ಬದುಕಿನೊಂದಿಗೆ ಬದುಕು

  • ಸಂದೇಶ್ ಶಿರೂರು

ಈ ಜಗತ್ತು ಜೀವನವೆಂಬ ಪಯಣದ ಮೊದಲ ಘಟ್ಟ. ಪ್ರಕೃತಿಯೊಂದಿಗಿನ ಕಲಿಕೆಯಿಂದ ಪ್ರಾರಂಭವಾಗುವ ನಮ್ಮ ಬದುಕು, ಸಾವಿನೊಂದಿಗೆ ಅಂತ್ಯವಾಗುವ ಸುಂದರ ಕಥೆಯ ವ್ಯಥೆಯಾಗಿದೆ. ಈ ಬದುಕಿನ ಮೊದಲ ಪುಟದ ಅಧ್ಯಯನವು ಬಹಳ ಸೊಗಸಿನೊಂದಿಗೆ ಪ್ರಾರಂಭವಾಗುವ ಬಾಲ್ಯ, ಸ್ವಚ್ಛಂದ ಪರಿಸರದಲ್ಲಿ ವಿಹರಿಸುತ್ತಾ, ಪ್ರಕೃತಿಯ ಕೌತುಕವನ್ನು ಬೆರಗುಗಣ್ಣಿನಿಂದ ನೋಡುತ್ತಾ, ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಬೆರೆತು ಹೋಗುವ ಬಾಲ್ಯದ ನೆನಪು ವರ್ಣಿಸಲಸದಳ. ಹೀಗೆ ಸುಂದರ ಪುಟಗಳೊಂದಿಗೆ ಆರಂಭವಾಗುವ ಈ ಬದುಕು ನಮ್ಮ ಮುಂದಿನ ಜೀವನ ಪಯಣದ ಆಗುಹೋಗುಗಳ ಬಗ್ಗೆ ತಿಳಿಸುತ್ತದೆ.

ಈ ಪ್ರಪಂಚದಲ್ಲಿ ಅದೆಷ್ಟೋ ಜನರಿಗೆ ಬದುಕನ್ನು ಕಟ್ಟಿಕೊಡುವ ನಗರಗಳು ನಮ್ಮ ಪಾಲಿನ ಆಶಾಕಿರಣ. ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ತನ್ನೆಲ್ಲಾ ಕಷ್ಟಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಬದುಕುವ ನಿಷ್ಠಾವಂತ ಜನರ ಬದುಕಿನೊಂದಿಗೆ ಈ ಬದುಕು ಈಗ ದುರಂತದ ಕಥೆಯಾಗಿದೆ. ಮುಂದುವರಿಯುತ್ತಿರುವ ಈ ಜಗತ್ತಿನಲ್ಲಿ ಇಂದು ಕಾಣದ ಸೂಕ್ಷ್ಮ ರೋಗಾಣುಗಳು ಎಷ್ಟೋ ಜನರ ಪಾಲಿಗೆ ಮೊದಲೇ ಹೇಳಿದಂತೆ ನಿಷ್ಠಾವಂತ ಜನರ ಬದುಕಿಗೆ ಮಾರಕವಾಗಿ ಪರಿಣಮಿಸಿದೆ. ದಿನದ ದುಡಿಮೆಯನ್ನು ನಂಬಿ ಬದುಕುತ್ತಿರುವ ಇಂತಹ ಜನಸಾಮಾನ್ಯರ ಬದುಕು ಇಂದು ದುರಂತಮಯವಾಗಿದೆ ಹಾಗೆ ಬದುಕಿಗಾಗಿ ಪರಿತಪಿಸುವಂತಾಗಿದೆ.

ತನ್ನೆಲ್ಲಾ ಕನಸುಗಳನ್ನು ಕಟ್ಟಿಕೊಂಡು ತನ್ನ ಸ್ನೇಹ, ಪ್ರೀತಿ, ಬಂಧು-ಮಿತ್ರರು ಇವರೆಲ್ಲರನ್ನು ಬಿಟ್ಟು ದೂರದ ಊರಿಗೆ ಹೋಗಿ ನಿಷ್ಠೆಯಿಂದ ಮುಂದಿನ ಬದುಕಿನ ಪುಟದ ಸಾಧನೆಗೆ ದುಡಿಯುವ ಜನ, ಇವತ್ತು ಈ ಕಾಣದ ಸೂಕ್ಷ್ಮ ರೋಗಾಣುವಿನ ಆವೇಶಕ್ಕೆ ಅಲ್ಲೋಲ-ಕಲ್ಲೋಲವಾಗಿ ತನ್ನ ಬದುಕು ತನ್ನೆದುರೆ ಮುಳುಗುತ್ತಿರುವುದನ್ನು ಕಂಡು ಮರುಗುತ್ತಾ ಮರಳಿ ತನ್ನ ಬಾಲ್ಯದ ಊರಿಗೆ ಬೇಸರದೊಂದಿಗೆ ಹಾಗೆ ಕಾಣದ ಸೂಕ್ಷ್ಮಜೀವಿಯು ಆವರಿಸುವ ಭಯದೊಂದಿಗೆ ನಡೆಸಿದ ಈ ಪಯಣವು ಬಹಳ ಶೋಚನಿಯವಾದುದು.

ಇಷ್ಟು ದಿನ ಸುಂದರ ಬದುಕನ್ನು ನಡೆಸುತ್ತಿರುವ ಜನ, ತನ್ನ ಬದುಕಿನ ಮುಂದಿನ ಪುಟಕ್ಕೆ ದಾರಿಕಾಣದೇ ದಿಗ್ಭ್ರಮೆಯಾಗಿ ಕುಳಿತಿರುವುದಂತು ನಿಜ. ಅದೆಷ್ಟೋ ಕನಸುಗಳು ನುಚ್ಚುನೂರಾಗಿ, ಮನೆಯ ಜವಾಬ್ದಾರಿಯನ್ನು ನಿಭಾಯಿಸಲು, ಸೋದರಿಯ ಮದುವೆಗಾಗಿ ಮಾಡಿದ ಸಾಲವನ್ನು ತೀರಿಸಲು ಆಗದ ಸ್ಥಿತಿಯನ್ನು ತಲುಪಿ ಹತಾಶೆಯೊಂದಿಗೆ ಮುಂದೇನು? ಎನ್ನುವ ಪ್ರಶ್ನೆಯೊಂದಿಗೆ ಸಂದಿಗ್ಧದಲ್ಲಿದ್ದಾರೆ.

     ಸಂದೇಶ್ ಶಿರೂರು

ಹೀಗೆ ಸತತ ತಿಂಗಳುಗಳೇ ತನ್ನ ಬಾಲ್ಯದ ನೆನಪು ಹಾಗೆ ಕುಟುಂಬದೊಂದಿಗೆ ಪ್ರೀತಿ ಪ್ರೇಮದಿಂದ ಬೆರೆತ ಸುಂದರ ಕ್ಷಣ ಹಾಗೂ ಕಷ್ಟಕರವಾದ ಭಯದ ವಾತಾವರಣದ ಬದುಕನ್ನು ಕಳೆದು ಮತ್ತೆ ಕಾಣದ ಸೂಕ್ಷ್ಮಜೀವಿಯ ಆವೇಶ ಇಳಿಯದಿದ್ದರೂ ಬದುಕನ್ನು ನಡೆಸುವ ಅನಿವಾರ್ಯತೆಯಿಂದ ತನ್ನದೇ ಕನಸುಗಳ ಮೂಟೆಯನ್ನು ಹೊತ್ತು ಹಾಗೂ ಹೊಸ ಉತ್ಸಾಹದೊಂದಿಗೆ ಮತ್ತು ಸ್ವಲ್ಪಮಟ್ಟಿನ ಭಯದೊಂದಿಗೆ ತನ್ನ ದುಡಿಮೆಯ ನಗರಕ್ಕೆ ತನ್ನ ಮತ್ತು ತನ್ನ ಕುಟುಂಬದ ತುತ್ತಿನ ಚೀಲವನ್ನು ತುಂಬಿಸುವ ಅನಿವಾರ್ಯತೆಯಿಂದ ಪಯಣವನ್ನು ಬೆಳೆಸುತ್ತಿರುವ ನಿಷ್ಠಾವಂತರ ಬದುಕು ಶೋಚನೀಯವಾದದ್ದು. ತನ್ನ ನೋವು ದುಃಖಗಳನ್ನು ಹೇಳಲಾಗದೇ ಅದೇ ದುಡಿಮೆಯ ನಗರಕ್ಕೆ ಸಾಗುತ್ತಾ ತಮ್ಮ ಬದುಕಿನೊಂದಿಗೆ ಬದುಕನ್ನು ಕಟ್ಟಿಕೊಳ್ಳುವ ಕಾತುರ ನಮ್ಮದಾಗಿದೆ.

Leave a Reply

Your email address will not be published. Required fields are marked *

18 − 7 =