ನಾನು ಬಡ್ಡಿ ವ್ಯವಹಾರ ನಡೆಸಿಲ್ಲ. ಬ್ಲ್ಯಾಂಕ್ ಚೆಕ್ ಕೂಡ ಪಡೆದಿಲ್ಲ: ಆರೋಪಕ್ಕೆ ಸದಾನಂದ ಶೆಟ್ಟಿ ಸ್ಪಷ್ಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿಜೆಪಿ ಮುಖಂಡರಾದ ಸದಾನಂದ ಉಪ್ಪಿನಕುದ್ರು ಅವರಿಗೆ ತಾನು ಬಡ್ಡಿಯಲ್ಲಿ ಸಾಲ ನೀಡಿಲ್ಲ. ಅವರಿಂದ ಯಾವುದೇ ಬ್ಲ್ಯಾಂಕ್ ಚೆಕ್ ಪಡೆದಿಲ್ಲ. ಈ ಹಿಂದೆ ಜಾಗ ಖರೀದಿಯ ವ್ಯವಹಾರದಲ್ಲಿ ಅವರು ನೀಡಿದ ಚೆಕ್ಗಳು ಬೌನ್ಸ್ ಆಗಿದ್ದು ಆ ಪ್ರಕರಣ ಕೋರ್ಟ್ನಲ್ಲಿದೆ ಎಂದು ಕುಂದಾಪುರದ ನ್ಯಾಯವಾದಿ ಸದಾನಂದ ಶೆಟ್ಟಿ ಹೇಳಿದ್ದಾರೆ.

ಶನಿವಾರ ಕುಂದಾಪುರ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಸದಾನಂದ ಉಪ್ಪಿನಕುದ್ರು ಅವರಿಗೆ ತಾನು ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸ್ಪಷನೆ ನೀಡಿ ಸದಾನಂದ ಉಪ್ಪಿನಕುದ್ರು ನನ್ನ ಮೇಲೆ ಮಾನಹಾನಿಕರ ಮತ್ತು ಸುಳ್ಳು ಆರೋಪಗಳನ್ನು ಜಗದ್ವಿಖ್ಯಾತ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಮಾಡಿದ್ದಾರೆ. ಇದರ ಹಿನ್ನೆಲೆ ಏನು, ಉದ್ದೇಶವೇನು ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಸದಾನಂದ ಉಪ್ಪಿನಕುದ್ರು ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಸದಾನಂದ ಶೆಟ್ಟಿ ಹೇಳಿದ್ದಾರೆ. ಅವರು ಮಾಡಿರುವ ಆರೋಪಕ್ಕೆ ಒಂದೇ ಒಂದು ಸಾಕ್ಷ್ಯವನ್ನು ಅವರು ನೀಡಿಲ್ಲ, ಸಾಕ್ಷ್ಯ ಅವರ ಬಳಿ ಇಲ್ಲ ಎಂದು ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಸದಾನಂದ ಉಪ್ಪಿನಕುದ್ರು ಅವರಿಗೆ ಬಾಡಿಗೆಗೆ ಜಾಗ ನೀಡಿದ್ದೆವು

ಸದಾನಂದ ಉಪ್ಪಿನಕುದ್ರು ಅವರು ವ್ಯವಹಾರ ನಡೆಸಲು ನಮ್ಮ ಕುಟುಂಬಕ್ಕೆ ಸೇರಿದ್ದ ಜಾಗವೊಂದನ್ನು ಹತ್ತು ವರ್ಷಗಳ ಕಾಲ ಬಾಡಿಗೆಗೆ ಕೇಳಿದ್ದರು. ತಿಂಗಳೊಂದರ ಬಾಡಿಗೆ 35 ಸಾವಿರ ಎಂದು ನಿಗದಿಪಡಿಸಿ ಅವರಿಗೆ ಬಾಡಿಗೆ ನೀಡಿದ್ದೆವು. ಆ ಬಳಿಕ ನನಗೂ ಅವರ ಜೊತೆ ಉತ್ತಮ ಸಂಬಂಧ ಬೆಳೆದಿತ್ತು. ಅವರ ಬಳಿ ಇದ್ದ ಜಾಗವೊಂದನ್ನು ನಮ್ಮ ಕುಟುಂಬ ಖರೀದಿ ಮಾಡಿತು. ಈ ಕುರಿತು ಅವರಿಗೆ 40 ಲಕ್ಷ ರೂಪಾಯಿಗಳನ್ನು ಸಂದಾಯ ಮಾಡಿದ್ದೆವು. ಈ ಕುರಿತು ಒಪ್ಪಂದವನ್ನೂ ಮಾಡಿಕೊಂಡು ನೋಂದಣಿ ಮಾಡಿಕೊಂಡಿದ್ದೆವು. ಆದರೆ ಆ ಬಳಿಕ ತನಗೆ ಆ ಜಾಗ ಮಾರಲು ಮನಸ್ಸಿಲ್ಲ, ನಿಮಗೆ ನಿಮ್ಮ ದುಡ್ಡು ವಾಪಾಸು ಕೊಡುತ್ತೇನೆ ಎಂದಾಗ ನಾನು ಅದಕ್ಕೆ ಒಪ್ಪಿದ್ದೆ. ನಾನು ಕೊಟ್ಟ 40 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಲು ಅವರು ನನಗೆ ಒಟ್ಟು ಮೂರು ಚೆಕ್ ನೀಡಿದ್ದರು. ಆ ಪೈಕಿ ಹತ್ತು ಲಕ್ಷ ರೂಪಾಯಿಗಳ ಒಂದು ಚೆಕ್ ನಗದಿಯಾಯಿತು ಬಿಟ್ಟರೆ ಉಳಿದ ಒಟ್ಟು ಇಪ್ಪತ್ತೈದು ಲಕ್ಷಕ್ಕೆ ನೀಡಿದ ಎರಡು ಚೆಕ್ಗಳು ಬೌನ್ಸ್ ಆಗಿ ಹಣ ಸಿಗಲಿಲ್ಲ. ಈ ಕುರಿತು ಅವರಿಗೆ ಫೋನ್ ಮಾಡಿದಾಗ ಅವರು ಹಣ ನೀಡುತ್ತೇನೆ ಎನ್ನುವ ಭರವಸೆ ನೀಡಿದರು ವಿನಃ ಹಣ ನನಗೆ ಬರಲಿಲ್ಲ. ಆ ಬಳಿಕ ಕಾನೂನು ಕ್ರಮಕ್ಕೆ ಮುಂದಾಗಿ ನಾನು ಕೋರ್ಟ್ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಆ ಬಳಿಕ ನನಗೆ ಅವರು ಐದು ಲಕ್ಷ ರೂಪಾಯಿ ಚೆಕ್ ಮೂಲಕ ನೀಡಿದರು. ಆದರೆ ಉಳಿದ ಹಣ ಹಾಗೆಯೆ ಉಳಿದು ಪ್ರಕರಣವೂ ಮುಂದುವರಿಯಿತು. ಇಷ್ಟು ವ್ಯವಹಾರ ಬಿಟ್ಟರೆ ನನಗೆ ಸದಾನಂದ ಉಪ್ಪಿನಕುದ್ರು ಅವರ ಜೊತೆ ಯಾವುದೇ ವ್ಯವಹಾರ ಇಲ್ಲ ಎಂದು ಸದಾನಂದ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
► ಬೈಂದೂರು ಶಾಸಕ ಸುಕುಮಾರ ಶೆಟ್ಟರ ಕಿರುಕುಳದಿಂದ ಬೇಸತ್ತಿದ್ದೇನೆ: ಸದಾನಂದ ಉಪ್ಪಿನಕುದ್ರು ಆರೋಪ – https://kundapraa.com/?p=47102 .

Leave a Reply

Your email address will not be published. Required fields are marked *

nine − 4 =