ಶಿಕ್ಷಣದ ಪರಿಪೂರ್ಣತೆಗೆ ಪೂರಕವಾಗಬಲ್ಲ ಶಿಕ್ಷಣ ಇಲಾಖೆಯ ಕನಸಿನ ಕೂಸು ಮಕ್ಕಳವಾಣಿ

Call us

ಮಧುರಾಣಿ ಎಚ್. ಎಸ್, ಮೈಸೂರು | ಕುಂದಾಪ್ರ ಡಾಟ್ ಕಾಂ.
ಕೋವಿಡ್‌ನ ದುರಿತ ಕಾಲದಲ್ಲಿ ಶಾಲೆಗಳು ದೀರ್ಘ ಕಾಲದವರೆಗೂ ಮುಚ್ಚಲ್ಪಟ್ಟ ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಹೊರತುಪಡಿಸಿ ಮಕ್ಕಳಿಗೆ ಬೇರೇನು ನೀಡಬಹುದು ಎನ್ನುವಂತಹ ಪ್ರಶ್ನೆ ಒಂದು ಸಮರ್ಥ ಶಿಕ್ಷಕ ವೃಂದದ ಮುಂದೆ ಬಂದಾಗ ನಮ್ಮ ’ಮಕ್ಕಳ ವಾಣಿ’ಯಂತಹ ಕನಸಿನ ಕೂಸಿನ ಹುಟ್ಟಿಗೆ ಕಾರಣವಾಯಿತು.

Call us

ಶಾಲೆಗೂ ಶಿಕ್ಷಕರಿಗೂ – ಪುಸ್ತಕಕ್ಕೂ ದೂರವಾಗಿ, ಕಲಿಕಾ ವಾತಾವರಣಕ್ಕೆ ದೂರವಾಗಿ, ಬಟಾಬಯಲಿನಲ್ಲಿ ನಟ್ಟನಡುವೆ ನಿಂತ ಪಯಣಿಗನಂತಾಗಿದ್ದ ಪುಟ್ಟ ಮಗುವಿಗೆ ಬೇಕಾಗಿದ್ದು ಖಂಡಿತವಾಗಿಯೂ ಪಠ್ಯದ ತರಗತಿಗಳಲ್ಲ. ಮಗುವಿಗೆ ಆ ಕ್ಷಣ ಬೇಕಾಗಿದ್ದು ಉಳಿಯಬೇಕಾಗಿದ್ದು ಕಲಿಕೆಯಲ್ಲಿ ನಿರಂತರ ಆಸಕ್ತಿ ಹಾಗೂ ಬತ್ತದ ಉತ್ಸಾಹ. ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಮ್ಮೆಯ ಪ್ರಸ್ತುತಿ ’ಮಕ್ಕಳ ವಾಣಿ’ಯು ಈ ಅಗತ್ಯವನ್ನು ಅತ್ಯಂತ ಯಶಸ್ವಿಯಾಗಿ ಮೋಜು ಮಸ್ತಿಗಳ ಸಹಿತ ನೀಗಿಸಿತ್ತು.

ಕೇವಲ ಮಕ್ಕಳೇ ಅಲ್ಲದೇ ದೊಡ್ಡವರೂ ಸಹ ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ ಕೂತು ಜಡ್ಡು ಹಿಡಿದ ಲಾಕ್ ಡೌನ್ ಸಮಯವನ್ನು ಸಂಭ್ರಮದಲ್ಲಿ ಕಳೆಯುವಂತೆ ಮಾಡಿತು. ಪ್ರತಿ ದಿನದ ಸ್ವಲ್ಪ ಸಮಯವನ್ನು ನಾವೆಲ್ಲರೂ ಮಕ್ಕಳ ವಾಣಿಗಾಗಿ ಮೀಸಲಿಟ್ಟೆವು. ಹೊರಗೆ ಹೋಗಿ ಗೆಳೆಯರೊಂದಿಗೆ ಆಟವೂ ಇಲ್ಲದೆ ಪೋ?ಕರೊಂದಿಗೆ ಪರಿಪೂರ್ಣ ಸಮಯವೂ ದೊರೆಯದೇ ಅತಂತ್ರರಾಗಿದ್ದ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಕ್ಕಳವಾಣಿ ನಲಿಯೋಣ ಕಲಿಯೋಣ ಯೂಟ್ಯೂಬ್ ಚಾನೆಲ್ ವರವಾಯಿತು.

ಬಿತ್ತರವಾಗಿದ್ದು ಕೇವಲ ಐವತ್ತೇ ಕಂತುಗಳಾದರೂ ಅದ್ಭುತವಾದ ಕಥೆಗಳು, ಕೇವಲ ಕಾಗದ ಕತ್ತರಿ, ಗಮ್ ಬಳಸಿ ಹಲವು ಮೋಜಿನ ಆಕೃತಿಗಳ ತಯಾರಿಕೆ, ಮ್ಯಾಜಿಕ್ ತಂತ್ರಗಳು ಹಾಗೂ ಕಾರ್ಟೂನ್ ಚಿತ್ರಗಳು, ಇ?ದ ಆಟಗಳು ಹಾಗೂ ಕಲೆ-ಕೌಶಲ್ಯ ಹೀಗೆ ಮಕ್ಕಳು ಬಯಸುವ ಪ್ರತಿಯೊಂದನ್ನೂ ಉಣಬಡಿಸುತ್ತಾ ಮಕ್ಕಳ ವಾಣಿ ಎಂದರೆ ಬೆಳ್ಳಂಬೆಳಗಿನ ಕಾಮನಬಿಲ್ಲು ಎನ್ನುವಂತಾಯಿತು. ಬೆಳಗಿನ ಹತ್ತೂವರೆ ಗಂಟೆ ಆಯಿತೆಂದರೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಒಂದ? ಕಾಗದ ಕತ್ತರಿ ಗೋಂದು ಪೆನ್ನು ಪುಸ್ತಕ ಎಲ್ಲವನ್ನೂ ಹಿಡಿದು ಕುಳಿತರೆ ಅರ್ಧ ಗಂಟೆ ಕಳೆದದ್ದೇ ತಿಳಿಯುತ್ತಿರಲಿಲ್ಲ. ಮಕ್ಕಳು ಕತೆಗಳನ್ನು ಕೇಳಿಸಿಕೊಂಡರು, ತಾವೇ ಹೇಳಿ ಆನಂದಿಸಿದರು. ಅವರು ಹೇಳಿದ ಕಥೆಗಳೂ ಮಕ್ಕಳ ವಾಣಿಯಲ್ಲಿ ಬಿತ್ತರಗೊಂಡವು. ಏನೂ ಮಾಡಲಾರದ ಸಂದಿಗ್ಧ ಸ್ಥಿತಿಯಲ್ಲಿದ್ದ ಮಕ್ಕಳು ಹಾಗೂ ಪೋ?ಕರ ಬೇಸರವನ್ನು ಬಿಡಿಸಿ ಅವರನ್ನು ಹ?ಚಿತ್ತರನ್ನಾಗಿಸಿದ ಹೆಗ್ಗಳಿಕೆ ಮಕ್ಕಳ ವಾಣಿಗೆ ಸಲ್ಲುವುದು.

Call us

ಶಿಕ್ಷಕರೇ ರೂವಾರಿಗಳು:
ಈ ಕಾರ್ಯಕ್ರಮವನ್ನು ನಿರೂಪಿಸುವವರು ಶಿಕ್ಷಕರೇ ಆಗಿರುವುದು ಹೆಮ್ಮೆಯ ವಿಚಾರ. ಜನಪ್ರಿಯ ನಿರೂಪಣಾ ಶೈಲಿಯನ್ನು ಅನುಕರಿಸದೆ ಆಪ್ತ ಮಾತುಕತೆಯಲ್ಲಿ ತೊಡಗುವ ಇವರೆಲ್ಲರ ನಿರೂಪಣೆಯ ಶೈಲಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ನಗುಮೊಗದ ಮಾತುಗಳು, ಚೆಂದದ ಕತೆಗಳು ಮತ್ತು ಮನಸೂರೆಗೊಳ್ಳುವ ಕ್ರಾಫ್ಟ್ ಗಳೊಂದಿಗೆ ನಿರೂಪಕರಾದ ಉದಯ ಗಾವಂಕಾರ ಮತ್ತು ಡಿ.ಸಿ ಉಮಾ ಬರುತ್ತಿದ್ದರೆ, ಪ್ರಯೋಗ, ಗಣಿತದ ಮೋಜುಗಳೊಂದಿಗೆ ಸುನಿತಾ ಮತ್ತು ಗುರುದತ್ ಮಕ್ಕಳ ಮೆಚ್ಚುಗೆ ಗಳಿಸಿದ್ದರು. ಮಕ್ಕಳ ವಾಣಿಯ ಶೀರ್ಷಿಕೆ ಗೀತೆ ಇನ್ನೂ ಬಹಳ ಸಮಯ ಎಲ್ಲರ ನಾಲಿಗೆಯಲ್ಲಿ ನಲಿದಾಡಲಿದೆ. ಈ ಗೀತೆಯ ಸಾಹಿತ್ಯ ಮೈಸೂರು ಡಯಟ್‌ನ ಉಪನ್ಯಾಸಕರಾದ ಪ್ರಶಾಂತ್ ಎಂ. ಸಿಯವರದು. ಸಂಗೀತ ನೀಡಿ ಹಾಡಿದವರು ಹರಿಕಾವ್ಯ. ಜೊತೆಯಾದವರು ವಿಭಾ ಅದಿತಿ ಆಚಾರ್ಯ.

ಮಧುರಾಣಿ ಎಚ್. ಎಸ್.

ತನ್ನ ಎಲ್ಲ ಬಣ್ಣಗಳನ್ನು ಐವತ್ತು ಕಂತುಗಳಲ್ಲಿ ಮೈವೆತ್ತು ಕೊನೆಗೊಂದು ದಿನ ಮುಕ್ತಾಯವಾದಾಗ ’ಅಯ್ಯೋ ಮುಗಿದೇ ಹೋಯ್ತಾ’ ಅಂತ ನಾವೆಲ್ಲಾ ಬಹಳ ಬೇಸರಗೊಂಡದ್ದಂತೂ ನಿಜ. ಶಿಕ್ಷಣದ ಅರ್ಥವು ವಿಶಾಲವಾದದ್ದು. ಕಲಿಕೆಯು ಕೇವಲ ಪುಸ್ತಕದಿಂದ ಆಗುವುದಿಲ್ಲ. ಬದುಕಿನ ಪಾಠಗಳನ್ನು ನೈಪುಣ್ಯತೆಯಿಂದ ತಲುಪಿಸುವುದೇ ನಿಜವಾದ ಶಿಕ್ಷಣ.

ಶಿಕ್ಷಣದ ಪರಿಪೂರ್ಣತೆಗೆ ಪೂರಕವಾಗಬಲ್ಲ ಮಕ್ಕಳ ವಾಣಿಯಂತಹ ಯುಟ್ಯೂಬ್ ಚಾನೆಲ್ ಒಂದನ್ನು ಸಾಧ್ಯವಾದಲ್ಲಿ ಹಾಗೇ ಉಳಿಸಿಕೊಂಡರೆ ಚೆನ್ನ ಎನ್ನುವುದು ನನ್ನಂತಹ ಹಲವು ನೋಡುಗರ ಹೆಬ್ಬಯಕೆಯಾಗಿದೆ. ಕುಂದಾಪ್ರ ಡಾಟ್ ಕಾಂ.

Leave a Reply

Your email address will not be published. Required fields are marked *

twenty − 8 =