ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಎಪ್ರಿಲ್ 23ರಿಂದ 25ರವರೆಗೆ ಜರುಗಲಿದೆ.
ಈ ಬಗ್ಗೆ ಅಷ್ಟಬಂಧ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಚರಣ ನಾವಡ ಮಾಹಿತಿ ನೀಡಿದರು. ಕುಂದಾಪುರದ ಅಧಿದೇವರಾದ ಶ್ರೀ ಕುಂದೇಶ್ವರನ ಪುನರ್ ಪ್ರತಿಷ್ಠಾ ಅಷ್ಠಬಂದ ಕಾರ್ಯಕ್ರಮವು 52 ವರ್ಷದ ಬಳಿಕ ಜ್ಯೋತಿಷಿ ವಿದ್ವಾನ್ ಹಾಲಾಡಿ ವಾಸುದೇವ ಜೋಯಿಸರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ಕುಮಾರ ಐತಾಳರ ಉಪಸ್ಥಿತಿಯಲ್ಲಿ ಜರುಗಲಿದೆ.
ಎಪ್ರಿಲ್ 23ರಂದು ಅಷ್ಟಬಂಧ ಸಮ್ಮೇಲನದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳಾದ, ದೇವರ ಪ್ರಾರ್ಥನೆ, ಹೋಮಹವನ, ಜೀವ ಕುಂಭ ಸ್ಥಾಪನ, ಬಿಂಬ ಶುದ್ಧಿ ಮುಂತಾದವುಗಳು ಜರುಗಿದರೇ, ಎ.24ರಂದು ಕುಂದೇಶ್ವರ ದೇವರ ಪುನರ್ ಪ್ರತಿಷ್ಠಾ ಅಷ್ಠಬಂಧ ಸಮ್ಮೇಲನದ ಬಳಿಕ ಜೀವಕುಂಭಾಭಿಷೇಕ ಕಲಾವೃದ್ಧಿ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ರಾತ್ರಿ ಸಹಸ್ರ ಕಲಶ ಸ್ಥಾಪನ, ಅಧಿವಾಸ ಹೋಮ ಪೂಜೆ ಜರುಗಲಿದೆ. ಎ.25ರಂದು ಕಲಾಷಾಭಿಷೇಕ, ಮಹಾಪೂಜೆ, ಮಹಾ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ ಉತ್ಸವ, ಮತ್ರಾಕ್ಷತೆ ಪ್ರಸಾದ ವಿತರಣೆ ನಡೆಯಲಿದೆ.
ಎಪ್ರಿಲ್ 22ರ ಸಂಜೆ ಶಾಸ್ತ್ರಿವೃತ್ತದಿಂದ ಕುಂದೇಶ್ವರ ದೇವಸ್ಥಾನದ ವರೆಗೆ ಹೊರೆಕಾಣಿಕೆ ಸಾಗಲಿದ್ದು, ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ರಾಜೇಶ್ ಕಾವೇರಿ ಉಪಸ್ಥಿತರಿದ್ದರು.