ಭ್ರಷ್ಟರನ್ನು ಸಹಿಸಿಕೊಳ್ಳುವ ತನಕ ನೈಜ ಪ್ರಜಾಪ್ರಭುತ್ವ ಸ್ಥಾಪನೆಯಾಗದು: ಸಂತೋಷ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ’ಭಾರತ ಸ್ವಾತಂತ್ರ್ಯ ಗಳಿಸಿ ಪ್ರಜಾತಂತ್ರ ವ್ಯವಸ್ಥೆಗೆ ಹೊರಳಿಕೊಂಡಾಗ ಜನರಿಂದ ಆದ ಜನರಿಗಾಗಿ ಇರುವ ಜನರ ಸರ್ಕಾರ ಬಂತೆಂದು ಹಿಗ್ಗಿದೆವು. ಆದರೇ ನಾವೀಗ ಇಲ್ಲಿ ಕೆಲವರಿಂದ ಆದ ಕೆಲವರಿಗಾಗಿ ಇರುವ ಕೆಲವರ ಸರ್ಕಾರವನ್ನು ಕಾಣುತ್ತಿದ್ದೇವೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಯುವ ಜನತೆ ಇದನ್ನು ಬದಲಿಸಬೇಕು’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.

ನಾಗೂರಿನ ಕುಸುಮ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಅವರು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗ್ಡೆ ಅವರಿಗೆ ಈ ಸಾಲಿನ ’ಕುಸುಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ದಿಕ್ಸೂಚಿ ಭಾಷಣ ಮಾಡಿದರು.

ಲೋಕಾಯುಕ್ತನಾದ ಬಳಿಕ ನನಗೆ ದೇಶದ ವಾಸ್ತವ ಸ್ಥಿತಿಯ ಅರಿವಾಯಿತು. ಜನರು ಭ್ರಷ್ಟರನ್ನು, ಅಯೋಗ್ಯರನ್ನು, ಅತ್ಯಾಚಾರಿಗಳನ್ನು ಬಹಿಷ್ಕರಿಸುವ ಬದಲಿಗೆ ಪುರಸ್ಕರಿಸುವುದನ್ನು ಕಂಡು ಆಘಾತಗೊಂಡೆ. ಇದರ ಫಲವಾಗಿ ದೇಶ ಅಭಿವೃದ್ಧಿಯಾಗುವುದರ ಬದಲಿಗೆ ಆಡಳಿತಗಾರರಿಂದ ನಡೆಯುತ್ತ ಬಂದ ಹಗರಣಗಳ ಮೊತ್ತ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. ಈ ಪರಿಯ ಸೋರಿಕೆಯಿಂದ ನಿಜವಾದ ಅಭಿವೃದ್ಧಿಗೆ ವೆಚ್ಚವಾಗುವ ಮೊತ್ತ ಕುಸಿಯುತ್ತಿದೆ. ಈ ಪ್ರವೃತ್ತಿ ಪ್ರಜಾತಂತ್ರದ ಸ್ತಂಭಗಳೆನಿಸಿದ ಶಾಸನಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಸಮನಾಗಿ ವ್ಯಾಪಿಸಿದೆ. ನಾಲ್ಕನೆ ಸ್ತಂಭವೆಂದು ಸ್ವಯಂಘೋಷಿಸಿಕೊಂಡ ಮಾಧ್ಯಮ ರಂಗವೂ ಇದಕ್ಕೆ ಹೊರತಾಗಿಲ್ಲ ಎಂದು ಅವರು ವಿಷಾದಿಸಿದರು.

ಆಡಳಿತದ ಅಂಗಗಳಲ್ಲಿ ಮನೆಮಾಡಿರುವ ಭ್ರಷ್ಟತೆಗೆ ಅವುಗಳನ್ನು ಪ್ರವೇಶಿಸುವ ನಮ್ಮ ಜನರಲ್ಲಿ ತೃಪ್ತಿಯ ಬದಲಾಗಿ ದುರಾಸೆ ಹೆಚ್ಚುತ್ತಿರುವುದು, ಮೌಲ್ಯಗಳ ಪತನ ಆಗಿರುವುದು ಕಾರಣ. ಇಂತಹ ವ್ಯವಸ್ಥೆ ಇರುವಷ್ಟು ಕಾಲ ದೇಶದ ನೈಜ ಅಭಿವೃದ್ಧಿ ಅಸಾಧ್ಯ ಎಂದರು.

ಸಂತೋಷ್ ಹೆಗ್ಡೆ ಅವರ ಮಾತುಗಳು ಹಾಗೂ ಸಮಾರಂಭದ ವೀಡಿಯೋ ನೋಡಿ

ಪ್ರಶಸ್ತಿ ಸ್ವೀಕರಿಸಿದ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ ’ದೇಶದ ಅಸಂಖ್ಯ ಮತ್ತು ವೈವಿಧ್ಯಮಯ ಕಲಾಪ್ರಕಾರಗಳಲ್ಲಿ ಕರಾವಳಿ ಮತ್ತು ಮಲೆನಾಡಿನ ಯಕ್ಷಗಾನ ಅದ್ವಿತೀಯ ಸ್ಥಾನ ಗಳಿಸಿದೆ. ಅದಕ್ಕೆ ಯುನೆಸ್ಕೋದ ವಿಶ್ವ ಪರಂಪರಾ ಮಾನ್ಯತೆ ಸಿಗುವ ದಿನ ಬರಲಿದೆ. ಅವಿಭಜಿತ ದಕ್ಷಿಣ ಕನ್ನಡದ ಜನರು ಯಕ್ಷಗಾನ ಕಲೆಯನ್ನು, ಕೆರೆಮನೆ ಕಲಾವಿದರನ್ನು ಪ್ರೀತಿ, ಗೌರವದಿಂದ ಕಾಣುತ್ತಾರೆ. ಅಂತಹ ನೆಲದಲ್ಲಿ ನೀಡಲಾದ ಪ್ರಶಸ್ತಿ ಸ್ವೀಕರಿಸುವುದು ಬದುಕಿನ ಅತಿ ಮಹತ್ವದ ಸಂಗತಿ. ಇದರಿಂದ ನನ್ನ ಜವಾವಾಬ್ದಾರಿ ಹೆಚ್ಚಿದೆ’ ಎಂದರು.

ಫೌಂಡೇಶನ್‌ನ ಆಡಳಿತ ವಿಶ್ವಸ್ಥ ನಳಿನ್‌ಕುಮಾರ ಶೆಟ್ಟಿ ಸ್ವಾಗತಿಸಿ, ಸಂಸ್ಥೆಯ ಆಶಯ ಮತ್ತು ಮುಂದಿನ ಯೋಜನೆಗಳನ್ನು ವಿವರಿಸಿದರು. ನಯನಾ ಶೆಟ್ಟಿ, ವಿಶ್ವನಾಥ ಶೆಟ್ಟಿ ನಿರ್ವಹಿಸಿದರು. ಶಿವಾನಂದ ಹೆಗಡೆ ಅವರ ಪತ್ನಿ ಇದ್ದರು. ಸಂಸ್ಥೆ ನಡೆಸಿದ್ದ ಜಿಲ್ಲಾ ಮಟ್ಟದ ಗಾನಕುಸುಮ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆ, ಅವರಿಂದ ಮತ್ತು ಅನ್ಯ ಕಲಾವಿದರಿಂದ ಸಂಗೀತ ಸಂಧ್ಯಾ ಪ್ರಸ್ತುತಗೊಂಡಿತು.

Leave a Reply

Your email address will not be published. Required fields are marked *

three × 2 =