ನಾಗೂರಿನ ಕುಸುಮಾ ಫೌಂಡೇಶನ್ ದಂತ ಚಿಕಿತ್ಸಾ ಶಿಬಿರದಲ್ಲಿ ಅಭಿಮತ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಬಾಯಿಯು ದೇಹದ ಹೆಬ್ಬಾಗಿಲು ಎನ್ನುತ್ತಾರೆ. ಬಾಯಿ ಮತ್ತು ಹಲ್ಲುಗಳ ಆರೋಗ್ಯದ ಮೇಲೆ ದೇಹದ ಆರೋಗ್ಯ ಅವಲಂಬಿಸಿರುವುದರಿಂದ ಅದನ್ನು ಎಂದೂ ನಿರ್ಲಕ್ಷಿಸಬಾರದು ಎಂದು ಇಂಡಿಯನ್ ಡೆಂಟಲ್ ಅಸೋಸಿಯೇಶನ್ನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮನೋಜ್ ಮ್ಯಾಕ್ಷಿಮ್ ಡಿಲಿಮಾ ಹೇಳಿದರು.
ನಾಗೂರಿನ ಕುಸುಮಾ ಫೌಂಡೇಶನ್, ಐಡಿಎ ಜಿಲ್ಲಾ ಘಟಕ, ಮಣಿಪಾಲದ ದಂತವಿಜ್ಞಾನ ಮಹಾವಿದ್ಯಾಲಯ, ಉಡುಪಿ ಜಿಲ್ಲಾ ಆಸ್ಪತ್ರೆಯ ದಂತ ಆರೋಗ್ಯ ವಿಭಾಗ, ಕುಂದಾಪುರ ಮಿಡ್ಟೌನ್ ರೋಟರಿ ಕ್ಲಬ್ ಮತ್ತು ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಫೌಂಡೇಶನ್ ದತ್ತು ಪಡೆದಿರುವ ನಾಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ, ಶಿಕ್ಷಕ ಮತ್ತು ಪೋಷಕರಿಗಾಗಿ ಮಂಗಳವಾರ ನಡೆದ ಸಮಗ್ರ ಬಾಯಿಯ ಆರೋಗ್ಯ ಕಾರ್ಯಕ್ರಮ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು.
ಹಲ್ಲು ಮತ್ತು ಬಾಯಿಯ ಆರೋಗ್ಯದ ಕುರಿತಾದ ಎಚ್ಚರ ಬಾಲ್ಯದಲ್ಲೇ ಮೂಡಬೇಕು. ಆ ಕುರಿತು ಪೋಷಕರಿಗೂ ಅರಿವು ಇರಬೇಕು. ನಮಗಿರುವುದು ೩೨ ಹಲ್ಲು ಎನ್ನುವುದು ಸರಿಯಲ್ಲ. ೨೦ ಹಾಲು ಹಲ್ಲುಗಳು ಸೇರಿ ೫೨ ಎಂದೇ ಭಾವಿಸಬೇಕು. ಮಕ್ಕಳ ಹಾಲು ಹಲ್ಲುಗಳು ಉದುರಿ ಹೊಸದು ಹುಟ್ಟುತ್ತವೆ ಎಂಬ ಕಾರಣಕ್ಕೆ ಅವುಗಳ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಅಂತಹ ನಿರ್ಲಕ್ಷ್ಯದಿಂದ ಕೀಳಬೇಕಾಗಿ ಬಂದರೆ ಆ ಬಳಿಕ ಬರುವ ಹಲ್ಲುಗಳು ವಕ್ರವಾಗಿ, ಅಡ್ಡಾದಿಡ್ಡಿಯಾಗಿ ಹುಟ್ಟಿ ಮುಖದ ಸೌದರ್ಯ ಕೆಡುತ್ತದೆ. ನೋವು ಬಂದರಷ್ಟೆ ದಂತವೈದ್ಯರನ್ನು ಕಾಣುವ ಕ್ರಮ ಸರಿಯಲ್ಲ. ದಂತದ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು, ಸಣ್ಣ ಸಮಸ್ಯೆ ಬಂದರೂ ಅವರನ್ನು ಭೇಟಿಯಾಗಬೇಕು ಎಂದು ಅವರು ಎಚ್ಚರಿಸಿದರು.
ಹಲ್ಲು ಉಜ್ಜುವ ಸರಿಯಾದ ಕ್ರಮವನ್ನು ಮಕ್ಕಳಿಗೆ ಆರಂಭದಲ್ಲೇ ತಿಳಿಸಿ ಹೇಳಬೇಕು. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವ, ನಾಲಿಗೆ ಕೀಸುವ, ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಿಸುವ, ಫ್ಲೊರೈಡ್ಯುಕ್ತ ಪೇಸ್ಟ್ಗೆ ಆದ್ಯತೆ ನೀಡುವ ಪರಿಪಾಠ ರೂಢಿಸಬೇಕು. ತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆಯಿಂದ ಬಾಯಿಯ ಕ್ಯಾನ್ಸರ್ ಬರುವ ಸಂಭವ ಇರುವುದರಿಂದ ಅದರ ವಿರುದ್ಧ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು.
ಕುಸುಮಾ ಫೌಂಡೇಶನ್ ಆಡಳಿತ ನಿರ್ದೇಶಕ ನಳಿನ್ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಸಮ್ ಸಂಗೀತ ಶಾಲೆಯ ಶಿಕ್ಷಕಿ ಶ್ವೇತಾ ಭಟ್ ಪ್ರಾರ್ಥನೆ ಹಾಡಿದರು. ಫೌಂಡೇಶನ್ನ ನಿರ್ದೇಶಕಿ ಮೊನಿಷಾ ಸ್ವಾಗತಿಸಿ, ನಿರೂಪಿಸಿದರು. ಕುಂದಾಪುರ ಮಿಡ್ಟೌನ್ ರೋಟರಿ ಅಧ್ಯಕ್ಷ ಪ್ರಭಾಕರ ರಾವ್, ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಸದಸ್ಯ ಪ್ರಭಾಕರ ಶೆಟ್ಟಿ, ಜಿಲ್ಲಾಸ್ಪತ್ರೆಯ ಮುಖ್ಯ ದಂತ ಆರೋಗ್ಯ ಅಧಿಕಾರಿ ಡಾ. ಮಂಜುನಾಥ ಮೇಸ್ತ, ಮಣಿಪಾಲ ದಂತ ವಿಜ್ಞಾನ ಮಹಾ ವಿದ್ಯಾಲಯದ ಡಾ. ಕಾರ್ತಿಕ್, ಡಾ. ದೀಪಾ, ಡಾ. ಜಾಸ್ಮಿನ್, ಶಾಲೆಯ ಮುಖ್ಯೋಪಾಧ್ಯಾಯ ಗುರುರಾಜ ಮಯ್ಯ ಇದ್ದರು. ಶಾಲೆಯ ಎಲ್ಲ ಮಕ್ಕಳ ದಂತ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ, ಮಾರ್ಗದರ್ಶನ ನೀಡಲಾಯಿತು. ಪೋಷಕರಿಗೆ, ಶಿಕ್ಷಕರಿಗೆ ದಂತದ ಆರೋಗ್ಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲಾಯಿತು.