‘ಮಲೆಯಾಳದ ಮಹಿಳಾ ಕಥನ’ಕ್ಕೆ ಅತ್ಯುತ್ತಮ ಅನುವಾದಿತ ಕೃತಿ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲೇಖಕಿ ಹಾಗೂ ನಿವೃತ್ತ ಪ್ರಾಧ್ಯಾಪಕಿ ಡಾ. ಪಾರ್ವತಿ ಜಿ. ಐತಾಳ್ ಅವರ ’ಮಲೆಯಾಳದ ಮಹಿಳಾ ಕಥನ’ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರ ಹೆಸರಿನಲ್ಲಿ ಕೊಡಮಾಡುವ ಅತ್ಯುತ್ತಮ ಅನುವಾದಿತ ಕೃತಿ -2018 ಪ್ರಶಸ್ತಿ ಲಭಿಸಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ಮಲೆಯಾಳ ಮತ್ತು ತುಳು-ಹೀಗೆ ಐದು ಭಾಷೆಗಳಲ್ಲಿ ಬರೆಯುವ ಪಾರ್ವತಿ ಐತಾಳ್ ಈ ಭಾಷೆಗಳ ನಡುವೆ ಪ್ರಸಿದ್ಧ ಲೇಖಕರ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರಲ್ಲದೆ, ಸ್ವತಂತ್ರವಾಗಿಯೂ ಸಣ್ಣಕಥೆ, ಕಾದಂಬರಿ, ವಿಮರ್ಶೆ, ನಾಟಕ ಮತ್ತು ವೈಚಾರಿಕ ಪ್ರಬಂಧ ಕೃತಿಗಳನ್ನು ಪ್ರಕಟಿಸಿದ್ದಾರೆ. ಇದುವರೆಗೆ 40 ಅನುವಾದಿತ ಕೃತಿಗಳು, 23 ಸ್ವತಂತ್ರ ಕೃತಿಗಳು, ನಾಲ್ಕು ಸಂಪಾದಿತ ಮತ್ತು ಸಹಲೇಖಕರಾಗಿ ೯ಕೃತಿಗಳನ್ನು ಪ್ರಕಟಿಸಿದ್ದಾರೆ. 8 ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವರಿಗೆ ಇತ್ತಿಚಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2018 ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿತ್ತು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

“ಮಲೆಯಾಳದ ಮಹಿಳಾ ಕಥನ” ಪುಸ್ತಕವನ್ನು ಬೆಂಗಳೂರಿನ ಸೃಷ್ಟಿ ಪಬ್ಲಿಕೇಶನ್ಸ್ ಪ್ರಕಟಿಸಿದ್ದು, ಜೂನ್ ೨೯ರಂದು ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಲಿದೆ.

Leave a Reply

Your email address will not be published. Required fields are marked *

16 + ten =