ಕುಂದಾಪುರವನ್ನು ತಲ್ಲಣಗೊಳಿಸಿದ್ದ ಭಿನ್ನಕೋಮಿನ ಪ್ರೇಮ ಪ್ರಕರಣದ ಭಾಸ್ಕರ್ ಕೊಠಾರಿ ಆತ್ಮಹತ್ಯೆಗೆ ಶರಣು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೊಂಬತ್ತರ ದಶಕದಲ್ಲಿ ಕುಂದಾಪುರದ ನಾಗರಿಕರು ಮೊದಲ ಭಾರಿಗೆ ಕಂಡಲ್ಲಿ ಗುಂಡು, ಕರ್ಪ್ಯೂನಂತಹ ಸನ್ನಿವೇಶವನ್ನು ಎದುರಿಸಲು ಕಾರಣವಾಗಿದ್ದ ಭಿನ್ನಕೋಮಿನ ಜೋಡಿಗಳ ಪ್ರೇಮ ಪ್ರಕರಣದ ಪ್ರೀಯತಮ, ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬಗೆಯ ನಿವಾಸಿ ಭಾಸ್ಕರ್ ಕೊಠಾರಿ (47) ಇಂದು ಆತ್ಮಹತ್ಯೆಗೆ ಶರಣಾದ ಖೇದಕರ ಘಟನೆ ನಡೆದಿದೆ.

ಮೃತ ಭಾಸ್ಕರ್ ಕೊಠಾರಿ ಅವರ ಸಹೋದರನ ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಬಳಿಕ ಮನೆಯ ಬಳಿ ಹುಡುಕಾಟ ನಡೆಸುತ್ತಿದ್ದಾಗ, ಬಾವಿಯ ನೀರೆತ್ತುವ ಪೈಪ್‌ನ ಹಗ್ಗ ತುಂಡಾಗಿರುವುದನ್ನು ಗಮನಿಸಿ ಅನುಮಾನಗೊಂಡು ಪರಿಶೀಲಿಸಿದಾಗ ಭಾಸ್ಕರ್ ಕೊಠಾರಿಯ ಶವ ಬಾವಿಯೊಳಕ್ಕೆ ಪತ್ತೆಯಾಗಿತ್ತು. ವಿಪರಿತ ಕುಡಿತದ ಚಟ ಹೊಂದಿದ್ದ ಅವರು ಇತ್ತಿಚಿಗಷ್ಟೇ ಕುಡಿತ ನಿಲ್ಲಿಸಿದ್ದರು. ಆ ಕಾರಣಕ್ಕೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ತಮ್ಮನ ಮನೆಯ ಗೃಹ ಪ್ರವೇಶದ ಬಳಿಕ ಮೃತರ ಮಡದಿ ಹಾಗೂ ಕುಟುಂಬಿಕರಿಗೆ ವಿಷಯ ತಿಳಿಸಲಾಗಿತ್ತು. ಶಂಕರನಾರಾಯಣ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರಿಸಿದ್ದಾರೆ.

ರಾಜ್ಯದಲ್ಲಿ ಸುದ್ದಿಯಾಗಿದ್ದ ಪ್ರೇಮ ಪ್ರಕರಣ:
ಕುಂದಾಪುರ ತಾಲೂಕಿನಲ್ಲಿ ನಡೆದ ಭಾಸ್ಕರ್ ಕೊಠಾರಿ ಹಾಗೂ ಮನಾವರ್ ಪ್ರೇಮ ಪ್ರಕರಣ ಕುಂದಾಪುರದಲ್ಲಿ ತಲ್ಲಣ ಮೂಡಿಸಿದ್ದಲ್ಲದೇ, ‘ಕೊಠಾರಿ ಪ್ರೇಮ ಪ್ರಕರಣ’ವೆಂದೇ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. 1992ರಲ್ಲಿ ಅನ್ಯಕೋಮಿನ ಮುನಾವರ್ ಎಂಬುವವರನ್ನು ಪ್ರೀತಿಸಿ, ಇಬ್ಬರೂ ಪರಾರಿಯಾಗಿದ್ದರು. ಆದರೆ ಈತನನ್ನು ಅನ್ಯಕೋಮಿನವರು ಕೊಲೆಮಾಡಿದ್ದಾರೆಂಬ ಸುಳ್ಳು ಸುದ್ದಿ ಹರಡಿದ್ದಲ್ಲದೇ, ಹುಡುಗಿಯೂ ನಾಪತ್ತೆಯಾಗಿದ್ದರಿಂದ ಈ ಸಂದರ್ಭ ಎರಡು ಕಡೆ ಪರಿಸ್ಥಿತಿ ಉದ್ವಿಘ್ನಗೊಂಡಿತ್ತು. ಕಂಡ್ಲೂರಿನ ಉದ್ಯಮಿಯೋರ್ವರ ತೋಟವನ್ನ ಸಂಪೂರ್ಣ ಹಾನಿಗೊಳಿಸಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. 

ಅಂದಿನ ಮಂಗಳೂರು ಎಸ್ಪಿಯಾಗಿದ್ದ ಎಸ್.ಎಮ್ ಪವಾರ್ ಹಾಗೂ ಕುಂದಾಪುರಕ್ಕೆ ಡಿವೈಎಸ್‌ಪಿಯಾಗಿದ್ದವರು ದಳಗಾರ್ ಅವರ ನೇತೃತ್ವದಲ್ಲಿ ಕಾರ‍್ಯಾಚರಣೆ ನಡೆಸಿದ ಪೊಲೀಸರು ಕಾಪುವಿನಲ್ಲಿ ಈ ಜೋಡಿಯನ್ನು ಪತ್ತೆ ಮಾಡಿ ಕುಂದಾಪುರಕ್ಕೆ ತರೆತಂದಿದ್ದರು. ಬಳಿಕ ನ್ಯಾಯವಾದಿ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ಕುಂದಾಪುರದ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಲಾಗಿತ್ತು. ಮುನಾವರ್, ಆಶಾ ಎಂದು ಹೆಸರು ಬದಲಿಸಿಕೊಂಡು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೆ ಮದುವೆಯ ಬಳಿಕ ವಿಪರೀತ ಕುಡಿತದ ಚಟ ಹೊಂದಿದ್ದ ಭಾಸ್ಕರ್ ಹಾಗೂ ಆಶಾ ಅವರ ಕೌಟುಂಬಕ ಜೀವನ ಕಷ್ಟದಿಂದಲೇ ಸಾಗಿತ್ತು. ದಂಪತಿಗೆ ಆರು ವರ್ಷದ ಹೆಣ್ಣು ಮಗುವಿದ್ದು, ಆಶಾ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು.ಕುಂದಾಪ್ರ ಡಾಟ್ ಕಾಂ ಸುದ್ದಿ. 

Leave a Reply

Your email address will not be published. Required fields are marked *

four × two =