ ಸಾಗಾಟ ವಾಹನಕ್ಕೆ ಈಗಾಗಲೇ ದರಪಟ್ಟಿ ನೀಡಿದ್ದರೂ ಮರಳು ವಿತರಕರು ತಮ್ಮ ಪರಿಚಯಸ್ಥರ ಲಾರಿಗಳನ್ನೇ ನಿಲ್ಲಿಸಿ ಮರಳಿಗೆ ಬೇಡಿಕೆ ಸೃಷ್ಟಿಯಾಗುವಂತೆ ಮಾಡಿ ಹೆಚ್ಚುವರಿ ಸುಮಾರು ರೂ. ೧೦,೦೦೦ದ ತನಕ ಹಣ ಪಡೆಯುತ್ತಿದ್ದಾರೆ. ಇದರಿಂದಾಗಿ ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಗಣಿ ಇಲಾಖೆಯ ಗಮನ ಸೆಳೆದರೂ ಪರಿಸ್ಥಿತಿ ಬದಲಾಗಿಲ್ಲ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಕುಂದಾಪುರ ಹಾಗೂ ಬೈಂದೂರು ಶಾಸಕರ ನೇತೃತ್ವದಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಯಿತು. ಹಾಗೆಯೇ ಮರಳು ವಿತರಣೆ ಸಮರ್ಪಕವಾಗಿ ನಡೆಯುವಂತೆ ನೋಡಲು ತಾಪಂ ಅಧ್ಯಕ್ಷ ಉಪಾಧ್ಯಕ್ಷರ ನೇತೃತ್ವದಲ್ಲಿ ಮರಳು ಕಣ್ಗಾವಲು ಸಮಿತಿ ರಚಿಸಿ ಜಿಲ್ಲಾಧಿಕಾರಿಗಳಿಗೆ ಮನದಟ್ಟು ಮಾಡಿ ಸಮಸ್ಯೆ ಬಗೆಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

 

Leave a Reply

Your email address will not be published. Required fields are marked *

one × one =